ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇದರಿಂದಾಗಿ ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನ ರಂಗ ಇನ್ನೂ ಸಿದ್ಧವಾಗಿಲ್ಲ. ವಿಮರ್ಶೆ ಗೋಷ್ಟಿ ಅಂದರೆ ಅದೇನೋ ತಮ್ಮನ್ನು ಟೀಕಿಸುವಂತಹ ಉದ್ದೇಶ ಎಂದೇ ಕಲಾವಿದರು ತಿಳಿದಿರುವಂತೆ ಕಾಣುತ್ತದೆ. ಈ ಸಂದೇಹವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು.
ಡಾ. ಜೋಶಿಯವರೆನ್ನುವಂತೆ ವಿಮರ್ಶೆಗೂ ಮರು ವಿಮರ್ಶೆ ಬೇಕು. ಅದು ಆಚಾರ್ಯ ಪೀಠವಾಗಿರಬಾರದು. ಯಕ್ಷಗಾನ ಸಂಶೋಧನೆಗೆ ವಿಮರ್ಶೆಯ ಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು. ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ 'ಒಟ್ಟಾರೆ ವಿಮರ್ಶೆ'ಯಾಗುತ್ತದೆ. ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ. ಇನ್ನೊಂದು ಮುಖ್ಯ ಮಾತು ಇಲ್ಲಿ ಬರುತ್ತದೆ ವಿಮರ್ಶೆಯನ್ನು ಯಾರು ಒಳಗಿದ್ದುಕೊಂಡೇ ಮಾಡುತ್ತಾನೋ, ಅವನ ಬಗ್ಗೆ ಬಹಳಷ್ಟು ವಿಶ್ವಾಸ ನಂಬುಗೆಗಳು ಬರುತ್ತವೆ.
ಹೀಗೆ ಡಾ.ಪ್ರಭಾಕರ ಜೋಶಿಯವರು ತಾಳಮದ್ದಳೆ ಅರ್ಥಧಾರಿ ಯಾಗಿ, ವೇಷಧಾರಿಯಾಗಿ, ಮದ್ದಳೆವಾದಕನಾಗಿ, ಯಕ್ಷಗಾನ-

ತಾಲಮದ್ದಳೆ ವಿಮರ್ಶಕನಾಗಿ ಸಂಸ್ಕೃತಿಗಳ ಚಿಂತಕನಾಗಿ, ಕೋಶಕಾರನಾಗಿ ತನ್ನ ಚಿತ್ತದ ಸಾಮರ್ಥ್ಯವನ್ನು ಭವ್ಯವಾಗಿ ಅಭಿವ್ಯಕ್ತಿಗೊಳಿಸಿದ ನಿಜಾರ್ಥದ ಅಭಿಜ್ಞ, ಇಂತಹ ಯಕ್ಷಗಾನದ ಅಭಿಮಾನಕ್ಕೆ 2019 ನೇ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯು ಜೂನ್ 2ರಂದು ಮಂಗಳೂರಿನ ಸಮೀಪದ ಅಡ್ಯಾರ್‌ನ ಅಡ್ಯಾರ್ ಗಾರ್ಡನ್ ಇಲ್ಲಿ ಪ್ರದಾನಿಸಲ್ಪಡುತ್ತದೆ. ತೆಂಕುತಿಟ್ಟು ಕಂಡ ನಕ್ಷತ್ರ ಸದೃಶ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟರ ವಿದ್ವತೀತಿ ಇಲ್ಲಿ ಕಾಣಬಹುದು. ಮಂಗಳೂರಿನ ಬೀದಿ ಬೀದಿಯಲ್ಲಿ ರಾರಾಜಿಸುವ ಪಟ್ಲ ಸಂಭ್ರಮದ ಪ್ಲೆಕ್ಸ್‌ಗಳಲ್ಲಿ ಡಾ.ಪ್ರಭಾಕರ ಜೋಶಿಯವರ ದೊಡ್ಡದಾದ ಚಿತ್ರಗಳನ್ನು ಕಾಣುವಾಗ ವಿದ್ಯೆ, ವಿದ್ವತ್ತಿಗೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಇವರು ಕೊಡುವ ಮಾನ್ಯತೆಯ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪಟ್ಲ ಸತೀಶ ಶೆಟ್ಟರು ಅಭಿನಂದನಾರ್ಹರೇ ಸರಿ. ಇಂತಹಾ ವಿದ್ಯಾಪಕ್ಷಪಾತಿತ್ವ, ವಿದ್ವತ್ ಸಮ್ಮಾನ ಮತ್ತಷ್ಟೂ ಅವರಿಂದ ನಡೆಸಲ್ಪಡಲಿ. ಮತ್ತೊಮ್ಮೆ ಡಾ. ಪ್ರಭಾಕರ ಜೋಶಿಯವರಿಗೆ ಅಭಿನಂದನೆಗಳು.

ಯಕ್ಷ ಪ್ರಭಾಕರ / 31