ಇಲ್ಲಿ ಗೃಹಚ್ಛಿದ್ರಗಳನ್ನುಂಟುಮಾಡಿ, ಕಾಮಮೋಹಿನಿಯನ್ನು ಮರುಳು ಮಾಡಿ, ಶಂಬರನ ವಿಷಯದಲ್ಲಿ ಆಕೆಗೆ ಜುಗುಪ್ಸೆಯನ್ನು ಹುಟ್ಟಿಸಿ, ಅವಳನ್ನು ಅಪಹರಣಮಾಡಿ, ಇಷ್ಟು ಜನ ಬಂಧುಮಿತ್ರರ ಮುಂದೆ ನನಗೆ ಅನಿರ್ವಚನೀಯವಾದ ಅಪಮಾನವನ್ನೂ ಕ್ಲೇಶವನ್ನೂ ಉಂಟುಮಾಡಿದ್ದೀಯೆ. ಶಂಬರನು ಇದರಿಂದ ಬುದ್ಧಿಭ್ರಂಶವನ್ನು ಹೊಂದಿ, ಉನ್ಮತ್ತಾವಸ್ಥೆಯಲ್ಲಿರುತ್ತಾನೆ. ನಾನು ಜೀವಿಸಿದ್ದರೂ ಸತ್ತವನಂತೆಯೇ ಇರುತ್ತೇನೆ. ಈ ಅನರ್ಥಗಳಿಗೆ ನೀನೇ ಕಾರಣಭೂತನು. ಕಾಮಮೋಹಿನಿಯನ್ನು ತೋರಿಸುತ್ತೀಯೋ? - ನಿನ್ನ ದೌರಾತ್ಮ್ಯಕ್ಕಾಗಿ ನಿನ್ನ ಪ್ರಾಣವನ್ನು ಬಲಿಯಾಗಿ ಒಪ್ಪಿಸುತ್ತಿಯೊ ?
ಪರಂತಪ- ಎಲೈ ಸುಮಿತ್ರನೇ ! ನೀನು ವೃದ್ದನು; ನನ್ನ ವಿಶ್ವಾಸಕ್ಕೆ ಪಾತ್ರನು ; ನನ್ನ ಮಿತ್ರನಾದ ಮಾಧವನಿಗೆ ಸಹೋದರನು. ಈ ಕಾರಣ ಗಳಿಂದ, ನೀನು ಕೋಪಪರವಶನಾಗಿ ಯಕ್ಷಾಯುಕ್ತ ವಿಚಾರಹೀನನಾಗಿ ಆಡತಕ್ಕ ದುರ್ಭಾಷೆಗಳನ್ನು ಮನ್ನಿಸುವೆನು. ನೀನು ನನ್ನಲ್ಲಿ ಆರೋಪಿಸಿರುವ ಅಪರಾಧಗಳ ಅಸತ್ಯಗಳು. ನಾನು ನಿನ್ನ ಮನೆಗೆ ಬಂದು ಸತ್ಕೃತನಾದದ್ದು ನಿಜ; ಆದರೆ, ಈ ಸತ್ಕಾರದ ಬಲದಿಂದ ನೀನು ಇಂಥ ಅಪರಾಧಗಳನ್ನು ಆರೋಪಿಸುವೆಯೆಂದು ತಿಳಿದಿದ್ದರೆ, ನಿನ್ನ ಮನೆಯಲ್ಲಿ ಗಂಗಾಮೃತಪಾನವನ್ನು ಕೂಡ ಮಾಡುತ್ತಿರಲಿಲ್ಲ. ಕಾಮಮೋಹಿನಿಗೆ ನಾನು ದುರ್ಬೋಧನೆಯನ್ನು ಮಾಡಿದವನೂ ಅಲ್ಲ; ನಿನ್ನ ಮನೆಯಲ್ಲಿ ಗೃಹಚ್ಛಿದ್ರವನ್ನುಂಟುಮಾಡಿದವನೂ ಅಲ್ಲ; ಆ ಚಂದ್ರಮುಖಿಯನ್ನು ಅಪಹರಿಸಿ ನಾನು ರವಾನಿಸಲೂ ಇಲ್ಲ. ಈ ಆರೋಪಣೆಗಳನ್ನು ನೀನು ವಾಪಸು ತೆಗೆದುಕೊಳ್ಳದಿದ್ದರೆ, ಈ ನಿಮಿಷದಲ್ಲಿ ನಿನಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.
ಸುಮಿತ್ರ- ಈ ಕಾಮಮೋಹಿನಿಯನ್ನು ಶಂಬರನಿಗೆ ಕೊಡಬೇಕೆಂದು ನಾನು ನಿಷ್ಕರ್ಷೆ ಮಾಡಿರುವುದು ನಿನಗೆ ತಿಳಿಯದೆ? ಈ ವಿವಾಹಕ್ಕೆ ವಿಘ್ನವನ್ನು ನೀನು ಮಾಡಿಲ್ಲವೆ? ಮಾಧವನ ಆಸ್ತಿಯು ನಿನಗೆ ಇರಲಿ; ಕಾಮಮೋಹಿನಿಯಾದರೂ ಶಂಬರನಿಗೆ ಇರಲೆಂದು ನಾನು ಸಂಕಲ್ಪಿಸಿದ್ದಾಗ, ನೀನು ಈ ವಿವಾಹಕ್ಕೆ ವಿಘ್ನವನ್ನು ಮಾಡಿಲ್ಲವೆ? ಇವಳು ಮನೆಯನ್ನು ಬಿಟ್ಟು ಹೋಗುವುದಕ್ಕೆ ನೀನೇ ಕಾರಣನು,