ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನಲ್ಲ. ಆತ್ಮೀಯತೆಯಿಂದ (ಸಂಘಟಕರ- ಜೋಶಿಯವರ) ಎರಡೂ ದಿವಸಗಳಲ್ಲೂ ಸಮಾರಂಭದಲ್ಲಿ ಪಾಲ್ಗೊಂಡು ಸಂತೋಷಗೊಳ್ಳುವ ಆಸಕ್ತಿಯಿಂದ ಬಂದವನನ್ನು ವೇದಿಕೆಗೆ ಏರಿಸಿದ್ದೀರಿ. ಗ.ನಾ. ಭಟ್ಟರಾದಿಯಾಗಿ ಸಂಬಂಧಪಟ್ಟವರಿಗೆಲ್ಲ ನಾನು ಆಭಾರಿ.

ಜೋಶಿಯವರ ವಿಮರ್ಶಾ ವಿಧಾನ, ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹ ಸಂಪರ್ಕ, ತತ್ವ ಚಿಂತನೆ, ಅರ್ಥಗಾರಿಕೆಯಲ್ಲಿ ಐತಿಹಾಸಿಕ ಆಯಾಮ ಇತ್ಯಾದಿ ವಿಷಯಗಳ ಕುರಿತಂತೆ ವಿದ್ವಾಂಸರುಗಳನೇಕರು ಪ್ರಬಂಧ ಮಂಡಿಸುವುದಕ್ಕಿದ್ದಾರೆ. ಹಾಗಾಗಿ ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ನನಗೆ ಸಂಬಂಧಿಯಾದ ಅವರ ಕುರಿತಾದ ಕೆಲವೇ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ.
ಫ್ರಾಂಕ್ ವರೆಲ್, ಎವರ್ಟನ್ ವಿಕ್ಷ್ರಿರಿoದ ತೊಡಗಿ ಈಗಿನ ಸಚಿನ್ ತೆಂಡುಲ್ಕರ್ ವರೆಗಿನ ಕ್ರಿಕೆಟಿನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕೇಳಿದ ತಕ್ಷಣ ಕೊಡಬಲ್ಲವರು, ಭಾರತದಲ್ಲಿ ಹಾಕಿ ಆಟದ ಸುವರ್ಣಯುಗ ಯಾವ ಇಸವಿಯಲ್ಲಿ, ಅದು ಹೇಗೆ ಇಳಿಮುಖವಾಗಿದೆ, ಈಗ ಹೇಗಿದೆ ಎಂದು ಕೇಳಿದರೆ ಸ್ಪಷ್ಟ ಚಿತ್ರಣವನ್ನು ನೀಡಬಲ್ಲರು, ಸಾಮಾನ್ಯವಾಗಿ ಬರುವ ಜ್ವರ, ಗಂಟಲು ನೋವು, ಕಾಲಿನ ಉಳುಕು ಇತ್ಯಾದಿಗಳಿಗೆ ಯಾವ ಟ್ಯಾಬ್ಲೆಟ್ಸ್, ಹಳ್ಳಿಮದ್ದು ತೆಗೆದುಕೊಳ್ಳಬೇಕೆಂದು ಖಚಿತವಾಗಿ ಹೇಳಬಲ್ಲವರು ಡಾಕ್ಟರ್ ಜೋಶಿ, ಗರಂ ಮಸಾಲೆಯನ್ನು ಉಪಯೋಗಿಸದೇ ಪಾರಂಪರಿಕ ಗೊಜ್ಜು, ತಂಬುಳಿ ಇತ್ಯಾದಿಗಳನ್ನು ಹೇಗೆ ಮಾಡುವುದು ಎಂದು ಹೇಳುವುದು ಮಾತ್ರವಲ್ಲ ಮಾಡಿ ತೋರಿಸಬಲ್ಲ ಪಾಕ ಪ್ರವೀಣ.

ಜೋಶಿಯವರ ತಿಳುವಳಿಕೆಯ, ಅವರ ಆಸಕ್ತಿಯ ವಿಷಯಗಳನ್ನು ಸರಿಯಾಗಿ ತಿಳಿಯ ಬೇಕಾದರೆ ಅವರೊಂದಿಗೆ ಹಲವು ದಿವಸಗಳ “ತಿರುಗಾಟ” ಮಾಡಬೇಕು. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆ ಬದಿಯ ನಾಮಫಲಕವನ್ನು ಕಂಡ ಕೂಡಲೇ ಅದರ ಕುರಿತಾದ ಅವರ ಸಂಶೋಧನೆ ಆರಂಭವಾಗುತ್ತದೆ. ಮಂಗಳೂರಿನ ಸಮೀಪದ ಒಂದು ಫಲಕ 'ಬ್ರಹ್ಮರ ಕೂಟ್ಲು”, ಸೀತಣ್ಣ ಇದು ಬಹುಶಃ 'ಬ್ರಹ್ಮೆರ ಕೂಟೇಲ್” ಎಂಬ ತುಳು ಶಬ್ದದಿಂದ ಬಂದಿರಬೇಕು' ಎಂದು ವಿಶ್ಲೇಷಿಸುತ್ತಾರೆ. ತಾನು ಪರಮ ಆಸ್ತಿಕನೆಂದು ತೋರಿಸಿಕೊಳ್ಳುವುದಕ್ಕೆ ಹಣಯಲ್ಲೋ, ಕತ್ತಿನಲ್ಲೋ, ಕಯ್ಯಲ್ಲೋ ಕೆಲವು ಕುರುಹುಗಳನ್ನು ಅಳವಡಿಸಿಕೊಳ್ಳುವುದು, ಕಂಡ ಕಂಡ ದೇವಸ್ಥಾನಗಳಿಗೆಲ್ಲಾ ವಾಹನದಲ್ಲಿ ಪ್ರಯಾಣಿಸುತ್ತಿರುವಾಗಲೇ ನಮಸ್ಕರಿಸುವುದು ಇತ್ಯಾದಿಗಳಿಂದ ಜೋಶಿಯವರು ದೂರ. “ಅವರು ನಾಸ್ತಿಕರು ಮಾರಾಯರೇ” ಎಂದು ಕೆಲವರು ಆಡಿದ್ದನ್ನು ನಾನು ಕೇಳಿದ್ದೇನೆ. ನನ್ನ ಹೆಂಡತಿಗೆ ಕಣ್ಣು ನೋವಾಗಿ ಆಪರೇಷನ್ ಸಂದರ್ಭದಲ್ಲಿ ಮನೆಗೆ ಬಂದಿದ್ದ ಜೋಶಿಯವರು ಎಲ್ಲಾ ಮಾತನಾಡಿ ಆದ ಮೇಲೆ ಹೊರಡುವಾಗ ಸೀತಣ್ಣ ನಿನ್ನ ನಂಬಿಕೆ ಹೇಗೋ ನನಗೆ ಗೊತ್ತಿಲ್ಲ. ಆದರೆ ಕತ್ತಿನ ಮೇಲಿನ ತೊಂದರೆಗಳಿಗೆ ಶಿವನು ನಿವಾರಕ, ಹಾಗಾಗಿ ಮೊದಲು ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸು ಎಂದು ಹೇಳಿದರು! ಅವರ ಆಸ್ತಿಕತೆಯನ್ನು ಪ್ರಶ್ನಿಸುವವರಿಗಾಗಿ ಈ ಪ್ರಸ್ತಾವನೆ

ವಾಗರ್ಥ ಗೌರವ / 6