ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧೬
ಕದಳಿಯ ಕರ್ಪೂರ


ಹಿಂದೊಮ್ಮೆ ಪ್ರಭುದೇವ ಸಂಚಾರವನ್ನು ಕೈಗೊಂಡು ಸಾಧಕರನ್ನು ಉದ್ಧರಿಸುತ್ತಾ ನಡೆದಿರುವಾಗ ಶ್ರೀಶೈಲದಲ್ಲಿ ಕೆಲವು ದಿನ ಇದ್ದ. ಅಲ್ಲಿಂದ ಕದಳಿಯವನಕ್ಕೂ ಹೋಗಿದ್ದ. ಆದರೆ ಇಂದು ಇದ್ದಕ್ಕಿದ್ದಂತೆಯೇ ಅದು ಮತ್ತೇಕೆ ತನ್ನ ಮುಂದೆ ಮೂಡಿ ಬರುತ್ತಿದೆಯೆಂದು ಆಶ್ಚರ್ಯವಾಯಿತು.

ಮತ್ತೆ ನೋಡಿದ ಇದೇನಿದು ! ಕದಳಿ ವನದ ಗುಹೆಯಲ್ಲಿ ಮಹಾದೇವಿ! ಮಲ್ಲಿಕಾರ್ಜುನನ ಜ್ಯೋತಿರ್ಲಿಂಗದ ತೇಜಸ್ಸು ಮೂಡಿ ಗುಹೆಯನ್ನೆಲ್ಲಾ ವ್ಯಾಪಿಸುತ್ತಿದೆ. ಮಹಾದೇವಿ ಅದನ್ನು ಅಪ್ಪಿಕೊಂಡಳು. ಅದರಲ್ಲಿ ಲೀನವಾಗಿ ಬಯಲಾದಳು.

ಪ್ರಭುದೇವನಿಗೆ ಅರ್ಥವಾಯಿತು. ಮಲ್ಲಿಕಾರ್ಜುನನ ಮೀಸಲು ಹೆಣ್ಣು ಮಹಾದೇವಿ, ಕದಳಿಯ ವನದಲ್ಲಿ ಆತನೊಡನೆ ಸಮರಸವಾಗಬೇಕೆಂಬುದು ಆತನ ಸಂಕಲ್ಪವಾದರೆ, ಅದಕ್ಕೆ ಸಹಾಯಕವಾಗುವುದು ತನ್ನ ಕರ್ತವ್ಯವೆಂದು ಭಾವಿಸಿದ ಪ್ರಭುದೇವ.

ಇದನ್ನು ಕುರಿತೇ ಬಸವಣ್ಣನೊಡನೆ ಮಾತನಾಡುತ್ತಿದ್ದ. ಅಷ್ಟರಲ್ಲಿ ಬಂದಿದ್ದಳು ಮಹಾದೇವಿ.

``ಮಹಾದೇವಿ, ಬಸವಣ್ಣ ಹೇಳಿದಂತೆ ನಿನ್ನ ಸಾಧನೆ ನಮಗೆಲ್ಲಾ ತೃಪ್ತಿಯನ್ನುಂಟುಮಾಡಿದೆ. ಹೇಳಿದ ಪ್ರಭುದೇವ.

``ಆದರೆ ಪ್ರಭುವೇ... ನಿಜ ಹೇಳಬೇಕೆಂದರೆ ನನಗೇ ಸಂಪೂರ್ಣ ತೃಪ್ತಿ ಲಭಿಸಿಲ್ಲ. ಅನುಮಾನಿಸುತ್ತಾ ಹೇಳಿದಳು.

``ಅದು ಸಹಜ ತಾಯಿ. ಪದರಪದರಗಳನ್ನೇರಿ ಶ್ರೀಗಿರಿಯ ತುಟ್ಟತುದಿಯನ್ನು ಮುಟ್ಟಬೇಕೆಂದು ಬಯಸುವ ಚೇತನ, ಒಂದು ಪರ್ವತದ ತುದಿಯನ್ನು ಏರುವುದರಿಂದ ತೃಪ್ತವಾಗಲಾರದು. ಆದರೆ ಒಂದೊಂದಾಗಿ ದಾಟಿ ಶ್ರೀಗಿರಿಯ ಚನ್ನಮಲ್ಲಿಕಾರ್ಜುನನನ್ನು ಕಾಣಬೇಕಾಗುತ್ತದೆ.

ಈ ಮಾತಿನಿಂದ ಮಹಾದೇವಿ ರೋಮಾಂಚನಗೊಂಡಳು. ಗುರುಲಿಂಗರಿಂದ ಕೇಳಿದ ಶ್ರೀಶೈಲದ ವರ್ಣನೆಯ ಚಿತ್ರ ಅಸ್ಪಷ್ಟವಾಗಿ ಕಣ್ಣುಮುಂದೆ ಸುಳಿಯಿತು. ತನ್ನ ಎಳೆಯ ವಯಸ್ಸಿನಿಂದಲೂ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಶ್ರೀಶೈಲದ ಚಿತ್ರ ಮತ್ತು ಕದಳಿಯ ಕಲ್ಪನೆ ಜಾಗ್ರತವಾಯಿತು.

ಇವುಗಳ ಜೊತಯಲ್ಲಿಯೇ ಸುಳಿಯುತ್ತಿದ್ದ ಕಲ್ಯಾಣದ ಕನಸು ಇಂದು ನನಸಾಗಿದೆ. ಇನ್ನು ಅವುಗಳನ್ನು ನನಸು ಮಾಡಿಕೊಡುವುದರ ಮುನ್ಸೂಚನೆಯನ್ನು ಪ್ರಭುದೇವ ನುಡಿಯುತ್ತಿರುವನೇನೋ ಎಂಬ ಭಾವನೆ ಸುಳಿಯಿತು ಮಹಾದೇವಿಗೆ.