ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
45

ಬರಲಿರುವ. ಆತನು ಕಾರಣಿಕಪುರುಷ. ಆತನನ್ನು ಸರಿಯಾಗಿ ಸತ್ಕರಿಸಿರಿ. ನಿಮ್ಮ ಇಷ್ಟವು ಫಲಿಸಬಹುದು.”
ಕಾಗದವು ಸಂಗಮದ ಈಶಾನ್ಯ ಮುನಿಗಳಿಂದ ಬಂದಿತ್ತು. ಮುನಿಗಳ ಹಿರಿಮೆಯನ್ನು ಚೆನ್ನಾಗಿ ಅರಿತ ಸಿದ್ಧರಸನು ಅಂದಿನ ಕನಸಿನಲ್ಲಿಯ ಸಂದೇಶವು ಅವರಿಂದಲೇ ಬಂದಿರಬಹುದೆಂದು ಬಗೆದನು. ಕನಸಿನ ಮುಂದಿನ ಹಂತವನ್ನು ಕಾಣಲು ಆತುರನಾದನು. ಬೆಳಗಿನ ಫಲಾಹಾರದ ಸಿದ್ಧತೆಯನ್ನು ಮಾಡಿಡಲು ಆಜ್ಞಾಪಿಸಿ, ತನ್ನ ಸ್ನಾನಪೂಜಾದಿಗಳನ್ನು ಮುಗಿಸಿ ಬಸವಣ್ಣನವರ ಬರವನ್ನೇ ನಿರೀಕ್ಷಿಸುತ್ತ ಕುಳಿತುಕೊಂಡನು.
ಕೆಲ ಸಮಯ ಕಳೆದ ಮೇಲೆ ಸಿದ್ದರಸನು ನಿರೀಕ್ಷಿಸಿದ ಮೇರೆಗೆ ಬಸವಣ್ಣನವರು ಬಂದೇಬಿಟ್ಟರು. ಬಾಚರಸನು ಗುರುಗಳ ಆಜ್ಞೆಯ ಮೇರೆಗೆ ಅವರನ್ನು ಅಲ್ಲಿಗೆ ಕರೆತಂದಿದ್ದನು. ಮುನ್ನಾದಿನ ಸಾಯಂಕಾಲವೇ ಬಸವಣ್ಣನವರು ಕಲ್ಯಾಣವನ್ನು ತಲುಪಿ ಬಾಚರಸನ ಮನೆಯಲ್ಲಿ ಇಳಿದುಕೊಂಡಿದ್ದರು. ತನ್ನ ಗುರುಬಂಧುಗಳ ಆಗಮನದಿಂದ ಬಾಚರಸನಿಗೆ ಹಿಡಿಸಲಾರದ ಹಿಗ್ಗು ಅದರಲ್ಲಿ ಸದ್ಗುರುಗಳ ಕಾಗದ ಬೇರೆ. ಅದನ್ನೋದಿ ಬಸವಣ್ಣನವರ ಬಗೆಗೆ ಬಾಚರಸನಲ್ಲಿ ಭಕ್ತಿ ತುಂಬ ಬೆಳೆದವು. ಸದ್ಗುರುಗಳ ಆಜ್ಞೆಯ ಮೇರೆಗೆ ಕೊಂಚವೂ ತಡ ಮಾಡದೆ ಬೆಳಿಗ್ಗೆ ಎದ್ದೊಡನೆ ಆತನು ಬಸವಣ್ಣನವರನ್ನು ಸಿದ್ಧರಸನೆಡೆ ಕರೆತಂದನು. ಮುನಿಗಳ ಸಂದೇಶವನ್ನು ಆಗಾಗ ಸಿದ್ಧರಸನಿಗೆ ಅವನು ಸಲ್ಲಿಸುತ್ತಿರುವ ಮೂಲಕ ಬಾಚರಸನು ಸಿದ್ಧರಸನಿಗೆ ತುಂಬ ಪರಿಚಿತ ಆಗಿದ್ದನು. ಬಾಚರಸನು ಬಸವಣ್ಣನವರೊಡನೆ ತಾನು ಬಂದುದನ್ನು ಸೇವಕನ ಮುಖಾಂತರ ಸಿದ್ಧರಸನಿಗೆ ತಿಳಿಸಿದನು. ಕೂಡಲೇ ಸಿದ್ಧರಸನು ಅವರನ್ನು ಒಳಗೆ ಕರೆಯಿಸಿಕೊಂಡನು.
ಬಾಚರಸ-ಬಸವಣ್ಣನವರು ಒಳಗೆ ಬಂದೊಡನೆ ಅರಸನನ್ನು ವಿನಯದಿಂದ ವಂದಿಸಿ, ಅರಸನು ತೋರಿಸಿದ ಆಸನಗಳ ಮೇಲೆ ಕುಳಿತುಕೊಂಡರು. ಆಗ ಬಸವಣ್ಣನವರ ಅಲೌಕಿಕ ಕಾಂತಿಯು ಸಿದ್ಧರಸನನ್ನು ಕೂಡಲೇ ಮುಗ್ಧಗೊಳಿಸಿತು. ಬಾಚರಸನು ತಮ್ಮ ಬರವಿನ