ಏಕಾಂಗಿನಿ 7 ಆಕೆ, ಸಂಕಟದ ಯೋಚನೆಗಳನ್ನೆಲ್ಲ ಆಳ ಆಳಕ್ಕೆ ತಳ್ಳಿ, ದೃಢ ನಡಿಗೆಯಿಂದ ತಾಯಿಯ ಎಡೆಗೆ ಬಂದು, ಸರಸ್ವತಿಯನ್ನೆತ್ತಿಕೊಳ್ಳುತ್ತ ಅಂದಳು: “ಇರಲಿ ಬಿಡಮ್ಮ. ಸ್ಟೇಷನಿಂದ ಮನೆಗೆ ಬರೋದಕ್ಕೆ ಇನ್ನೂ ಹೊತ್ತಿದೆ. ಇನ್ನೇನು ಎರಡು ದಿವಸ. ಆಮೇಲೆ ನೀನು ಬಂದು ಎಬ್ಬಿಸೋಕೆ ವಿಜಯಾ ಎಲ್ಲಿದ್ದಾಳೆ?” ಪರಿಣಾಮಕಾರಿಯಾಗಿತ್ತು ಆ ಮಾತು. ಕರುಳಿನೊಂದು ತುಣುಕನ್ನು ಬೀಳ್ಕೊ ಡುವ ಯೋಚನೆ ಯಾವ ಕಾಲದಲ್ಲಿ ಯಾರಿಗೆ ಪ್ರಿಯವಾಗುವುದು ಸಾಧ್ಯ? ತನ್ನ ಕಿರಿಯ ಮಗಳನ್ನು ನೋಡುತ್ತ, ತಾನಾಗಿಯೇ ತಾಯಿಯ ಸ್ವರ ಮೃದುವಾಯಿತು. ರ “ಬಾರೇ ವಿಜಯಾ, ಸ್ನಾನದ ಮನೇಲಿ ಉರಿಹಾಕಿದ್ದ. ನೀರು ಕಾದಿದೆಯೋ ನೋಡು, ರಾತ್ರೆಯೆಲ್ಲಾ ಪ್ರಯಾಣ ಮಾಡಿ ನಿದ್ದೆ ಕೆಟ್ಟಿದ್ದಾರೆ. ಒಂದಿಷ್ಟು ಎರಕೊಂಡು ವಿಶ್ರಾಂತಿ ತಗೊಳ್ಳಿ." ವಿಜಯಾ ತಾಯಿಯನ್ನು ಹಿಂಬಾಲಿಸಿದಳು. ಅಳು ನಿಲ್ಲಿಸಿದ ಸರಸ್ವತಿಯ ಕೈಗೆ ಆಕೆಯ ಬೊಂಬೆಪಾಪವನ್ನಿತ್ತು, ಕೆಳಗೆ ಕುಳ್ಳಿರಿಸಿ, ಸುನಂದಾ ಹಾಸಿಗೆಗಳನ್ನು ಸುರುಳಿ ಸುತ್ತಿದಳು. ಪೊರಕೆ ತಂದು, ಹೊರ ಜಗಲಿಯನ್ನೂ ನಡುಮನೆಯನ್ನೂ ಪಕ್ಕದ ಕೊಠಡಿಗಳನ್ನೂ ಗುಡಿಸಿ ಸ್ವಚ್ಛಗೊಳಿಸಿದಳು. ಹಿಂದಿನ ದಿನವೇ ಅಣಿಗೊಳಿಸಿದ್ದ ಮಾವಿನೆಲೆಯ ಒಂದಳೆ ಸಾಲು ಹೆಬ್ಬಾಗಿಲನ್ನು ಅಲಂಕರಿಸಿತು. ಅದರಲ್ಲೊಂದೆಡ ಎಲೆಗಳು ಒಂದರ ಮೇಲೊಂದು ಬಿದ್ದು ಸಿಕ್ಕುಗಟ್ಟಿದ್ದುವು. ಸುನಂದಾ ಅದನ್ನು ಸರಿ ಪಡಿಸಿದಳು. ಮನೆಯ ಒಂದೇ ಒಂದು ಪೀಠೋಪಕರಣವಾದ ಅರಾಮಕುರ್ಚಿಯನ್ನು ತಂದು ನಡುಮನೆಯಲ್ಲಿ ಬಿಡಿಸಿದಳು. ನಾಲ್ಕು ವರ್ಷಗಳ ಹಿಂದೆಯೂ ಆ ದಿನ ಇದೇ ಆಧಾಮ ಕುರ್ಚಿ ಇತ್ತು. ಆದರೆ ಆಗ ಅದು ಹೊಸದು. ಅಲ್ಲದೆ ಜತೆಯಲ್ಲಿ ನೆರೆ ಹೊರೆಯವರಿಂದ ಎರವಲು ತಂದಿದ್ದ ಬೇರೆ ಎರಡು ಕುರ್ಚಿಗಳಿದ್ದುವು. ಅಷ್ಟೇ ಅಲ್ಲ ಆಗ ಅಡುಗೆಗೆಂದು ಹೆಂಗಸರಿಬ್ಬರನ್ನು ಗೊತ್ತು ಮಾಡಿದ್ದರು. ತನ್ನ ಗಂಡ ಅತ್ತೆಯೊಡನೆ ಆ ದಿನ ಬಂದಿಳಿದುದೂ ಬೆಳಗು ಮುಂಜಾನೆಯೇ, ಆ ಸಾರೆ ನಡುರಾತ್ರೆಯೇ ಮನೆ ಆ ಯೆಲ್ಲ ಎಚ್ಚರಗೊಂಡು, ಕೆಲಸ ಕಾರ್ಯಗಳು ಆರಂಭವಾಗಿದ್ದುವು. ಆ ಮನೆಯಳಿಯ ನನ್ನು ತೃಪ್ತಿ ಪಡಿಸಲು ಆಗ ತೋರಿದ ಸಂಭ್ರಮವೆಷ್ಟು!... ಈಗ ಅಂತಹ ಯತ್ನವಿಲ್ಲ. ಈ ದಿನ ಸರಳತನ ಮೈವೆತ್ತು ನಿಂತಿದೆ. ಎಂದಿಗಿಂತ ಎಲ್ಲಿಯೋ ಸ್ವಲ್ಪ ಹೆಚ್ಚು ಸಂಭ್ರಮ ಅಷ್ಟೆ ಸ್ವಲ್ಪ ಮಾತ್ರ ಹೆಚ್ಚು ಯಾಕೆ ಹೀಗೆ? ಕಾಲ ಬದಲಾಯಿತೆಂದೆ? ನಿಷೇಕ ಪ್ರಸ್ತದಂತಹ ಸಮಾರಂಭದ ಘನತೆ ಗಾಂಭೀರ್ಯ ಹಿರಿಮೆಗಳು ಕಡಿಮೆಯಾದುವೆಂದೆ? ಹಾಗೆ ಹೇಳುವುದು ಕಷ್ಟ ವೆಂದು ಸುನಂದಾ ಬಲ್ಲಳು, ವಿಜಯಳ ಗಂಡ ತಾನೊಬ್ಬನೇ ಬರುವೆನೆಂದು ಬರೆದಿದ್ದ. ಯಾವ ಕಾರಣದಿಂದಲೂ ಏನೊಂದು ವೆಚ್ಚವನ್ನೂ ಮಾಡಬಾರದು ಎಂದು ತಿಳಿಸಿದ್ದ.
ಪುಟ:Ekaangini by Nirajana.pdf/೧೧
ಗೋಚರ