ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗುರುತ್ವದಲ್ಲಿದೆ. ಅವರು ಯಶಸ್ವಿ ಪ್ರಾಧ್ಯಾಪಕರಷ್ಟೇ ಅಲ್ಲದೆ ಉತ್ತಮ ಆಡಳಿತಾರ ಎಂಬುದನ್ನು ಮಂಗಳೂರಿನ ಬೆಸೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಗಿದ್ದಾಗ ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯ 'Vision' ಮತ್ತು A 'Mission' ನಿರೂಪಣೆ ಹಾಗೂ ಪಾಲಿಸಿ ಬದಲಾವಣೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಗೆ ಇವರ ಮೇಲೆ ಪೂರ್ಣ ವಿಶ್ವಾಸವಿತ್ತು. ಸಹೋದ್ಯೋಗಿಗಳಿಗಾಗಲೀ ವಿದ್ಯಾರ್ಥಿ ಗಳಿಗಾಗಲೀ ಎಷ್ಟು ವಿನಾಯಿತಿ ನೀಡಬೇಕು ಮತ್ತು ಎಲ್ಲಿ ಶಿಸ್ತನ್ನು ಹೇರಬೇಕು ಎಂಬ ಬಗ್ಗೆ ಜೋಶಿಯವರಲ್ಲಿ ಸರಿಯಾದ ತಿಳುವಳಿಕೆ ಇತ್ತು. ಕಾಲೇಜಿನಲ್ಲಿ ಇವರು ಗ್ರಂಥಾಲಯ ವನ್ನು ಮುಕ್ತಗೊಳಿಸಿ ವಿದ್ಯಾರ್ಥಿಗಳು ಬೇಕಾದ ಪುಸ್ತಕವನ್ನು ಕೈಹಾಕಿ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿನಿಯರು ತಪ್ಪು ಮಾಡಿದಾಗ ವಿಚಾರಣೆಯನ್ನು ಮಹಿಳಾ ಪ್ರಾಧ್ಯಾಪಕಿಯರ ಮುಂದೆಯೇ ನಡೆಸುತ್ತಿದ್ದರು. ಇದು ಒಂದು ವೃತ್ತಿಪರತೆಯ ವಿಚಾರವಾದರೆ ಅವರ ಇನ್ನೊಂದು ಸಾಧನೆ ಇರುವುದು ಪದವಿಪೂರ್ವ ಕಾಲೇಜು ಶಿಕ್ಷಕರ ಜಿಲ್ಲಾ ಸಂಘಟನೆಯ ಅಧ್ಯಕ್ಷರಾಗಿ ಶಿಕ್ಷಕರ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟನ್ನು ನೀಡಿದ್ದರು. ರಾಜ್ಯ ಮಟ್ಟದಲ್ಲಿಯೂ ಶಿಕ್ಷಕರ ಸಂಘಟನೆಯವರು ಇವರ ಸೇವೆಯನ್ನು ಬಯಸಿದರೂ ಮಂಗಳೂರಿನಲ್ಲಿದ್ದುಕೊಂಡು ಅದು ಸಾಧ್ಯವಿಲ್ಲವೆಂದು ನಯವಾಗಿಯೇ ತಿರಸ್ಕರಿಸಿದರು.

ಪ್ರಾಂಶುಪಾಲರಾಗಿ ವೃತ್ತಿಯಿಂದ ನಿವೃತ್ತರಾದ ಜೋಶಿಯವರ ಸ್ಮರಣೀಯ ಘಟನೆಯೆಂದರೆ ಅವರ ವಿದಾಯ ಸಮಾರಂಭಕ್ಕೆ ಮೂರು ದಿನ ಮೊದಲು ಅವರ ಸಹೋದ್ಯೋಗಿಗಳೆಲ್ಲ ಕಚೇರಿಯೊಳಗೆ ಬಂದು ಸುತ್ತ ಸೇರಿದರು. ಏನು ವಿಚಾರವೆಂದು ವಿವರಿಸಲಾಗದೆ ಒಮ್ಮಿಂದೊಮ್ಮೆಲೇ ಕಣ್ಣೀರು ಹಾಕಿದರು. ಏನೂ ಮಾತನಾಡಲಾಗದೆ ಕೆಲವು ನಿಮಿಷ ಕಳೆದು ಅವರೆಲ್ಲ ಅಳುತ್ತಲೇ ತೆರಳಿದರು. ಅದು ಅವರ ಭಾವಭಕ್ತಿಯ ವಿದಾಯದ ಕಣ್ಣೀರಾಗಿತ್ತು. ತಾನು ಸಹಶಿಕ್ಷಕರ ಮನಸ್ಸಿನಲ್ಲಿ ಇಂತಹ ಒಂದು ಭಾವನಾತ್ಮಕ ಗೌರವ ಹೊಂದಿದ್ದ ಸಂಗತಿಯೇ ಜೋಶಿಯವರಿಗೆ ಸುಖಾಶ್ಚರ್ಯಗಳ ಅನುಭವವಾಗಿತ್ತು.

ತಾನು ಕಲಿತ ಮಾಳದ ಗುರುಕುಲ ಖಾಸಗಿ ಅನುದಾನಿತ ಶಾಲೆಯ ಪುನರುಜ್ಜಿವನಕ್ಕೆ ಊರಿನವರು ತೊಡಗಿದಾಗ ತಾನೂ ಸೇರಿಕೊಂಡು 'ಗುರುಕುಲ ಸಂವರ್ಧನ ಸಮಿತಿ'ಯ ಕ್ರಿಯಾಶೀಲ ಕಾರ್ಯಕರ್ತನಾಗಿ ದುಡಿದಿದ್ದಾರೆ. ಇದೀಗ ಆ ಶಾಲೆಯು ಮತ್ತೆ ಹಿಂದಿನ ಕಳೆಯನ್ನು ತಳೆಯುತ್ತಿದೆ. ಇನ್ನು ಬಡವಿದ್ಯಾರ್ಥಿಗಳಿಗೆ ಸಹಾಯ, ಉಚಿತ ಪಾಠ, ಕಲಾವಿದರಿಗೆ ಮಾಸಾಶನಕ್ಕೆ ಅರ್ಜಿ, ಮಾನಪತ್ರಗಳನ್ನೂ ಆಹ್ವಾನಪತ್ರಿಕೆಗಳನ್ನೂ ಕರಪತ್ರಗಳನ್ನೂ ಬರೆದು ಕೊಡುವುದು, ಒಂದೇ ವಾಕ್ಯದ ಮಾನಪತ್ರದ ಹೊಸತನ, ಹವ್ಯಾಸಿ ಕಲಾವಿದರ ಬೆಳವಣಿಗೆಗೆ ಪ್ರೋತ್ಸಾಹ, ಕಲಾವಿದರ ವ್ಯಕ್ತಿಪರಿಚಯ, ಅನೇಕ ಅಭಿನಂದನ ಗ್ರಂಥಗಳ ಸಂಪಾದಕರು, ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಸಂಪಾದಕರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರಗಳು ಹೀಗೆ ನಿರಂತರ ಕ್ರಿಯಾಶೀಲತೆಯು ಜೋಶಿಯವರ ವ್ಯಕ್ತಿತ್ವದ ಲಕ್ಷಣವಾಗಿದೆ. ಸಾರ್ವಜನಿಕ ವಿಚಾರಗಳಿಗೆ

ವಾಗರ್ಥ ಗೌರವ / 19