ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

70
ಅರ್ಪಿಸಿದರು, ಲಿಂಗಕ್ಕೆ ಮನವನ್ನು ಅರ್ಪಿಸಿದರು. ಜಂಗಮಕ್ಕೆ ಧನವನ್ನು ಅರ್ಪಿಸಿದರು. ಈ ಬಗೆಯಾಗಿ ಜಂಗಮಾರಾಧನೆಯು ಬಸವಣ್ಣನವರ ಭಕ್ತಿಯ ಸಾಧನದ ಒಂದು ಪ್ರಧಾನ ಅಂಗವಾಗಿದ್ದಿತು. ಇಷ್ಟೇ ಅಲ್ಲ, 'ಆತ್ಮ ಲಿಂಗ, ಪರಮಾತ್ಮ ಜಂಗಮ' ಎಂಬುದು ಅವರ ಭಾವನೆ. 'ಜಂಗಮವೇ ಲಿಂಗವೆನಗೆ, ಜಂಗಮವೇ ಪ್ರಾಣ ಎನಗೆ' ಎಂದು ಅವರು ಬಗೆದಿದ್ದರು. 'ಮರಕ್ಕೆ ಬಾಯಿ ಬೇರಿರುವಂತೆ, ಲಿಂಗದ ಬಾಯಿ ಜಂಗಮ' ಇರುವ. ಆತನಿಗೆ ನೀಡಿದರೆ ಲಿಂಗವು ತೃಪ್ತವಾಗುವದು, ಎಂಬುದು ಅವರ ಬೋಧೆ.
ಜಂಗಮಕ್ಕೆ ಇಷ್ಟು ಪ್ರಾಧಾನ್ಯ ಕೊಡುವದರಲ್ಲಿ ಆತ್ಮೋದ್ಧಾರದ ಜತೆಗೆ ಲೋಕೋದ್ಧಾರದ ಉದ್ದೇಶವೂ ಇರುವ ಸಂಭವ ಇಲ್ಲದಿಲ್ಲ. ಜಂಗಮರು ನಾಡಿನಲ್ಲೆಲ್ಲ ಅಲೆದಾಡಿ, ಜನರನ್ನು ಬೋಧಿಸುವರು, ಉದ್ಧರಿಸುವರು. ಕೇವಲ ಲೋಕೋದ್ಧಾರನಿರತರಾದ ಈ ಶರಣರ ಯೋಗಕ್ಷೇಮವನ್ನು ನೋಡುವದು ಎಲ್ಲ ಭಕ್ತರ ಕರ್ತವ್ಯ. ಬಸವಣ್ಣನವರ ಮತಪ್ರಸಾರದ ಕಾರ್ಯದಲ್ಲಿ ಜಂಗಮರೇ ಪ್ರಧಾನಪಾತ್ರ ವಹಿಸಿರುವರು. ಅವರಿಗೆ ಬಸವಣ್ಣನವರು ಇಷ್ಟು ಗೌರವ ಸಲ್ಲಿಸಿದುದರಿಂದ ಜನತೆಯು ಅವರ ಬೋಧೆಯನ್ನು ಆದರದಿಂದ ಕೇಳಿಕೊಂಡಿತು, ಅದರಂತೆ ನಡೆಯಲು ಯತ್ನಿಸಿತು. ಜಂಗಮರಲ್ಲಿ ಸ್ವಂತ ತಪಃಪ್ರಭಾವವೂ ಇಲ್ಲದಿರಲಿಲ್ಲ. ಬಸವಣ್ಣನವರು ಅವರಿಗೆ ಸಲ್ಲಿಸಿದ ಗೌರವವು ಅವರ ಪ್ರಭಾವವನ್ನು ಮತ್ತಷ್ಟು ಬೆಳಗಿತು.
ಜಂಗಮ- ಪ್ರಾಣಿಗಳಾದ ಬಸವಣ್ಣನವರು ಅವರ ಬರವಿಗಾಗಿ ಹಾತೊರೆಯುತ್ತಿದ್ದರು. 'ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ, ಬಳಿ ತಪ್ಪಿದ ಪಶು ತನ್ನ ಹಿಂಡನರಸುವಂತೆ' ಅವರು ಶರಣರ ಬರವನ್ನು ಕಾಯುತ್ತಿದ್ದರು. ಶರಣರು ಬಂದಾಗ 'ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ' ಅವರು ಉಲ್ಲಸಿತರಾಗುತ್ತಿದ್ದರು. ತಮ್ಮ ಜಂಗಮಪ್ರೀತಿಯ ಉತ್ಕಟತೆಯನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :