ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟರು, ಮಲ್ಪೆ ರಾಮದಾಸ ಸಾಮಗರು ಇವರ ಅರ್ಥಗಾರಿಕೆಯ ಸೆಳೆತಕ್ಕೊಳಗಾಗಿ, ಅವರಾರನ್ನೂ ನೇರವಾಗಿ ಅನುಕರಿಸದೆ, ಸ್ವಚ್ಛಕನ್ನಡ ಮಾತುಗಾರಿಕೆಯನ್ನು ರಂಗದಲ್ಲಿ ರೂಢಿಸಿದ ಜೋಶಿ ಅವರು ಸುಪ್ರೀಂ ಕೋರ್ಟಿನ ಲಾಯರ್ ಆಗಿಯೋ, ಕೇಂದ್ರ ಸರಕಾರದ ಅರ್ಥಸಚಿವರಾಗಿಯೊ ಮಾರ್ಪಡದೆ ಉಳಿದುದು ಯಕ್ಷಗಾನ ತಾಳಮದ್ದಳೆ ರಂಗವನ್ನು ನೆಚ್ಚಿದವರ ಭಾಗ್ಯ ಎನ್ನಬೇಕು.
ಜೋಶಿ ಅವರ ಸಂಪರ್ಕವಲಯ, ವಿಷಯಗಳ ಅವಗಾಹನವ್ಯಾಪ್ತಿ ಎಷ್ಟು ವಿಶಾಲ; ಪ್ರತಿಕರಿಸುವ ನೆಲೆಯ ತಲ ಎಷ್ಟು ಎತ್ತರದ್ದು ಸರಸ್ವತೀಪುತ್ರ ನಾದುದರಿಂದಲೆ ಅವರ ಭಾಷಣ ಶ್ರೇಷ್ಠವೋ, ಅರ್ಥಗಾರಿಕೆ ಶ್ರೇಷ್ಠವೋ ಎಂಬ ಕುರಿತ ಚರ್ಚೆಗೆ ನಿಲುಗಡೆ ಇಲ್ಲವಾಗುವುದು. ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಭಾರತೀಯ ದರ್ಶನಶಾಸ್ತ್ರ, ಕ್ರಿಕೆಟ್ ಆಟಗಾರಿಕೆ ಪರಿಣತಿಗಳೊಂದಿಗೆ ಒಬ್ಬ ಹರಿತ ಬರವಣಿಗೆಯ ಕಾದಂಬರಿಕಾರನಲ್ಲಿರ ಬೇಕಾದ ವಸ್ತುವೀಕ್ಷಣೆ, ಪೃಥಕ್ಕರಣ ಮತ್ತು ಔಚಿತ್ಯಪ್ರಜ್ಞೆ ಇವುಗಳ ನೆಲೆಯಿಂದ ವಸ್ತುಗಳನ್ನು ಪರಿಶೀಲಿಸಿ ತನ್ನ ನಿಲುಮೆ ಹೇಳಬಲ್ಲ ಜೋಶಿ ಅವರದು ಪ್ರಜಾತಂತ್ರದ ರಾಜಕಾರಣದಲ್ಲಿ ಅತ್ಯಂತ ಸ್ಟಹಣೀಯ ವ್ಯಕ್ತಿತ್ವ, ಆದರೆ ಅವರೆಲ್ಲಾದರೂ ರಾಜಕಾರಣಕ್ಕೆ ಕಾಲಿಟ್ಟರೆ ಅಲ್ಲಿ ತಮ್ಮ ಪಾಡೇನಾದೀತೆಂಬ ಭಯದಲ್ಲೇ ಬಹುಶಃ ಬಲಪಂಥೀಯ ರಾಜಕಾರಣಿಗಳು ಇವರನ್ನು ಯಕ್ಷಗಾನದ ಮನ್ನಣೆಯ ಮಣೆಯಲ್ಲಿ ಕೂರಿಸಿಬಿಟ್ಟಿರಬಹುದು. ಬೌದ್ಧಿಕದಲ್ಲಿ ಇವರ ಎತ್ತರ ಸಿಗದ ಹಲವರು ಇವತ್ತು ಎಂಪಿಗಳಾಗಿದ್ದಾರೆ. ಅರ್ಥಗಾರಿಕೆಯಲ್ಲಿ ಕಲಾತ್ಮಕವಾಗಿ ಆಧುನಿಕ ಕನ್ನಡದ ಸ್ವಚ್ಛ ಬಳಕೆ ಮಾಡುವವರಿಬ್ಬರು. ಒಬ್ಬರು ದಿವಂಗತ ಪಂಡಿತ ಪೆರ್ಲ ಕೃಷ್ಣ ಭಟ್ಟರು. ಇನ್ನೊಬ್ಬರು ಪ್ರಭಾಕರ ಜೋಶಿ, ವಾಗಿತೆ ಮತ್ತು ಕಲಾತತ್ತ್ವದ ವಿಷಯವಾಗಿ ಬಹಳಷ್ಟು ತಾದಾತ್ಮವನ್ನು ಇವರೊಳಗೆ ಕಾಣಬಹುದಿತ್ತು. ಅರ್ಥಗಾರಿಕೆ ಯಲ್ಲಿ ನವುರಾದ ತಿಳಿಹಾಸ್ಯ ಇಬ್ಬರಿಗೂ ಕರಗತ, ಅರ್ಥಶಾಸ್ತ್ರ, ದರ್ಶನಶಾಸ್ತ್ರಗಳ ಬೆಂಬಲದ ಬೆಲೆ ಜೋಶಿಯವರ ಅರ್ಥಕ್ಕಿದೆ. ತಾನು ಆರಾಧಿಸಿದ ಈ ರಂಗದ ಪ್ರಚಂಡರೊಂದಿಗೆಲ್ಲ ಇದಿರು ಅರ್ಥಹೇಳಿ ಕಾಣಸಿಕೊಂಡುದು ಜೋಶಿ ಹೆಗ್ಗಳಿಕೆ.
1970ರ ದಶಕದಲ್ಲಿ ಆರಂಭವಾದ ಆಧುನಿಕ ರೀತಿಯ ಕಲಾಕಾರರ ಅಭಿನಂದನ ಪರಂಪರೆಗೆ ಅಸ್ತಿವಾರ ಹಾಕಿದ ಮಂಗಳೂರಿನ ಸಕ್ರಿಯರಲ್ಲಿ ಜೋಶಿ ಅವರೂ ಒಬ್ಬರೆನ್ನುವುದು ಇತಿಹಾಸ. ಈ ಸಂದರ್ಭಗಳಲ್ಲೆಲ್ಲ ಕಲಾವಿದರ ಪತ್ರಿಕಾ ಪರಿಚಯಲೇಖನ, ಅಭಿನಂದನಪತ್ರ ಬರವಣಿಗೆ, ಅಭಿನಂದನಭಾಷಣ, ಕಾರ್ಯಕ್ರಮದ ರೂಪಣ, ಆಟ, ಕೂಟಗಳ ಏರ್ಪಾಟು ಇತ್ಯಾದಿ ಎಲ್ಲದರಲ್ಲೂ ಜೋಶಿ ಅವರದು ಅವಿಸ್ಮರಣೀಯ ಕಾಯಕ. ಇದರಲ್ಲೆಲ್ಲ ಅವರ ನೆರವು ಬೇಡದ ಸಂಘಟಕರೆ ಇಲ್ಲವೆಂದರೆ ತಪ್ಪಾಗದು. ಗ್ರಂಥಸಂಪಾದನ, ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ನಾಗುವುದು, ಕಲಾತತ್ತ್ವನಿರೂಪಣೆ ಇವುಗಳಲ್ಲೆಲ್ಲ ಮಹಾನ್ ವಾಗ್ನಿ ಪ್ರೊ. ಕು.ಶಿ. ಹರಿದಾಸ ಭಟ್ಟರಂಥವರಿಂದಲೂ ಪ್ರಶಂಸೆ ಪಡೆದವರು.
ಯಕ್ಷಗಾನ ಅರ್ಥಗಾರಿಕೆಯಲ್ಲಿ ಶ್ರೇಷ್ಠತೆ ಹೊಂದಿದ್ದದು ಮಾತ್ರವಲ್ಲ

ಯಕ್ಷ ಪ್ರಭಾಕರ / 23