ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
84
ಮಾರುಮಾಲೆ

ಲಿಖಿತವಾದ ಸಿದ್ಧ ಪಾಠವಿರುವ ನಾಟಕದ ಪ್ರದರ್ಶನದಲ್ಲಿ, ನಿರ್ದೇಶಕನ ಕಲ್ಪನೆ, ನಟನ ಯೋಗ್ಯತೆಗಳಿಗನುಸರಿಸಿ ಎಷ್ಟೊಂದು ಭಿನ್ನವಾದ ರಂಗಕೃತಿ- ರಂಗಪ್ರದರ್ಶನ ಸಾಧ್ಯ ಎಂಬುದು ಆಧುನಿಕ ನಾಟಕ ರಂಗದಲ್ಲಿ ಪ್ರಸಿದ್ಧ. ಹೀಗಿರುವಾಗ, ಸಿದ್ಧವಾದ ಸಾಹಿತ್ಯವಿಲ್ಲದೆ ಅರ್ಥಗಾರಿಕೆಯಲ್ಲಿ ಅದೆಷ್ಟು ಪ್ರಮಾಣದಲ್ಲಿ, ಅದೆಷ್ಟು ವಿಧಗಳಲ್ಲಿ ರಚನಾ ವೈವಿಧ್ಯ ಸಾಧ್ಯ ಎಂಬುದನ್ನು ವಿವರಿಸಬೇಕಿಲ್ಲವಷ್ಟೆ. ಪ್ರಸಂಗವೆಂಬುದು ಒಂದು ದ್ರವ್ಯ ಮಾತ್ರ, ಒಂದು ಹಂದರ ಅಷ್ಟೆ. ಚಿತ್ರರಚನೆ, ವಿನ್ಯಾಸ ನಿರ್ಮಾಣ, ರಂಗಪಾಠದ ಸೃಷ್ಟಿ-ಕಲಾವಿದನಿಗೆ ಸೇರಿದ್ದು. ಅರ್ಥಧಾರಿ ಅನುವಾದಕನಲ್ಲ. ಅವನದು ಅನುಸೃಷ್ಟಿ, ಪ್ರತಿಸೃಷ್ಟಿಯೂ ಹೌದು. ಅವನ ಕೆಲಸವನ್ನು 'ಅನು-ಪಾಕ' ಎನ್ನೋಣವೆ ? ಅದರಲ್ಲಿ, ಮೇಲೆ ಪ್ರಸ್ತಾವಿಸಿದ ಎಲ್ಲ ಘಟಕಗಳಲ್ಲಿ, ಕಲಾವಿದನ ಪ್ರತಿಭೆ, ಅಭ್ಯಾಸ, ಅಭಿವ್ಯಕ್ತಿಗಳು ಬಹುಮುಖ್ಯವಾದ ಕಾರಕ. ಅದಕ್ಕೆ ಆಕಾಶವೇ ಮಿತಿ.
“ಶರಸೇತು ಬಂಧ'ಕ್ಕೆ ಹಿಂತಿರುಗೋಣ, ಈ ವಸ್ತುವಿಗೆ 'ಅರ್ಜುನ ಗರ್ವಭಂಗ' ಎಂಬ ಅರ್ಥ ಇದೆ, ಆಗಬಹುದು ಎಂದೆವು. ಅದೇ ಆಗ ಬೇಕೆಂದಿಲ್ಲ ಎಂಬುದು ಮುಖ್ಯ. ಅದು ಹನುಮಂತನ ಗರ್ವಭಂಗ, ಅಥವಾ ಇಬ್ಬರಿಗೂ ಗರ್ವಭಂಗ ಮೂಲಕ ಹೊಸ ಅನುಭವದ ಸಾಕ್ಷಾತ್ಕಾರ ಅಥವಾ ಅದರ ಜತೆಯಾಗಿಯೇ, ಕೃಷ್ಣನ ಸಂಕಲ್ಪ ಮೂಲಕ ಭಕ್ತರೊಳಗೆ 'ಸೇತು ಬಂಧ'-ಹೀಗೆಲ್ಲ, ಮತ್ತೂ ಏನೋ ಎಲ್ಲ ಆಗಬಹುದು ಇರಲಿ. ಸಧ್ಯಕ್ಕೆ ಗ್ರಹೀತವಾಗಿರುವಂತೆ, ಅರ್ಜುನನ ಪಾತ್ರದ ಬಗೆಗಿರುವ ಕಲ್ಪನೆ, ಅಂತೆಯೇ ಅವನು ಹನುಮಂತನನ್ನು ಕೆಣಕಿದುದರಿಂದ ಅವನಿಗೊದಗಿದ ದುಃಸ್ಥಿತಿ, ಮತ್ತು ಅದರ ಇನ್ನೊಂದು ಮುಖವಾಗಿ ಎಂಬಂತೆ, ಹನುಮಂತನು ಇಲ್ಲಿ ಒಂದು ಆದರ್ಶ ಪಾತ್ರ ಎಂಬ ಧೋರಣೆ-ಇವು ಪೂರ್ಣವಾಗಿ ಸರಿಯೇ ? ಅಥವಾ ಇದಕ್ಕೆ ಭಿನ್ನವಾದ ಅರ್ಥಕ್ಕೆ ಆಸ್ಪದ ನೀಡುವ ಅಂಶಗಳು ಪ್ರಸಂಗದ ಒಳಗೆ ಇವೆಯೆ ಎಂಬುದನ್ನು ನೋಡಬಹುದು. ಪರಂಪರೆಯಿಂದ ಬಂದಿರುವ ಹನುಮಂತನ ಕಲ್ಪನೆಯಿಂದ, 'ಶರಸೇತು ಬಂಧನ'ದ ಹನುಮಂತನನ್ನು ನಾವು ಚಿತ್ರಿಸಿಕೊಂಡರೆ, ಅದು ಪೂರ್ತಿಯಾಗಿ ಸಮರ್ಪಕವಾಗಲಾರದು, ಮಾತ್ರವಲ್ಲ,