ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
34
ಮಾರುಮಾಲೆ

ತಾಳಮದ್ದಲೆಯಲ್ಲಿ,ಭಾಗವತಿಕೆಯೊಂದಿಗೆ ಚಂಡೆ, ಮದ್ದಲೆಗಳೆರ ಡನ್ನೂ ಅಳವಡಿಸಿದಾಗ ಅದು ಪೂರ್ಣವಾದ ಹಿಮ್ಮೇಳ. ಆದರೆ, ಮದ್ದಲೆ ಯನ್ನು ಮಾತ್ರ ಬಳಸಿ ತಾಳಮದ್ದಲೆಯನ್ನು ಪ್ರದರ್ಶಿಸುವ ಸಂಪ್ರದಾಯವೂ ಇದೆ. ಬಡಗುತಿಟ್ಟಿನ ಹಿಮ್ಮೇಳದಲ್ಲಿ ಭಾಗವತಿಕೆ ಮತ್ತು ಮದ್ದಲೆ ಇವೆರಡೇ ಇದ್ದು, ಚೆಂಡೆ ಇಲ್ಲದಿದ್ದಾಗಲೂ ಕೊರತೆ ಅಷ್ಟಾಗಿ ಕಾಣಿಸುವುದಿಲ್ಲ. ಆದರೆ ತೆಂಕುತಿಟ್ಟಿನ ಹಿಮ್ಮೇಳವಿದ್ದಾಗ, ಚೆಂಡೆಯು ತಾಳಮದ್ದಲೆಗೆ ಅನಿವಾರ್ಯ ವಾಗಿಯೇ ಕಾಣುತ್ತದೆ. ಇದೊಂದು ವಿಚಾರಣೀಯ ವಿಷಯ. ಬಡಗುತಿಟ್ಟಿ ನಲ್ಲಿ ಏರುಪದ್ಯಗಳನ್ನು ಹೇಳುವ ಕ್ರಮ ಮತ್ತು ಅವುಗಳಿಗೆ ಬಡಗಿನ ಮದ್ದ ಲೆಯ ಬಾರಿಸುವಿಕೆಯಲ್ಲಿರುವ ಹೆಚ್ಚು ನಿಬಿಡವಾದ ಪೆಟ್ಟುಗಳ ಸರಣಿ ಇದಕ್ಕೆ ಕಾರಣಗಳಿರಬಹುದು. ಪದ್ಯದ ಮೊದಲ ಚರಣದ ಕೊನೆಗೆ ಬಾರಿಸುವ “ಬಿಡ್ತಿಗೆ'ಯೂ ಬಡಗುತಿಟ್ಟಿನಲ್ಲಿ ಬಂದು ಮುಕ್ತಾಯದಷ್ಟು ಇರುತ್ತದೆ. ತೆಂಕು ತಿಟ್ಟಿನಲ್ಲಿ ಏರುಪದ್ಯಗಳನ್ನು (ಅಂದರೆ ವೀರ, ರೌದ್ರ, ಇತ್ಯಾದಿ ಭಾವ ಗಳ ಪದ್ಯಗಳು) ಹೇಳುವ ತೀಕ್ಷ್ಣತೆ, ತೆಂಕುತಿಟ್ಟಿನ ಚೆಂಡೆಯ ನಾದಕ್ಕಿರುವ ಅಪೂರ್ವಝೇಂಕಾರ, ನಾದಸೌಷ್ಟವಗಳು, ಜಾಗಟೆಯ ನಾದಕ್ಕೆ ಅದು ಹೊಂದುವ ರೀತಿ ಇವುಗಳಿಂದ ತೆಂಕಣ ಹಿಮ್ಮೇಳದಲ್ಲಿ ಚೆಂಡೆ ಹೆಚ್ಚು ಮಹತ್ವ ಗಳಿಸುತ್ತದೆ.

ಅರ್ಥಗಾರಿಕೆಗೆ ಹೆಚ್ಚಿನ ಮಹತ್ವ ಇಲ್ಲದಿರುವ, ಹಾಡುಗಾರಿಕೆಗೆ, ವಾದ್ಯ ಗಳಿಗೆ (ಆಟದಲ್ಲಾದರೆ ಕುಣಿತಕ್ಕೆ) ಪ್ರಾಶಸ್ತ್ಯವುಳ್ಳ ಕೆಲವು ಪದ್ಯಗಳು ಎಲ್ಲ ಪ್ರಸಂಗಗಳಲ್ಲಿವೆ-ಉದಾ : ಸುಧನ್ವ ಕಾಳಗದಲ್ಲಿ ಪ್ರಭಾವತಿಯ ಪ್ರವೇಶದ ಪದ್ಯಗಳು, ಶ್ರೀಕೃಷ್ಣನು ಹಸ್ತಿನಾವತಿಯಿಂದ ಚಂಪಕಾವತಿಗೆ ಬಂದನೆಂಬ ಪದ್ಯಗಳು ಮುಂತಾದವು. ಅಂತೆಯೇ ಕತೆಯನ್ನು ಮುಂದಕ್ಕೆ ಸಾಗಿಸುವುದ ಕ್ಕಾಗಿಯೇ ಇರುವ, ಚುಟುಕಾದ ಅರ್ಥಗಾರಿಕೆ ಮಾತ್ರ ಅಪೇಕ್ಷಣೀಯವಾದ ಪದ್ಯಗಳೂ ಇವೆ. ಉದಾ: ರತಿಕಲ್ಯಾಣದಲ್ಲಿ ಮನ್ಮಥನಿಗಾಗಿ ವಧುವನ್ನು ಅನ್ವೇಷಿಸಲು ದೇಶಗಳನ್ನು ಸುತ್ತುವ ಪ್ರಸ್ತಾವದ ಪದ್ಯಗಳು, ಸುಭದ್ರಾ ಕಲ್ಯಾಣದ 'ಶರಸೇತು ಬಂಧನ'ದ ಪದ್ಯಗಳು ಮುಂತಾಗಿ, ಇಂತಹ ಪದ್ಯ ಗಳನ್ನು ತಾಳಮದ್ದಲೆಯಲ್ಲಿ ಹಾಡಬೇಕಾಗಿಲ್ಲ ಎಂಬ ಒಂದು ಭಾವನೆಯಿದೆ.