ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
81

ತಮ್ಮ ಮಠಗಳನ್ನು ಸ್ಥಾಪಿಸಿದರು. ಅಲ್ಲಿ ತಮ್ಮ ಗೃಹಸ್ಥ ಭಕ್ತರನ್ನು ಮಠಪತಿಗಳೆಂದು ನಿಯಮಿಸಿದರು. ಈ ಮಠಪತಿಗಳು ಸುತ್ತಲಿನ ಗ್ರಾಮಗಳಲ್ಲಿಯ ಭಕ್ತರಲ್ಲಿ ಧರ್ಮ ಜಾಗೃತಿಯನ್ನೂ ಮತಪ್ರೀತಿಯನ್ನೂ ಉಳಿಸುವ ಹಾಗೂ ಬೆಳೆಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ವೀರಶೈವಮತವನ್ನು ಹೊಸದಾಗಿ ಸ್ವೀಕರಿಸಬಯಸುವ ಭಕ್ತರಿಗೆ, ಅವರು ದೀಕ್ಷೆಯನ್ನು ಕೊಟ್ಟು ಅವರಿಗೆ ಮತತತ್ತ್ವಗಳನ್ನೂ ಮತಾಚಾರಗಳನ್ನೂ ಕಲಿಸುತ್ತಿದ್ದರು. ಪುರಾಣ, ಪ್ರವಚನ, ಶಿವಭಜನೆ, ಶಿವಕೀರ್ತನೆಗಳ ಮುಖಾಂತರ ಜನರಲ್ಲಿ ಶಿವಭಕ್ತಿಯನ್ನು ಬೆಳೆಸುತ್ತಿದ್ದರು. ಜಂಗಮರು ಆಗಾಗ್ಗೆ ಈ ಮಠಪತಿಗಳ ಕೆಲಸದ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು. ಭಕ್ತರಾಗಲಿ ಮಠಪತಿಗಳಾಗಲಿ, ತಪ್ಪು ದಾರಿಯಿಂದ ನಡೆದುದನ್ನು ಅವರು ಕಂಡರೆ, ಅಂಥವರನ್ನು ಕರೆಯಿಸಿ, ಜಂಗಮರು ಅವರಿಗೆ ಬುದ್ದಿ ಹೇಳುತ್ತಿದ್ದರು. ಅದು ವಿಫಲವಾದರೆ ತಾವು ತಮ್ಮ ದೇಹದಂಡನೆಯಿಂದ ಅವರನ್ನು ತಿದ್ದಲು ಯತ್ನಿಸುತ್ತಿದ್ದರು. ಶರಣರ ಈ ಬಗೆಯ ಉನ್ನತ ಜೀವನ ಬೋಧೆಗಳ ಫಲವಾಗಿ ಆಧ್ಯಾತ್ಮಿಕ ತಳಹದಿಯ ಮೇಲೆ ನೆಲೆಸಿದ ಒಂದು ಭವ್ಯವಾದ ವೀರಶೈವ ಬಾಂಧವ್ಯವು ಕನ್ನಡನಾಡಿನಲ್ಲಿ ವೈಭವದಿಂದ ಮೆರೆಯತೊಡಗಿತು.
ಆದರೆ ಭಗವಂತನ ಲೀಲೆಯು ಅಗತ್ಯವಾದುದು, ಅಗಾಧವಾದುದು. ಆತನು ಅವನತಿಯ ಒಡಲಲ್ಲಿ ಉನ್ನತಿಯ ಬೀಜಗಳನ್ನು ಬಿತ್ತುವಂತೆಯೇ, ಉನ್ನತಿಯ ಉದರದಲ್ಲಿ ಅವನತಿಯ ಬೀಜಗಳನ್ನು ಬಿತ್ತುವ. ಸಾತ್ವಿಕರ ಅತಿರಿಕ್ತ ಔದಾರ್ಯ ಒಂದೆಡೆ, ಅದರ ದುರ್ಲಾಭಪಡೆವ ರಾಜಸ-ತಾಮಸರ ಅತಿರಿಕ್ತ ಸ್ವಾರ್ಥ ಇನ್ನೊಂದೆಡೆ. ಈ ಎರಡೂ ಮಾತುಗಳು ಅನರ್ಥಕ್ಕೆ ಔತಣವನ್ನು ಈಯುವವು. ಬಸವಣ್ಣನವರ ಅತ್ಯಂತಿಕ ಔದಾರ್ಯದ ಫಲವಾಗಿ ಪುಂಡರು, ಗುಂಡರು, ಮಿಂಡರು ಜಂಗಮರ ಬಳಗವನ್ನು ಸೇರಿದರು. ಬಸವಣ್ಣನವರು ಜಂಗಮರನ್ನೆಲ್ಲ ಸಂಗಮನಾಥನೆಂದು ಭಾವಿಸಿ ಆರಾಧಿಸುವದನ್ನು ಕಂಡು, ದುರುಳರು ಜಂಗಮರ ವೇಷ ಧರಿಸಿ, ಅದರ ದುರ್ಲಾಭ ಪಡೆಯಲು ಯತ್ನಿಸಿದರು. 'ಲಾಂಛನವ ಕಂಡು ನಂಬುವೆ,