ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

86

ಪ್ರಭುದೇವರಿಗೂ ತಿಳಿದೊಡನೆ, ಅವರು ಅಂಥವರಲ್ಲಿ ಪ್ರಮುಖರಾದ ಮಡಿವಳ ಮಾಚಯ್ಯ, ಜಗದೇವ, ಬೊಮ್ಮಣ್ಣ ಇತ್ಯಾದಿ ಕೆಲವರನ್ನು ಕರೆಯಿಸಿ, ಅವರಿಗೆ ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಡದಿರಲು, ತಾಳ್ಮೆಯಿಂದ ವರ್ತಿಸಲು ಬಿನ್ನವಿಸಿಕೊಂಡರು :

ತನುವಿನ ಕೋಪ ಹಿರಿಯತನದ ಕೇಡು.
ಮನದ ಕೋಪ ತನ್ನ ಅರುಹಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ !

ಎಂದು ಅವರನ್ನು ಬೇಡಿಕೊಂಡರು. ಆದರೆ ಅದರ ಪರಿಣಾಮವೇನೂ ಆಗಲಿಲ್ಲ, ಅವರು ತಮ್ಮ ಹಟವನ್ನು ಬಿಡಲಿಲ್ಲ. ಅದನ್ನು ಕಂಡು ಬಸವಣ್ಣನವರು ತುಂಬ ನೊಂದುಕೊಂಡರು. ಅವರನ್ನು ಶಾಂತಗೊಳಿಸುವ ಪ್ರಭುದೇವರ ಯತ್ನವೂ ವಿಫಲವಾಯಿತು. ಅದರಿಂದ ಅತಿಯಾಗಿ ದುಃಖಿತರಾದ ಪ್ರಭುದೇವರು,

ನಾನೊಂದು ನುಡಿದರೆ, ತಾವೊಂದು ನುಡಿವರು.
ತಾವೊಂದು ನುಡಿದರೆ, ನಾನೊಂದು ನುಡಿವೆನು.
ಇದು ಕಾರಣ ಅವರಿಗೆ ನಮಗೆ ಮೇಳವಿಲ್ಲ.
ಮೇಳವಿಲ್ಲದ ಬಳಿಕ ಅನುಭವಗೋಷ್ಠಿಯಿಲ್ಲ.
ಅನುಭವಗೋಷ್ಠಿಯಿಲ್ಲದ ಬಳಿಕ ಗುಹೇಶ್ವರನು ಇಲ್ಲಿಲ್ಲ ಕೇಳಾ.

ಎಂದು ತಮ್ಮ ಅಂತರಂಗದ ದುಗುಡವನ್ನು ಚೆನ್ನಬಸವಣ್ಣನವರಿಗೆ ಅರುಹಿದರು.

ಮಹಾಸಮಾಧಿ : (ಕ್ರಿ.ಶ. ೧೧೬೮)

“ಬಸವಣ್ಣನವರ ಉತ್ಸಾಹಜ್ಯೋತಿಯು ತಣ್ಣಗಾಯಿತು. ಹೃದಯವು ನೈರಾಶ್ಯದಿಂದಲೂ ದುಃಖದಿಂದಲೂ ತುಂಬಿತು.ತಮ್ಮ ಕಾರ್ಯಕಲಾಪಗಳ ಅವಸಾನಕಾಲವನ್ನು ಅವರು ನೋಡಿದರು. ಬೆಳೆಯದ ಮುನ್ನ ಕೊಯ್ಯುವ ನೋಟವು ಕಣ್ಣಿಗೆ ಕಟ್ಟಿಬಿಟ್ಟಿತು.