೨೫.ವಿರಜಾದೇವಿಯಂತಃಪುರ
ಗಂಗಾಯಮುನಾಸಂಗಮದಲ್ಲಿ ಮೂರ್ತಿಗೊಂಡ ಭರತಖಂಡದ ಸತ್ ಕೀರ್ತಿಯೋ ಎಂಬಂತಿರುವ ಚಕ್ರವರ್ತಿನಿ ವಿರಜಾದೇವಿಯು ಸುಖಾಸನದಲ್ಲಿ ಕುಳಿತು ಪತಿದೇವನನ್ನು ಇದಿರುನೋಡುತ್ತಿದ್ದಾಳೆ. ಚಂದ್ರನು ಆಕಾಶದ ನಟ್ಟನಡುವೆ ನಿಂತು, ಚಕ್ರವರ್ತಿಯು ಬೆಳುಗೊಡೆಯ ಮೇಲಿನ ಉಂಗುರವೆಂಬಂತೆ ಇದ್ದು ಆಕಾಶವನ್ನೆಲ್ಲ ಒಂದು ಕಾಂತಿಮಯ ಧವಳಚ್ಚತ್ರವಾಗಿಸಿದ್ದಾನೆ. ಆ ಬೆಳದಿಂಗಳಲ್ಲಿಯೂ ಮಸಕಾಗದೆ ಅಲ್ಲಲ್ಲಿ ಮೆರೆಯುತ್ತಿರುವ ನಕ್ಷತ್ರಗಳೂ ಆ ಛತ್ರವನ್ನು ಕೀಲಿಸಿರುವ ವಜ್ರಮಣಿಗಳಂತೆ ಕಾಣುತ್ತವೆ. ದೂರದ ದಿಗಂತದಲ್ಲಿ ಮಿಣುಕುತ್ತಿರುವ ನಕ್ಷತ್ರಪುಂಜಗಳು ಆ ಬೆಳ್ಗೊಡೆಯ ಅಂಚಿನಲ್ಲಿ ಕಟ್ಟಿರುವ ಮುತ್ತಿನ ಗೊಂಚಲುಗಳಂತೆ ಇವೆ.
ವಿರಜಾದೇವಿಯು ತಾನು ಪಿತೃಕನ್ಯೆ, ಪರಿಶುದ್ಧಳು ಎಂಬುದನ್ನು ತೋರಿಸಿಕೊಳ್ಳಲೆಂಬಂತೆ, ನಿರ್ಮಲವಾದ ಬಿಳಿಯುಡೆಯುಟ್ಟಿದ್ದಾಳೆ. ಆಕೆಯ ಸದ್ಗುಣಗಳಂತೆ ಆ ಸೀರೆಯಲ್ಲಿ ಬೂಟಾಟಗಳ ನಡುವಿನ ರತ್ನಗಳ ಅಮಿತವಾದ ಕಾಂತಿಯನ್ನು ಎಲ್ಲೆಲ್ಲೂ ಪ್ರಸರಿಸಬೇಕೆಂದು ವಿಜಿಗೀಷುವಾದ ಕ್ಷತ್ರಿಯ ವೀರನಂತೆ ಪ್ರಕಾಶಿಸುತ್ತಿವೆ. ದಾಸಿಯರು ರತ್ನಖಚಿತವಾದ ಚಾಮರಗಳನ್ನು ಬೀಸಲು ಸಿದ್ಧರಾಗಿದ್ದಾರೆ. ಎದುರಿಗೊಬ್ಬಳು ವೀಣೆಯನ್ನು ಮೃದುವಾಗಿ ನುಡಿಸುತ್ತಾ ಕುಳಿತಿದ್ದಾಳೆ.
ಬಿಸಿಲುಮಚ್ಚಿನ ನಾಲ್ಕು ಮೂಲೆಗಳಲ್ಲು ಪಾರಿಜಾತಗಳು ಕಟ್ಟೆಗಳಲ್ಲಿ ಬೆಳೆದಿವೆ. ಮೇಲೆಲ್ಲಾ ತಂತಿಯ ಜಾಲರಿಗಳನ್ನು ಹರಡಿ, ಅದರ ಮೇಲೆ ಜಾಜಿ ಮಾಲತಿ ಇರುವಂತಿಗೆ ಬಳ್ಳಿಗಳನ್ನು ಅರಳಿಸಿದ್ದಾರೆ. ಅಲ್ಲಲ್ಲಿ ರತ್ನಮಯವಾದ ಭಿತ್ತಿಗಳನ್ನುಳ್ಳ ಕೃತ್ರಿಮ ಪುಷ್ಕರಿಣಿಗಳಲ್ಲಿ ತಾವರೆ ಕನ್ನೈದಿಲೆಗಳನ್ನು ಬೆಳೆಸಿದ್ದಾರೆ. ಚಕ್ರವರ್ತಿಯ ಸೇವೆಗೆಂದು ಪುಷ್ಟಪುಷ್ಟವೂ ಹುರುಪಿಸುತ್ತಿದೆಯೇ ಎಂಬಂತೆ, ಪಾರಿಜಾತ, ಜಾಜಿ, ಮಾಲತಿ, ಇರುವಂತಿಗೆ, ಜಲಜಗಳೂ ತಮ್ಮ ತಮ್ಮ ಸುಗಂಧವನ್ನು ಸೂರೆಗೊಡುತ್ತಿವೆ. ತಂಗಾಳಿಯು ಅದನ್ನೆಲ್ಲ ಹೊತ್ತು ತರಲಾರದೆ ಮುಕ್ಕರಿಯುವಂತೆ ಊಸ್ ಎಂದುಕೊಂಡು ನಿಧಾನವಾಗಿ ಬೀಸುತ್ತಿದೆ.