ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
46

ಕಾರಣವನ್ನೂ ಬಸವಣ್ಣನವರ ಪರಿಚಯವನ್ನೂ ಈ ರೀತಿ ಅರಿಕೆ ಮಾಡಿದನು:

"ಅರಸರೇ! ಇವರು ಬಸವಣ್ಣನವರು. ಸದ್ಗುರುಗಳಿಂದ ಬಂದಿರುವರು. ತಮಗೆ ಇವರ ಪರಿಚಯವನ್ನು ಮಾಡಿಕೊಡಲು ಗುರುಗಳು ನನಗೆ ಆಜ್ಞಾಪಿಸಿರುವರು. ಇವರು ಲೌಕಿಕ ವಿದ್ಯೆಯಲ್ಲಿಯೂ ಪಾರಮಾರ್ಥಿಕ ವಿದ್ಯೆಯಲ್ಲಿಯೂ ಪಾರಂಗತರು. ಅಪ್ರತಿಮ ಬುದ್ಧಿಶಾಲಿಗಳು, ಗಣಿತಶಾಸ್ತ್ರವಿಶಾರದರು. ಕುಶಲ ಕರಣಿಕರು, ಅದೇ ಮೇರೆಗೆ ಇವರು ಸಂಗನ ಕರುಣವನ್ನು ಪಡೆದ ಭಕ್ತವರರು, ಶರಣರು, ಕಾರಣಿಕರು. ಇವರನ್ನು.."

ಸಿದ್ಧರಸನು ಆತನನ್ನು ತಡೆದು ಅಂದನು: "ಇರಲಿ, ಬಾಚರಸಾ! ಮುನಿಗಳು ನನಗಿದನ್ನೆಲ್ಲ ಅರುಹಿರುವರು. ಇವರೀಗ ನಮ್ಮಲ್ಲಿಯೇ ಇರಲಿ, ಇವರ ಮುಂದಿನ ವಿಚಾರವನ್ನೆಲ್ಲ ನಾವು ನೋಡಿಕೊಳ್ಳುವೆವು. ತರುವಾಯ ಬಸವಣ್ಣನವರ ಕಡೆ ಹೊರಳಿ, 'ಏನು ಬಸವಣ್ಣನವರೇ! ನಮ್ಮಿ ಬಿನ್ನಹವನ್ನು ದಯವಿಟ್ಟು ಮನ್ನಿಸಬಹುದೇ? ಎಂದು ಕೇಳಿದನು.

ಆಗ ಬಸವಣ್ಣನವರು ಬಾಚರಸನೆಡೆ ನೋಡಿದರು. ಅವರ ಆಶಯವನ್ನು ಅರಿತ ಬಾಚರಸನೆಂದ:

"ಅರಸರೇ, ಬಸವಣ್ಣನವರು ಕಾಯಕಜೀವಿಗಳು. ಅವರಿಗೆ ಒಂದು ಕೆಲಸ ನೋಡಿ ಕೊಡಿ. ಅಂದರೆ ಅವರು ತಮ್ಮ ಬಳಗದವರನ್ನು ಸಂಗಮದಿಂದ ಕರೆತರಿಸಿ, ಸ್ವತಂತ್ರವಾಗಿ ಮನೆ ಮಾಡಿಕೊಂಡು ಇರಬಹುದು. ಅಲ್ಲಿಯವರೆಗೆ ಅವರು ನಮ್ಮಲ್ಲಿಯೇ ಉಳಿದುಕೊಳ್ಳುವರು. ಅದನ್ನು ಕೇಳಿ ಸಿದ್ದರಸನೆಂದ: "ಆಗಲಿ, ಅವರ ಇಷ್ಟದಂತೆಯೇ ಆಗಲಿ, ನಾನು ಆಗ್ರಹ ಮಾಡುವದಿಲ್ಲ ಕೆಲಸವೇನು? ನಾಳಿನಿಂದಲೇ ಅವರು ನಮ್ಮ ಲೆಕ್ಕಪತ್ರಗಳನ್ನೆಯೇ ನೋಡಿಕೊಳ್ಳಲಿ. ನಾನು ಅವರು ಬಯಸಿದ ಸಂಬಳವನ್ನು ಕೊಡಬಲ್ಲೆ ಮುಂದೆ ಅವರಿಗೆ ಬಿಜ್ಜಳರಾಯನ ಪರಿಚಯವನ್ನು ಮಾಡಿಕೊಡುವೆ.