ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳುಯಕ್ಷಗಾನ ನಿನ್ನೆ-ಇಂದು-ನಾಳೆ
57

ಸಪ್ರಮಾಣವಾಗಿ ಬೆರೆತ ವ್ಯವಸ್ಥಿತ ವಿಮರ್ಶೆ ಬೆಳೆಯಲಿಲ್ಲ. ಮಾರ್ಗದರ್ಶ ನದ ಅಭಾವ ಮತ್ತು ವ್ಯಾವಸಾಯಿಕ ಅವಸರದ ಹೊಯ್ಲಿನಲ್ಲಿ ತುಳುಯಕ್ಷ ಗಾನ ರಂಗ, ಒಂದು ಬಗೆಯ ದಿಕ್ಕಿಲ್ಲದ ನಡೆಯಲ್ಲಿ ವೇಗವಾಗಿ ಸಾಗಿತು. ಹೊಸ ತನವು ತಂದಿತ್ತ ಸವಾಲುಗಳನ್ನು ಗಂಭೀರವಾಗಿ ಸ್ವೀಕರಿಸಿ, ಯಕ್ಷಗಾನ ಪ್ರದ ರ್ಶನಗಳು, ತುಳುಭಾಷೆ ಮತ್ತು ಯಕ್ಷಗಾನ ಕಲಾಸ್ವರೂಪ ಇವೆರಡರ ಉಚಿತ ವಾದ ಸಮನ್ವಯವಾಗಿ ರೂಪುಗೊಳ್ಳುವುದು ಹೇಗೆ ಎಂಬ ಬಗೆಗೆ ಚಿಂತನ ನಡೆಯಲಿಲ್ಲ. ಶೈಲಿಬದ್ದ ಕಲೆಯೊಂದರಲ್ಲಿ, ಪ್ರೌಢವಾದ ಪ್ರಯೋಗವೆಂಬುದು ಹೇಗಿರಬೇಕು, ಹೇಗಿರುತ್ತದೆ ಎಂಬ ಪೂರ್ವಭಾವಿ ತಾತ್ವಿಕ ಮತ್ತು ಪ್ರಾಯೋ ಗಿಕ ಪರಿಜ್ಞಾನವು ಇಲ್ಲದಿದ್ದುದರಿಂದ, ತುಳು ಯಕ್ಷಗಾನ ರಂಗವು ಕಲಾ ಸಿದ್ಧಾಂತದ ಗಟ್ಟಿ ಅಡಿಪಾಯವಿಲ್ಲದೆ ರೂಪುಗೊಂಡ 'ಜನಪ್ರಿಯ' ಕಲೆ ಮಾತು ಆಯಿತು. ಹೀಗೆ ತುಳು ಯಕ್ಷಗಾನ ರಂಗಪ್ರಯೋಗ ರೂಪುಗೊಳ್ಳುವಾಗ ಮತ್ತು ಪ್ರದರ್ಶನಗೊಂಡು, ನಿಧಾನವಾಗಿ, ತೆಂಕುತಿಟ್ಟು ಯಕ್ಷಗಾನದ ಬಹ್ವಂಶ ವನ್ನು ಆವರಿಸಿದಾಗ, ಅದು ಕಲೆಯ ಶೈಲಿ ಮತ್ತು ನಾವೀನ್ಯ, ಭಾಷೆ ಮತ್ತು ರೂಪ, ವಸ್ತು ಮತ್ತು ಶೈಲಿ, ವ್ಯವಸಾಯ ಮತ್ತು ಸಂಪ್ರದಾಯ-ಹೀಗೆ ವಿಭಿನ್ನ ಮುಖಗಳಲ್ಲಿ, ಪರಸ್ಪರ ಸಂಬಂಧ, ಪರಿಣಾಮಗಳ ಕುರಿತು ಸಹಜ ವಾಗಿ ಸಮಸ್ಯೆಗಳನ್ನು ಮುಂದಿಟ್ಟಿತು. ಇವುಗಳನ್ನು ತುಳುಯಕ್ಷಗಾನ ನಿರ್ಮಿಸಿದ ದ್ವಂದ್ವಗಳು, ಎಂಬ ನೆಲೆಯಲ್ಲಿ ಅಭ್ಯಸಿಸಬಹುದು.

ಯಕ್ಷಗಾನದಲ್ಲಿ ತುಳುಭಾಷಾ ಪ್ರಯೋಗಗಳು, ಈ ಕೆಳಗಿನ ದ್ವಂದ್ವ ಗಳನ್ನು, ವೈರುದ್ದ್ಯಗಳನ್ನು, ತೆರೆದು ತೋರಿದುವು ಮತ್ತು ಅವುಗಳ ಸಮನ್ವ ಯದ ದಿಕ್ಕಿನಲ್ಲಿ ಚಿಂತನೆಗೆ ಪ್ರೇರಣೆ ನೀಡಿದುವು :

ಭಾಷೆ × ಶೈಲಿ
ನಾಟಕ × ಯಕ್ಷಗಾನ
ಶಿಷ್ಟ x ಜಾನಪದ