ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಇನ್ನೊಬ್ಬ ಅತಿಥಿ ಡಾ.ವಿಜಯನಾಥ ಭಟ್, 'ಕೌಂಡಿನ್ಯ ಅವರು ಜೋಶಿ ಯವರಿಗೂ ತನಗೂ ಬೆಳೆದುಬಂದ ಸ್ನೇಹದ ಪರಿಯನ್ನು ತಮ್ಮ ಮನೋಜ್ಞ ಕಾವ್ಯಾತ್ಮಕ,ವಿವರಣಾತ್ಮಕ ಭಾಷೆಯಲ್ಲಿ ಸೆರೆಹಿಡಿದು ಜೋಶಿಯವರ ಹಾಗೂ ಅವರ ಕುಟುಂಬದವರ ಸ್ನೇಹದ ಮಾಧುರ್ಯ, ಕಾಂತಿ, ಪ್ರಭೆಯನ್ನು ಓದುಗರಿಗೆ ಉಣ ಬಡಿಸಿದ್ದಾರೆ. ಅಕ್ಷರ ಅಕ್ಷರ ಪದ ಪದಗಳಲ್ಲೂ ಜೋಶಿಯವರ ಕುರಿತಾದ ಭಾವಪೂರ್ಣ ಪ್ರೀತಿ ಅಂತ ಅನ್ನಿಸಿದರೂ ಅದರಲ್ಲಿ ಇರುವ ಆತ್ಮೀಯತೆ, ಗುಣಗ್ರಾಹಿತ್ವ, ಪ್ರಾಮಾಣಿಕತನ, ಭಾಷೆಯ ಸೊಗಸು, ಕಣ್ಣಿಗೆ ಕಟ್ಟಿಕೊಡುವ ಚಿತ್ರಕಶಕ್ತಿ ಯಾವುದನ್ನೂ ಅಲ್ಲಗೆಳೆಯಲಾಗದು. ಜತೆ ಜತೆಗೆ ಜೋಶಿಯವರ ಅರ್ಥಗಾರಿಕೆಯ ಸಾಮರ್ಥ್ಯವನ್ನೂ ಅವರ ತರುಣ ವಯಸ್ಸಿನ ಅಯಸ್ಕಾಂತೀಯ ವ್ಯಕ್ತಿತ್ವವನ್ನೂ ಬಹುಸೊಗಸಾಗಿ ಓದುಗರ ಮುಂದೆ ಇಟ್ಟಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಎಂ.ರಾಘವ ನಂಬಿಯಾರ್ ಅವರು ಜೋಶಿಯರಿಗೂ ತಮಗೂ ಇರುವ ಆತ್ಮೀಯ ಸಂಬಂಧ ಮತ್ತು ಬಾಲ್ಯದ ಒಡನಾಟದ ಸಹಯಾತ್ರೆಯನ್ನು ನೆನಪಿಸಿಕೊಳ್ಳುತ್ತಾ ಯಕ್ಷಗಾನದ ಭವ್ಯತೆ, ಘನತೆ, ಗಾಂಭೀರ್ಯವನ್ನು ಕಾಳಿದಾಸ ಹೇಳಿದ 'ಆಕಾರಸದೃಶಃ ಪ್ರಜ್ಞ' ಶ್ಲೋಕದೊಂದಿಗೆ ಅನ್ವಯಿಸಿ ಅದರ ಔನ್ನತ್ಯ, ಹೆಗ್ಗಳಿಕೆಯನ್ನು ಕಾದುಕೊಳ್ಳುವಲ್ಲಿ ತಾಳಮದ್ದಳೆ ಅರ್ಥಧಾರಿಗಳ ಹಾಗೂ ವೇಷಧಾರಿಗಳ ಹೊಣೆಗಾರಿಕೆ ಬಹಳ ದೊಡ್ಡದು ಅಂತ ಹೇಳಿದರು. ಜತೆಗೆ ಮೊದಲ ದಿನದ ವಿಚಾರಗೋಷ್ಠಿಯಲ್ಲಿ ಪ್ರಸ್ತಾಪವಾದ `ಶ್ರುತಿಪ್ರಜ್ಞೆಯ ವಿಚಾರವನ್ನು ಎತ್ತಿಕೊಂಡು ಅದಕ್ಕೊಂದು ಸ್ಪಷ್ಟಿಕರಣವನ್ನು ನೀಡಿದ್ದಾರೆ. ಜೋಶಿಯವರಲ್ಲಿ 'ಶ್ರುತಿಪ್ರಜ್ಞೆ ಇಲ್ಲ ಎಂಬ ಅಂಶವನ್ನು ಒಪ್ಪಲಾಗದು ಅನ್ನುತ್ತಾ ಜೋಶಿ ಅಭಿನಂದನಾ ಸಮಾರಂಭದ ಎರಡೂ ದಿನ ನಡೆದ ತಾಳಮದ್ದಳೆಯಲ್ಲಿ ಜೋಶಿ ಎರಡು ಭಿನ್ನ ವಯೋಮಾನಗಳ ಭೀಷ್ಮನ ಪಾತ್ರವನ್ನು ವಹಿಸಿ ಶ್ರುತಿಬದ್ಧತೆಯನ್ನೂ, ಭಾವಪೂರ್ಣತೆಯನ್ನೂ ಪೂರ್ಣಪ್ರಮಾಣದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಅಂತೆಯೇ ಶ್ರೀ ಸೀತಾರಾಮ ಭಟ್ ದಾಮ್ಲ, ಶ್ರೀ ಪ್ರದೀಪಕುಮಾರ್ ಕಲ್ಕೂರ, ಡಾ. ಚಿದಾನಂದ ಗೌಡ, ಶ್ರೀ ಧನಂಜಯ ನೆಲ್ಯಾಡಿ, ಶ್ರೀ ಸುಬ್ರಾಯ ಸಂಪಾಜೆ, ಶ್ರೀ ಆರ್.ಎಸ್. ಗಿರಿ ಪ್ರೊ ಎಂ.ಎಲ್, ಸಾಮಗ, ವಾಸುದೇವರಂಗ ಭಟ್ಟ, ಶ್ರೀ ಎಂ. ಬಾಲಚಂದ್ರ ಡೋಂಗ್ರೆ, ಕೆ.ವಿ. ಅಕ್ಷರ, ಪ್ರೊ ಲೀಲಾವತಿ ಎಸ್. ರಾವ್,ಡಾ. ಸುಧೀರ ಶೆಟ್ಟಿ, ಡಾ. ಧರಣೀದೇವಿ ಮಾಲಗತ್ತಿ, ಅನಂತ ಪದ್ಮನಾಭ ಪಾಠಕ್ ಮೊದಲಾದವರು ಈ ಅಭಿನಂದನಾ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಡೀ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿದರು.

ಸಮಾರಂಭದ ಮೊದಲ ದಿನ ಡಾ. ಜೋಶಿಯವರನ್ನೊಳಗೊಂಡು 'ಭೀಷ್ಮ ವಿಜಯ' ತಾಳಮದ್ದಳೆ ಹಾಗೂ ಮರುದಿನ 'ಭೀಷ್ಮ ಪರ್ವ' ತಾಳಮದ್ದಳೆ ಮತ್ತು

'ರಾಧಾಂತರಂಗ' ಬಯಲಾಟ ಪ್ರದರ್ಶನಗೊಂಡು ಜೋಶಿ ಅಭಿನಂದನೆಯನ್ನು ಮನರಂಜನೆಯ ದಿಕ್ಕಿನತ್ತಲೂ ಒಯ್ದು ಶೋತ್ತುಗಳ ಮನವನ್ನು ಮುದಗೊಳಿಸಿದವು.

ix