ಸಲ್ಲಬೇಕು ಎಂಬುದರಿಂದಲ್ಲ, ರಂಗಭೂಮಿಯ, ಕಲಾದೃಷ್ಟಿಯ ಬುದ್ಧಿ ಪೂರ್ವಕ ಕ್ರಿಯೆಯಿಂದ.
ತಾಳಮದ್ದಳೆಯ ಅರ್ಥಗಾರಿಕೆಯು, ಆಟದ ಅರ್ಥಗಾರಿಕೆಗಿಂತ ಭಿನ್ನ ಸ್ವರೂಪ, ವಿಸ್ತಾರವೂ ಆಗಿರಬೇಕಾಗುವುದು ಸ್ವಾಭಾವಿಕವೇ ಆದರೂ ಪದ್ಯಗಳ ನಡುವಿನ ಅಂತರವು ಬಹು ದೀರ್ಘವಾಯಿತೆನ್ನುವಂತೆ ಬೆಳೆದರೆ, ಅದೆಷ್ಟು ಸ್ವಾರಸ್ಯಕರವಾಗಿದ್ದರೂ, ಕಲಾದೃಷ್ಟಿಯಿಂದ ಅದು ಉಚಿತವಾಗಲಾರದು. ನಾದದ ಆವರಣ ಕೆಡುವಷ್ಟು, ಪದ್ಯದ ಪರಿಣಾಮ ಮರೆಯಾಗುವಷ್ಟು ಮಾತು ಬೆಳೆಯುವುದು ವಿಹಿತವಲ್ಲ.
ಹಾಗೆಯೇ, ಒಂದು ಪದ್ಯದ ಅರ್ಥವು ಮುಗಿದು ಮುಂದಿನ ಪದ್ಯದ ಎತ್ತುಗಡೆಗೆ ಬಂದು ನಿಲ್ಲುವಾಗ ಭಾಗವತನು ಕೂಡಲೇ ಪದ್ಯವನ್ನು ಎತ್ತಿ ಕೊಳ್ಳಬೇಕು. ಅರ್ಥ ಮುಗಿದು ಮುಂದಿನ ಪದ್ಯದ ಆರಂಭಕ್ಕೆ ನಾಲ್ಕಾರು ಸೆಕೆಂಡುಗಳಷ್ಟು ಸಮಯ ಕಳೆದು ಹೋದರೂ, ಏನೋ ಕಟ್ಟಿದಂತಾಗಿ ರಸಭಂಗವಾಗುತ್ತದೆ. ಮಾತು, ಗೀತೆಗಳ ನಿರಂತರತೆಯನ್ನು ಕಾಯ್ದುಕೊಳ್ಳು ವುದು ಹಿಮ್ಮೇಳದ ಹೊಣೆ. ಹಾಗೆಯೇ ಒಂದು ಪದ್ಯಕ್ಕೆ ಸಂಬಂಧಿಸಿದ ಮಾತು, ಯಾ ಸಂವಾದ ಮುಗಿದು ಮುಂದಿನ ಪದ್ಯದ ಆರಂಭಕ್ಕೆ ಬಂದು ತಲಪುವಲ್ಲಿ, ಏನೋ ಒಂದು ಹೊಸ ವಿಚಾರ ಹೊಳೆಯಿತೆಂದು (ಅದು ಪದ್ಯಕ್ಕೆ ಸಂಬಂಧಿಸಿದ್ದರೂ) ಅರ್ಥಧಾರಿ ಮಾತನ್ನು ಲಂಬಿಸಬಾರದು. ಮುಂದಿನ ಪದ್ಯಕ್ಕೆ ಬಂದು ಮುಟ್ಟಿದೊಡನೆ ಅದು ಬರಲೇಬೇಕು. ಇಲ್ಲ ವಾದರೆ ನಾಟಕಕ್ರಿಯೆಯನ್ನು ಹಿಂದೆಮುಂದೆ ಜಗ್ಗಿದಂತಾಗುತ್ತದೆ.
ಮುಂದಿನ ಪದ್ಯಕ್ಕೆ ಮಾತನ್ನು ಹೊಂದಿಸುವಲ್ಲಿ, ಎತ್ತುಗಡೆಗೆ ಸಂದರ್ಭ ನೀಡುವ (ಎತ್ತುಗಡೆ) ರೀತಿ, ಶೈಲಿಯಲ್ಲಿ ಅರ್ಥಧಾರಿಗಳ ಶೈಲಿ ಬೇರೆಬೇರೆ ಯಾಗಿರುತ್ತದೆ. ಅಥವಾ ಒಬ್ಬನೇ ಅರ್ಥದಾರಿ ಬೇರೆ ಬೇರೆ ಕ್ರಮಗಳನ್ನೂ ಅನುಸರಿಸಬಹುದು.20 ಒಬ್ಬನು ನೇರವಾಗಿ ಮುಂದಿನ ಪದ್ಯದ ಆರಂಭಕ್ಕೆ ನೇರವಾಗಿ ಬಂದು, ಅಲ್ಲಿನ ಒಂದು ಶಬ್ದವನ್ನು ಎತ್ತಿಕೊಳ್ಳಬಹುದು.