ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಲಿಷ್ಟವಾಗುವುದಿಲ್ಲ.
4. ವೇಗ. ಒಟ್ಟಾಗಿ ಅವರ ಅರ್ಥಗಾರಿಕೆಯ ಲಯ ತೀವ್ರಗತಿಯದು.
5. ಶ್ರುತಿಯಲ್ಲಿ ಲೀನತೆ ಹೊಂದದೆ ಪ್ರತ್ಯೇಕವಾಗಿ ಕೇಳುವ ಕಂಠ.
6. ಸಂಭಾಷಣಾ ಚಾತುರ್ಯ ಇತ್ಯಾದಿ.

ಇಲ್ಲಿ ಜೋಶಿ ಅರ್ಥಗಾರಿಕೆಯ ಎಲ್ಲ ಅಂಶಗಳನ್ನು ಪಟ್ಟಿಮಾಡುವುದು ಉದ್ದೇಶವಲ್ಲ. ಅವರ ಅರ್ಥಗಾರಿಕೆ ಅನನ್ಯವಾಗುವಂತೆ ರೂಪಿಸಿದ ಪ್ರಧಾನ ಲಕ್ಷಣಗಳು ಮಾತ್ರ ಇಲ್ಲಿ ಮುಖ್ಯ.ಪ್ರತಿಯೊಬ್ಬ ಕಲಾವಿದನೂ ತನ್ನ ಉಳಿವಿಗಾಗಿ ಮಂಡನೆಯಲ್ಲಿ ಇತರರಿಗಿಂತ ವಿಭಿನ್ನ ಶೈಲಿಯನ್ನು ಹೊಂದುವುದು ಅನಿವಾರ್ಯ. ಇಲ್ಲವಾದರೆ ಹತ್ತರೊಂದಿಗೆ ಹನ್ನೊಂದಾಗಿ ನಿರ್ಲಕ್ಷಿಸಲ್ಪಡುವ ಅಪಾಯವಿರುತ್ತದೆ. ಈ ನೆಲೆಯಲ್ಲಿ ಪ್ರಭಾಕರ ಜೋಶಿ ಯವರು ಅರ್ಥಧಾರಿಯಾಗಿ ರೂಪುಗೊಳ್ಳುವಾಗ ಇದ್ದ ಸನ್ನಿವೇಶವನ್ನು ಪರಿಶೀಲಿಸುವುದು ಅತ್ಯಗತ್ಯ.

ತಾಳಮದ್ದಲೆಯ ಇತಿಹಾಸದಲ್ಲಿ ತೀರ ಅಪರಿಷ್ಕೃತ ಹಂತ,ಅಲ್ಪ ಪರಿಷ್ಕೃತ ಆದರೆ ಬಹುಪಾಲು ರೂಕ್ಷ, ಪರಿಷ್ಕಾರದ ಕಾಲ, ಪರಿಷ್ಕೃತ ರೂಪ.. ಹೀಗೆ ಅನೇಕ ಘಟ್ಟಗಳನ್ನು ಗುರುತಿಸಬಹುದು. ರಂಗಭೂಮಿಯೊಂದರ ವಿಕಾಸದಲ್ಲಿ ಇವೆಲ್ಲ ಸ್ವಾಭಾವಿಕ. ಜೋಷಿ ಯವರು ರಂಗ ಪ್ರವೇಶ ಮಾಡಿದ ಕಾಲಘಟ್ಟದಲ್ಲಿ ತಾಳಮದ್ದಲೆ ಪರಿಷ್ಕೃತವಾಗಿ, ಒಂದು ಪೂರ್ಣಪ್ರಮಾಣದ ರಂಗಭೂಮಿಯಾಗಿ ಬೆಳೆದು ನಿಂತಿತ್ತು. ಮಾತ್ರವಲ್ಲ ಇದಕ್ಕೆ ಕಾರಣರಾದ ಹಿರಿಯರಲ್ಲಿ ಹೆಚ್ಚಿನವರು ಸಕ್ರಿಯರೂ ಆಗಿದ್ದರು. ಇವರಿಂದಾಗಿ ಅರ್ಥಗಾರಿಕೆಗೊಂದು ಮಾದರಿ ಸಿದ್ಧವಾಗಿತ್ತು. ನಿರ್ದಿಷ್ಟ ಭಾಷಾಶೈಲಿ ರೂಪುಗೊಂಡಿತ್ತು. ಪ್ರತಿಭಾವಂತರಾದ ಕಲಾವಿದರು ಅನೇಕ ಸಾಧ್ಯತೆಗಳನ್ನು ಕಂಡುಕೊಂಡಾಗಿತ್ತು.

ಈ ಸನ್ನಿವೇಶದಲ್ಲಿ ರಂಗಕ್ಕೆ ಬಂದ ಕಲಾವಿದ ತನ್ನ ಉಳಿವಿಗಾಗಿ ಇವರೆಲ್ಲರಿಗಿಂತ ಭಿನ್ನ ಮಾದರಿಯೊಂದನ್ನು ರೂಪಿಸಿಕೊಳ್ಳುವ ಅನಿವಾರ್ಯತೆ ಉಂಟಾಗುವುದು ಸ್ವಾಭಾವಿಕ. ಜೋಶಿಯವರ ಆಯ್ಕೆ ಈ ನೆಲೆಯಲ್ಲಿ ಹೊಸಶೈಲಿಯತ್ತ ಹೊರಳಿತು. ಅವರೇನಾದರೂ ಇಂತಹ ಆಯ್ಕೆಯೊಂದನ್ನು ಮಾಡಿಕೊಳ್ಳದೇ ಇದ್ದಿದ್ದರೆ ಇಷ್ಟು ಸುದೀರ್ಘಾವಧಿ ರಂಗದಲ್ಲಿ ಉಳಿಯುತ್ತಿದ್ದರು ಅನ್ನುವುದು ಸಂಶಯ.

ಭಿನ್ನಶೈಲಿ ಅಂದರೆ ಹೇಗೆ ಎಂದು ಪರಿಶೀಲಿಸುವುದು ಅಗತ್ಯ. ಆಗ ತಾರಾಮೌಲ್ಯ ಗಳಿಸಿದ್ದ ಮಲ್ಪೆ ಶಂಕರನಾರಾಯಣ ಸಾಮಗರದು ಕ್ಲಿಷ್ಟ ವಾಕ್ಯಗಳ ತಾತ್ವಿಕ ವಿವೇಚನಾ ಪ್ರಾಧಾನ್ಯವುಳ್ಳ ಪ್ರಗಲ್ಯ ಮಾತುಗಾರಿಕೆ. ಅವರೆದುರು ಕಾಣಿಸಿಕೊಂಡು ಮೆರೆಯುತ್ತಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರದು ಪ್ರಚಂಡ ತರ್ಕದ ಸಶಕ್ತ ಮಂಡನೆ ಹಾಗೂ ಆಕರ್ಷಕ ಅಭಿವ್ಯಕ್ತಿಯ ಅರ್ಥಗಾರಿಕೆ. ರಾಮದಾಸ ಸಾಮಗರದು ಭಾವುಕ, ಕಾವ್ಯಾತ್ಮಕ ನಿರೂಪಣೆ. ತೆಕ್ಕಟ್ಟೆಯವರದು ರಭಸದ ಮಾತುಗಾರಿಕೆ, ಕಾಂತ ರೈ ಹಾಗೂ ಪೆರ್ಲ ಪಂಡಿತರದು ಭಾವಾವೇಶವಿಲ್ಲದ ನಿರ್ಲಿಪ್ತ ನಿರೂಪಣೆ. ಇವರೆಲ್ಲರ ಅರ್ಥಗಾರಿಕೆಯಲ್ಲೂ ಲಂಬಿಸುವ ಗುಣ ಸಾಮಾನ್ಯವಿತ್ತು. (ಇದು ಆ ಕಾಲದ ಇಡಿ ಇರುಳಿನ ಕಾಲಮಿತಿಯಿಲ್ಲದ ಕೂಟಗಳಲ್ಲಿ

ವಾಗರ್ಥ ಗೌರವ / 22