ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಪೋಯಾತ್ರೆ
೧೫೫


``ಹಾಂ ! ಉಡುತಡಿಯಲ್ಲಿ ಓಂಕಾರಶೆಟ್ಟರ ಮಗಳು ಮಹಾದೇವಮ್ಮನೇ ಏನಮ್ಮ ನೀನು?

ಮಹಾದೇವಿ ಸಮ್ಮತಿಸೂಚಕವಾಗಿ ಸುಮ್ಮನಿದ್ದಳು. ಮತ್ತೆ ಶಿವಯ್ಯನವರೇ ಮುಂದುವರಿಸಿದರು :

``ಇದೇನಮ್ಮ ಇದು ! ನೀನು ಇಲ್ಲಿ, ಈ ವೇಷದಲ್ಲಿ ? ಉಡುತಡಿಯ ಕೌಶಿಕಮಹಾರಾಜನ್ನು ಮೆಚ್ಚಿ ಮದುವೆಯಾಗಿ ಇನ್ನೂ ನಾಲ್ಕಾರು ದಿನಗಳು ಕಳೆದಿಲ್ಲವೆಂದು ಕೇಳಿದೆ... ಆಗಲೇ...

ಗಾಡಿಯಲ್ಲಿದ್ದವರೆಲ್ಲರಿಗೂ ಕುತೂಹಲವನ್ನು ಹುಟ್ಟಿಸಿತ್ತು ಈ ಮಾತಿನ ಬೆಳವಣಿಗೆ. ರುದ್ರಮುನಿಯಾಗಲೀ ಅಪರ್ಣೆಯಾಗಲೀ ಮಾತನ್ನೇನೂ ಆಡದಿದ್ದರೂ, ಕುತೂಹಲಕರವಾದ ಮೌನದಿಂದ ಇದನ್ನೇ ಕೇಳುತ್ತಿದ್ದರು.

ಮಹಾದೇವಿಗೆ ಶಿವಯ್ಯನವರ ಮಾತುಗಳನ್ನು ಕೇಳುತ್ತಿದ್ದಂತೆಯೇ ಆಶ್ಚರ್ಯದ ಜೊತೆಗೆ ದುಃಖವೂ ಆಯಿತು. ಮಧ್ಯದಲ್ಲಿಯೇ ಕೇಳಿದಳು :

``ಇದೇನು ಸ್ವಾಮಿ ? ಈ ನನ್ನ ಕಥೆಯನ್ನೆಲ್ಲಾ ನಿಮಗಾರು ಹೇಳಿದರು?

``ಈ ಸುತ್ತುಮುತ್ತಣ ಗ್ರಾಮಗಳಲ್ಲೆಲ್ಲಾ ಇದೇ ಸಮಾಚಾರವಾಗಿದೆಯಮ್ಮ. ನೆನ್ನೆ ತಾಳಗುಂದದಲ್ಲಿ ಇದನ್ನು ಕೇಳಿದೆ.

``ತಾಳಗುಂದದಲ್ಲಿ ! ಮಹಾದೇವಿ ಆಶ್ಚರ್ಯ ವ್ಯಕ್ತಪಡಿಸಿದಳು.

``ಹೌದು ; ಈಕೆ ನನ್ನ ಮಗಳು ಅಪರ್ಣೆ, ತಾಳಗುಂದಕ್ಕೆ ಕೊಟ್ಟಿದ್ದೇನೆ. ಸಂಕ್ಷೇಪವಾಗಿ ತಮ್ಮ ಪರಿಚಯವನ್ನು ಹೇಳತೊಡಗಿದರು ಶಿವಯ್ಯನವರು. ಅಷ್ಟರಲ್ಲಿ ಸ್ವಲ್ಪ ಹಾಸ್ಯಪ್ರಕೃತಿಯವನಾದ ರುದ್ರಮುನಿಗೆ ಅವಕಾಶ ಸಿಕ್ಕಂತಾಗಿ ತಾನೇ ಹೇಳಿದ :

``ನಾನೇ ಇವರ ಅಳಿಯ - ರುದ್ರಮುನಿ.

ಎಲ್ಲರೂ ನಕ್ಕರು. ಅಪರ್ಣೆಯ ಮುಖ ಕೆಂಪಾಯಿತು. ಮತ್ತೆ ಶಿವಯ್ಯನವರು ಮುಂದುವರಿಸಿದರು :

``ಶ್ರಾವಣಮಾಸದಲ್ಲಿ, ನಮ್ಮ ಮನೆಯಲ್ಲಿ ಶಿವಕಥಾಪ್ರವಚನ ನಡೆಯುತ್ತದೆ. ಅದಕ್ಕಾಗಿ ಇವರನ್ನು ಕರೆದುಕೊಂಡು ಬರಲು ತಾಳಗುಂದಕ್ಕೆ ಹೋಗಿದ್ದೆವು. ಅಲ್ಲಿ ಈ ವಿಷಯವೆಲ್ಲಾ ತಿಳಿಯಿತು. ಕೇಳಿ ನನಗೇನೋ ನಿಜವಾಗಿಯೂ ದುಃಖವಾಯಿತು. ಓಂಕಾರಶೆಟ್ಟರು ಮತ್ತು ಲಿಂಗಮ್ಮ ಇಬ್ಬರೂ ನನಗೆ ಚೆನ್ನಾಗಿ ಗೊತ್ತಮ್ಮ. ಬಹಳ ದಿನಗಳ ಹಿಂದೆ, ಆಗ ನೀನಿನ್ನೂ ಚಿಕ್ಕವಳು, ಒಂದು ತಿಂಗಳು ಇದೇ ಶ್ರಾವಣಮಾಸದಲ್ಲಿ ನಿಮ್ಮ ಊರಿನಲ್ಲಿ ನಾನಿದ್ದೆ. ಆಗ ನಾನಿನ್ನೂ,