ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೮೯


ಬಹುಕಾಲದ ತನ್ನ ತಪಸ್ಸು ಸಿದ್ಧಿಸುವ ಮುಹೂರ್ತವನ್ನು ನಿರೀಕ್ಷಿಸುತ್ತಿರುವ ಯೋಗಿಯಂತೆ ಮಹಾದೇವಿ ಕಲ್ಯಾಣದತ್ತ ದೃಷ್ಟಿಯನ್ನು ಹರಸಿದ್ದಳು. ಗೂಡನ್ನು ಸೇರಿಕೊಳ್ಳುವ ಹಕ್ಕಿ, ಗೂಡಿನ ಸುತ್ತ ಸ್ವಲ್ಪ ಹೊತ್ತು ಹಾರಾಡಿ ಅನಂತರ ಒಳಗೆ ಹೋಗುವಂತೆ, ಕಲ್ಯಾಣವನ್ನು ಪ್ರವೇಶಿಸುವ ಮುನ್ನ ಮಹಾದೇವಿಯ ದೃಷ್ಟಿ, ಕಲ್ಯಾಣದ ಸುತ್ತ ಪ್ರದಕ್ಷಿಣೆಯನ್ನು ಹಾಕುತ್ತಿರುವಂತೆ ತೋರುತ್ತಿತ್ತು.

ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದಳು. ಸೂರ್ಯನಾಗಲೇ ಇಳಿಮುಖವಾಗುತ್ತಿದ್ದ. ಸಾಯಂಕಾಲದ ಗಾಳಿ ಕಲ್ಯಾಣದತ್ತಲಿಂದ ಬೀಸುತ್ತಾ ಮಹಾದೇವಿಗೆ ಸ್ವಾಗತವನ್ನು ನೀಡುವಂತಿತ್ತು. ಮರಗಿಡಗಳೆಲ್ಲ ತಲೆಬಾಗಿ ಕರೆಯುತ್ತಿದ್ದವು. ಮಹಾದೇವಿ ಮೇಲೆದ್ದು ನಡೆಯತೊಡಗಿದಳು.

ಎದುರಿನಿಂದ ಒಬ್ಬ ಜಂಗಮ ಬರುತ್ತಿರುವುದನ್ನು ಮಹಾದೇವಿ ನೋಡಿದಳು. ಮಹಾದೇವಿ ಬರುತ್ತಿರುವುದನ್ನು ಕಂಡು ಆತ ಅಲ್ಲಿಯೇ ಒಂದು ಮರದ ಬುಡದಲ್ಲಿ ನಿಂತ. ಮಹಾದೇವಿ ಹತ್ತಿರ ಹತ್ತಿರ ಬರುತ್ತಿದ್ದಳು.

ಒಂದೇ ಸಮನೆ ಅವಳನ್ನು ದಿಟ್ಟಿಸಿ ನೋಡತೊಡಗಿದ್ದ ಆ ವ್ಯಕ್ತಿ, ಅವಳು ಸಮೀಪಕ್ಕೆ ಬಂದೊಡನೆಯೇ ಓಡಿಬಂದು :

``ಮಹಾದೇವಿ, ಕ್ಷಮಿಸು ತಾಯಿ ಎಂದು ನಮಸ್ಕರಿಸಿದ.

ಮಹಾದೇವಿ ಬೆಚ್ಚಿದಳು. ಹಿಂದಕ್ಕೆ ಸರಿದು ಅವನನ್ನೇ ನೋಡುತ್ತಾ ಕೇಳಿದಳು:

ನೀನಾರು, ಅಣ್ಣ ? ನನ್ನ ಹೆಸರು ನಿನಗೆ ಹೇಗೆ ಗೊತ್ತಾಯಿತು ?

``ನಿನ್ನ ಕೀರ್ತಿ ಕಲ್ಯಾಣದಲ್ಲಿ ಆಗಲೇ ಜನಜನಿತವಾಗಿದೆ, ತಾಯಿ. ಇಂದು ಇಲ್ಲಿಗೆ ಬರುವ ನಿನ್ನನ್ನು ಗುರುತಿಸಿ ಕರೆದು ತರುವುದಕ್ಕಾಗಿಯೇ ಬಸವಣ್ಣನವರು ನನ್ನನ್ನು ಕಳುಹಿಸಿಕೊಟ್ಟಿದ್ದಾರೆ. ನಾನು ಕಿನ್ನರಿ ಬೊಮ್ಮಣ್ಣ.

ಮಹಾದೇವಿ ಅಚ್ಚರಿಯಿಂದ ಅವನನ್ನೇ ನೋಡಿದಳು.

``ಶರಣ ಕಿನ್ನರಿಬೊಮ್ಮಣ್ಣ, ನಿನಗೆ ನಮೋ ನಮಃ ! ನೀನು ನನಗೆ ವಂದಿಸುವುದೇ, ಅಣ್ಣ?

``ಇಲ್ಲ ತಾಯಿ, ನಿನ್ನ ಮಹತ್ವವನ್ನು ತಿಳಿಯದೆ ಅಪರಾಧವನ್ನು ಮಾಡಿದೆ. ಆದಕ್ಕಾಗಿ ಕ್ಷಮಿಸಬೇಕು. ಅದೇನೆಂಬುದನ್ನು ಹೇಳಿಬಿಡುತ್ತೇನೆ. ನೀವಿನ್ನೂ ಹರೆಯದ ತರುಣಿ ಮತ್ತು ರೂಪವತಿ ಎಂದು ಕೇಳಿದ್ದ ನಾನು ನಿಮ್ಮ ಮನೋನಿಗ್ರಹದ ಪರೀಕ್ಷೆಯನ್ನು ಮಾಡಬೇಕೆಂದು ಮನಸ್ಸು ಮಾಡಿದೆ. ಒಡೆಯರು ಹೇಳಿದ ಕೆಲಸವನ್ನು ನಿರ್ವಹಿಸುವುದನ್ನು ಬಿಟ್ಟು ಇಲ್ಲದ ಅಧಿಕಪ್ರಸಂಗಕ್ಕೆ ಕೈಯಿಟ್ಟೆ.