ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ನಡೆದದ್ದೇ ದಾರಿ ಗೋಪಾಲಾಚಾರ್ಯರ ಕೈಯ್ಯಲ್ಲಿನ ಕಾಯಿ ಕೈಯ್ಯಲ್ಲೇ ಇತ್ತು. ಕಣ್ಣು ರಾಮಗೌಡರ ಕಣ್ಣಲಿ. ಎರಡೂ ಗುಂಪುಗಳ ಜನಕ್ಕೆ ಈ ಮೌನ ಅಸಹ್ಯವಾಗಿ ಒಮ್ಮೆಲ್ಲೇ ನೂಕುನುಗ್ಗಲು ಪ್ರಾರಂಭವಾಯಿತು. ಹೋ ಎಂಬ ಅರಚಾಟದಲ್ಲಿ ರಾಮಗೌಡರ ಹಿಂದಿನಿಂದ ಮುಂದೆ ನುಗ್ಗಿದ ಒಬ್ಬಾತ ಅವರ ಕೈಯಲ್ಲಿನ ಕಾಯಿ ಕಸಿದು ಒಡೆದ. ಕಾಯಿ ಒಡೆಯಿತೋ ಇಲ್ಲವೋ ಮುಗಿಲುಮುಟ್ಟುವಂತೆ ಕಿರುಚಿತು ಆಚಾರ್ಯರ ಹಿಂದಿನ ಜನ. ಗದ್ದಲದಲ್ಲಿ ಆಚಾರ್ಯರ ಕೈಯಲ್ಲಿನ ಕಾಯಿ ಎಲ್ಲಿ ಬಿತೋ, ಮುಂದೆ ನುಗ್ಗಿದ ಕೇಶವಾಚಾರಿಯ ಗುದ್ದು ಯಾರ ಬೆನ್ನ ಮೇಲೆ ಬಿತೋ, ವೀರಭದ್ರನ ಕೈಯಲ್ಲಿಯ ಲಾಠಿ ಯಾರ ಕಾಲು ಮುರಿಯಿತೋ, ಯಾರು ಯಾರ ತಲೆ ಒಡೆದರೋ, ಯಾರು ಬ್ರಾಹ್ಮಣರೋ, ಯಾರು ಶೂದ್ರರೋ, ಒಟ್ಟು ಗುಡಿಯ ಆವಾರವೆಲ್ಲ ರಣರಂಗ.

                                    - ಎಲ್ಲದಕ್ಕೆ ಮೂಕಪ್ರೇಕ್ಷಕನಾಗಿ ನಿಂತಿದ್ದ ಗುಡಿಯಲ್ಲಿನ ಆಂಜನೇಯ.
                                                              ೩ 
ಅಂದು ಸಂಜೆ ಹೊಲದಿಂದ ಸೀದಾ ಮನೆಗೆ ಬಂದ ವೀರಭದ್ರ ಗೌಡ. ದಿನಾ ದಾರಿಯಲ್ಲಿನ ಬಸಪ್ಪನ ಚಾದಂಗಡಿಯಲ್ಲಿ ಬೆಂಚಿನ ಮೇಲೆ ಕುಕ್ಕುರುಗಾಲು ಹಾಕಿ ಕೂತು ಚಹಾ ಕುಡಿಯುತ್ತ ಸಂಜೆ ತಾಸೆರಡು ತಾಸು ಕಳೆಯುವುದು ಅವನ ವಾಡಿಕೆ. ಆಗ ಊರಿನ ಇತರ ಲಿಂಗಾಯತ ಹುಡುಗರೂ ಅಲ್ಲಿ ನೆರೆಯುವರು. ಅವರಿಗೆಲ್ಲ ಆತ ಇತ್ತೀಚಿಗೆ ಹನುಮಾಪುರದ ಹೊರಗೆ ಜಗತ್ತಿನಲ್ಲಿ ಹೇಗೆ ಅನ್ಯ ಜಾತಿಯ ಜನ ಮುಂದೆ ಬರುತ್ತಿದ್ದಾರೆ, ಹೇಗೆ ಈ ಹೊಸ ಜಗತ್ತಿನಲ್ಲಿ ಮೊದಲಿನ ಹಾಗೆ ಎಲ್ಲ ದಿಕ್ಕೂ ಬ್ರಾಹ್ಮಣರ ಕಡೆ ನೋಡಬೇಕಾದ ಪ್ರಸಂಗ ಇಲ್ಲವೇ ಇಲ್ಲ, ಹೇಗೆ ಹೊಸ ಕ್ರಾಂತಿಯೊಂದು ಸುರುವಾಗಿದೆ, ಹೇಗೆ ಈ ಬ್ರಾಹ್ಮಣರನ್ನು ಎಲ್ಲ ರೀತಿಯಿಂದ ದೂರವಿರಿಸಿದಾಗ ಮಾತ್ರ ತಮ್ಮ ಉದ್ಧಾರ ಸಾಧ್ಯ - ಇತ್ಯಾದಿ ಬಗ್ಗೆ ಆವೇಶದಿಂದ ಹೇಳುತಿದ್ದ. ಈಗೀಗ ಈ ಸಭೆಗೆ ಒಕ್ಕಲಿಗರೂ ಬಂದು ಸೇರುತ್ತಿದ್ದರು. ಆದರೆ ಇಂದು ಮಧ್ಯಾಹ್ನದ ಗದ್ದಲದಿಂದ ಆತನ ಮನಸ್ಸು ವ್ಯಗ್ರವಾಯಿತ್ತು. ಅಂತೆಯೇ ಆತ ಸೀದಾ ಮನೆಗೆ ನಡೆದುಬಂದ. ಕಟ್ಟೆಯ ಮೇಲೆ ಹುಕ್ಕಾ ಸೇದುತ್ತ ಕೂತ ಅಪ್ಪನ ಕಡೆ ನೋಡದೆ, ಒಳಗಡೆ ಜಗುಲಿಯ ಮೇಲಿನ ಒಂದು ಮೂಲೆಯಲ್ಲಿ ಎಂದಿನಂತೆ ನರಳುತ್ತ ಬಿದ್ದು ಕೊಂಡಿದ್ದ ಸದಾರೋಗಿ ಹೆಂಡತಿಯನ್ನು ಮಾತಾಡಿಸದೆ, ಸೀದಾ ಒಳಗೆ  ಹೋದ. ಅಡಿಗೆ ಮನೆಯನ್ನು ತೊಳೆಯುತ್ತಿದ್ದ ತಾಯಿಯನ್ನು ನೋಡಿದಾಗ ಇಂದೇಕೋ ಸಂಜೆಯ ಹೊತ್ತಿನಲ್ಲಿ ಇಡೀ ಮನೆಯನ್ನು ತೊಳೆದಿದ್ದು ಆತನ ಲಕ್ಷ್ಯಕ್ಕೆ ಬಂತು.