ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಕದಳಿಯ ಕರ್ಪೂರ


ಹಾವನ್ನು ಮೆಟ್ಟಿದವರಂತೆ ಹೌಹಾರಿದರು ಲಿಂಗಮ್ಮ - ಮಹಾದೇವಿಯರು. ಯಾರಿವನು? ಅನಿಷ್ಟಕರವಾದ ನಮ್ಮ ಸಂಶಯವೇ ನಿಜವಾಯಿತೇ?' ಮಾತನಾಡದವಳಾಗಿ ನಿಂತಿದ್ದಳು ಲಿಂಗಮ್ಮ. ತಾಯಿಯ ಹಿಂದೆ ನಿಂತು ಮಹಾದೇವಿ ಚಕಿತಳಾಗಿ ನೋಡುತ್ತಿದ್ದಳು.

ಅಷ್ಟರಲ್ಲಿ ಓಂಕಾರ ಇಳಿದು ಬಂದ. ರಾಜನ ಆಪ್ತಗೆಳೆಯ ವಸಂತಕನನ್ನು ಆತ ಬಲ್ಲ. ಆದರೆ ಅವನು ಇಲ್ಲಿ ! ಕ್ಷಣಕಾಲ ದಿಗ್ಭ್ರಮೆಯಾಯಿತು. ಅದನ್ನು ತೋರ್ಪಡಿಸಿಕೊಳ್ಳದೆ ಹೇಳಿದ :

``ಓ ! ತಾವು !! ದಯಮಾಡಿಸಬೇಕು.... ವಸಂತಕ ಒಳಗೆ ಪ್ರವೇಶಿಸಿದ. ಅವನ ಪರಿವಾರವೂ ಒಳಗೆ ಹೊಕ್ಕಿತು. ಅವನ ಜೊತೆಗೆ ಒಂದಿಬ್ಬರು ಅವನ ಗೌರವರಕ್ಷೆಯ ಸಹಾಯಕರಿದ್ದರು. ಅಲ್ಲದೆ ಅರಮನೆಯ ಅಂತಃಪುರದ ಐವರು ಸ್ತ್ರೀಯರು, ರೇಶ್ಮೆಬಟ್ಟೆಯಿಂದ ಮುಚ್ಚಿದ ಹರಿವಾಣಗಳನ್ನು ಹಿಡಿದು ಒಳಗೆ ಪ್ರವೇಶಿಸಿದರು. ನಾಲ್ಕಾರು ಜನ ಸಿಪಾಯಿಗಳು ಬಾಗಿಲಲ್ಲೇ ನಿಂತರು ಕಾವಲಿಗೆಂಬಂತೆ.

ಓಂಕಾರನ ಮನಸ್ಸಿನಲ್ಲಿ ನಾನಾ ಭಾವನೆಗಳು ಮಿಂಚಿನಂತೆ ಓಡಿದುವು. ನೆನ್ನೆಯ ರಾಜದೃಷ್ಟಿಯಿಂದಾದ ಫಲವೆಂದು ಊಹಿಸಲು ಅವನಿಗೆ ಹೆಚ್ಚು ಕಷ್ಟವಾಗಲಿಲ್ಲ. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ, ವಸಂತಕನಿಗೆ ಕುಳಿತುಕೊಳ್ಳಲು ಹಾಸಿ, ಒರಗುದಿಂಬನ್ನಿಡುತ್ತಾ ಹೇಳಿದ.

``ಕುಳಿತುಕೊಳ್ಳಬೇಕು.... ಏನು ಸ್ವಾಮಿ, ಬಹಳ ಅನಿರೀಕ್ಷಿತವಾಗಿ ಬಡವರ ಮನೆಗೆ....

``ಹಾಗೆ ಹೇಳಬೇಡಿ, ಓಂಕಾರಶೆಟ್ಟರೆ... ಮಧ್ಯದಲ್ಲಿಯೇ ಪ್ರಾರಂಭಿಸಿದ ವಸಂತಕ : ``ಯಾರು ಬಡವರು, ಯಾರು ಶ್ರೀಮಂತರು ! ಇದೆಲ್ಲಾ ಒಂದು ಸುತ್ತುತ್ತಿರುವ ಚಕ್ರ. ಅದರ ಸನ್ನಿವೇಶಗಳಿಗೆ ಅನುಗುಣವಾಗಿ ನಾವು ಹೊಂದಿಕೊಳ್ಳಬೇಕಾಗುತ್ತದೆ. ಅದೇತಾನೇ ಜೀವನ ಎನ್ನುವುದು ? ನೋಡಿ, ನಿಮ್ಮ ಮುಂದೆ ಈಗ ಮಹತ್ತರವಾದ ಒಂದು ಅವಕಾಶ ಬಂದು ನಿಂತಿದೆ. ತಾನು ಬಂದ ವಿಷಯಕ್ಕೆ ಪೀಠಿಕೆ ಹಾಕಿದ ವಸಂತಕ.

ಮಾತಿನ ಸುಳುಹು ಓಂಕಾರನಿಗೆ ಸ್ವಲ್ಪಮಟ್ಟಿಗೆ ತಿಳಿಯಿತು. ಆದರೆ ಅದನ್ನು ವ್ಯಕ್ತಪಡಿಸದೆ:

``ಏನು ಸ್ವಾಮಿ, ನೀವು ಹೇಳಿದುದು ತಿಳಿಯಲಿಲ್ಲ ಎಂದ.

ಓಂಕಾರ ಶೆಟ್ಟರೆ, ನಿಮಗಾಗಲೇ ಎಲ್ಲವೂ ಅರ್ಥವಾಗಿರಬೇಕೆಂದುಕೊಂಡಿದ್ದೆ.