ಎಂದು ಕಾಣಬಾರದು. ಕಂಡರೆ, ಅದು ಪ್ರಯೋಗವಲ್ಲ, ಬದಲಾವಣೆ ಮಾತ್ರ ಆಗುತ್ತದೆ.
ಯಕ್ಷಗಾನದಲ್ಲಿ ಒಬ್ಬ ಹೊಸತಾದ ವೇಷವೊಂದನ್ನು ನಿರ್ಮಿಸಲು ಯೋಚಿಸುತ್ತಾನೆ ಎಂದಿಟ್ಟುಕೊಂಡರೆ, ಅವನಿಗೆ ಯಕ್ಷಗಾನದ ವೇಷಭೂಷಣಗಳ ಒಟ್ಟು ಸ್ವರೂಪದ ಮತ್ತು ಅದರ ಅಂಗೋಪಾಂಗ ರಚನೆಗಳ ಸರಿಯಾದ ಪರಿಚಯ, ಚಿತ್ರ ಶಿಲ್ಪಗಳ ತಿಳಿವು ಇರಬೇಕು. ಇಲ್ಲವಾದರೆ, ಪೇಟೆಯ ವಸ್ತುವೊಂದನ್ನು ತಂದು ಮೈಮೇಲೆ ಹಾಕಿಕೊಂಡಂತಾಗುತ್ತದೆ. ಒಂದು ಹೊಸ ನೃತ್ಯವನ್ನು ಸೃಷ್ಟಿಸ ಬೇಕೆಂದರೆ, ಯಕ್ಷಗಾನದಲ್ಲಿ ಇರುವ ಹೆಜ್ಜೆಗಳ ಪರಿಜ್ಞಾನವಿದ್ದರೆ ಮಾತ್ರ ಸಾಧ್ಯ.
ಪ್ರಯೋಗವೆಂಬುದು ತಾತ್ವಿಕವೂ ಆಗಬಹುದು, ತಾಂತ್ರಿಕವೂ ಆಗಬಹುದು (theoretical or technical). ಒಂದು ಹೊಸ ಪ್ರಸಂಗದ ಮೂಲಕ ಹೊಸ ಭಾವವನ್ನೂ, ಹೊಸ ಆಶಯವೊಂದನ್ನೂ ನೀಡುವ ಯತ್ನವನ್ನು ಒಬ್ಬನು ಮಾಡುವನಾದರೆ, ಅಂತಹ ಪ್ರಯತ್ನವನ್ನು ಅವನು ಯಕ್ಷಗಾನ ಪ್ರಸಂಗ ಪರಂಪರೆಯ ಸಾಮಾನ್ಯ ಲಕ್ಷಣಗಳ ನೆರಳಿನಲ್ಲೇ ಮಾಡಬೇಕು.ಹೊಸ ಬಂಧಗಳನ್ನು ರಚಿಸುವುದಿದ್ದರೂ, ಪದ ಪ್ರಯೋಗ ಪರಂಪರೆಯಲ್ಲೂ, ಹಾಡುವಿಕೆಗೂ ಅದು ಸಂಪ್ರದಾಯಕ್ಕೆ ಹೊಂದಿ ಬರಬೇಕು. ಹೀಗೆ, ತಾತ್ವಿಕ ಪ್ರಯೋಗವೂ ತಾಂತ್ರಿಕ ದೃಷ್ಟಿಯನ್ನು ಅಪೇಕ್ಷಿಸುತ್ತದೆ.
ಕಲೆಯಲ್ಲಿ ಬಳಕೆಯಲ್ಲಿ ಇರುವ ಸಾಮಗ್ರಿಯನ್ನೇ, ಬೇರೊಂದು ವಿಧದಿಂದ ಸಂಯೋಜಿಸುವುದು, ಬಳಸುವುದು ಕೂಡಾ ಪ್ರಯೋಗವೇ, ಅಭಿವ್ಯಕ್ತಿಯಲ್ಲಿ ಹೊಸ ಪ್ರಯೋಜನವನ್ನು ಸಾಧಿಸುವ ಉದ್ದೇಶ ಅಲ್ಲಿರಬೇಕು. ಅಭಿವ್ಯಕ್ತಿ ಸಶಕ್ತವಾಗುವ ಧೋರಣೆಯಿಂದ ಮೂಡಿದ ರಚನೆ ಅದಾಗಬೇಕು.
ಇಂತಹ ಯಾವುದೇ ಸಿದ್ಧತೆಯಾಗಲಿ, ಪರಂಪರೆಯ ಸಮಗ್ರವಾದ ಗ್ರಹಿಕೆಯಾಗಲಿ ಇಲ್ಲದೆ ರೂಪಿಸಿದ 'ನಾವೀನ್ಯ'ವು ಕಲೆಗೆ ಎಂತಹ ಅನಾಹುತಗಳನ್ನು ತರಬಲ್ಲುದು ಎಂಬುದಕ್ಕೆ ಸಮಕಾಲೀನ ಯಕ್ಷಗಾನ, ಮುಖ್ಯವಾಗಿ