ಬಿಡುಗಡೆ
"ಸರೂ ಏ ಸರೂ...ಏಳಲ್ಲ ಬೆಳಗಾಗಿ ಹೋಗಿ ಎಷ್ಟೊತ್ತಾತು..." ಪ್ರೀತಿ ತುಂಬಿದ ಮೃದುವಾದ ದನಿಯಲ್ಲಿ ಆತ ಹೆಂಡತಿಯನ್ನು ಎಬ್ಬಿಸುತಿದ.
"ಉಮ್ ಉಮ್" ಬೆಳಗಿನ ಸವಿನಿದ್ದೆಯ ಮಂಪರಿನಿಂದ ಹೊರಬರಲು ಇಚ್ಛೆಸದ ಸರೋಜಾ ಮುಸುಕನ್ನು ಇನ್ನಷ್ಟು ಬಿಗಿಯಾಗಿ ಎಳೆದುಕೊಂಡಳು . ಆತ ಆಕೆಯ ಮುಸುಕು ಸರಿಸಿ ಹಣೆಯ ಮೇಲೆ ಹೂಮುತ್ತನ್ನೊತ್ತಿ ಮತ್ತೆ ಹೇಳಿದ. " ಜಾಣಮರಿ, ಏಳು, ಇವತ್ತು ಸೋಮವಾರ, ಇಬ್ರೂ ಡ್ಯೂಟಿಗೆ ಹೋಗಬೆಕ್ಕಲ್ಲ ?" ಹಾಗೆ ಹತ್ತಾರು ನಿಮಿಷ ಮುದ್ದುಗರೆದರೂ ಆಕೆ ಏಳದಿದ್ದಾಗ ಎದ್ದು ಹೋರಾಡುತ್ತ ಆತನೆಂದ," ನಿನ್ನೆ ರಾತ್ರಿ ಭಾಲೊತನಕ ಅಕೌಂಟ್ಸ್ ಬರೆಕೋತ ಕೂತಿದೆಲ್ಲ s , ಅದಕ್ಕ s ನಿನ್ನ ನಿದ್ದೆ ಮುಗುವಲ್ದು. ಅಡ್ಡಿಯಿಲ್ಲ , ಮಲಕೋ. ನಾನ s ಒಂದಿಷ್ಟು ಬ್ರೇಕ್ಫಾಸ್ಟ್ ರೆಡಿ ಮಾಡ್ತೀನಿ. ಆಮ್ಯಾಲ ಯೆಡ್ಡಿಯಂತ ." ಸರೋಜಾಗೆ ಅಂತಹ ಗಾಢ ನಿದ್ದೆಯೇನು ಹತ್ತಿರಲಿಲ್ಲ. ಆಕೆ ಮಂಚದ ಮೇಲೆ ಸುಖವಾಗಿ ಮಲಗಿದ್ದಂತೆಯೇ ಅಡಿಗೆಮನೆಯಿಂದ ಕೇಳಿಬರುತ್ತಿದ್ದ ಸದ್ದುಗಳಿಗೆ ಕಿವಿಕೊಟ್ಟಳು. ಹಾಲು ಕಾಯಿಸುತ್ತಿದಾನೆ ... ರವೆ ಹುರಿಯುತ್ತಿದ್ದಾನೆ ...ಉಪ್ಪಿಟ್ಟಿಗೆ ಒಗ್ಗರಣ್ಣೆ ಹಾಕುತ್ತಿದ್ದಾನೆ .... ಚಹಾಕ್ಕೆ ಎಸರು ಇಡುತ್ತಿದ್ದಾನೆ...ಡಬ್ಬಿಗಳನ್ನು ತಡಕಾಡುತ್ತಿದ್ದಾನೆ,ಬಹುಶಃ ಸಕ್ಕರೆ ಸಿಕ್ಕಿಲ್ಲ , ತೆಗದಿರಿಸಿದ್ದು ಮುಗಿದಿರಬೇಕು, ದೊಡ್ಡ ಡಬ್ಬಿಯೊಂದು ಕಪಾಟಿನಲ್ಲಿದೆ, 'ಸರೂ, ಸಕ್ಕರೆ ಎಲ್ಲಿದೆ ?' ಅಂತ ಬಹುಶಃ ಕೂಗುತ್ತಾನೆ ...ಇಲ್ಲ, ಹುಡುಕಾಟ ಮುಂದುವರಿಸಿದ್ದಾನೆ, ಮಲಗಿರುವ ಹೆಂಡತಿಗೆ ಡಿಸ್ಟರ್ಬ್ ಮಾಡಬಾರದೆಂದು ತಾನೇ ಹುಡುಕುತ್ತಿದ್ದಾನೆ...ಸಿಕ್ಕಿರಬೇಕು. ಸಿಗದೆ ಏನು ? ಎಲ್ಲಾ ಸಾಮಾನುಗಳು ಅಡಿಗೆಮನೆಯಲ್ಲೇ ಒಂದಿಲ್ಲೊಂದು ಡಬ್ಬಿಯಲ್ಲೋ ಬಾಟಲಿಯಲ್ಲೋ ಇದ್ದೇ ಇರುತ್ತವಲ್ಲ...ಹುಡುಕಿಕೊಳ್ಳುವಷ್ಟು ವ್ಯವಧಾನ ಇರಬೇಕಷ್ಟೆ. "ಸರೂ ಡಾರ್ಲಿಂಗ್ , ಚಹಾ-ತಿಂಡಿ ರೆಡಿ. ಈಗರೆ ಏಳು ಮಹಾರಾಯ್ತಿ" -ಆತ ಒಳಗಿನಿಂದ ಕೂಗಿದ. ಹೌದು ಈಗ ಏಳಲೇಬೇಕು. ಇಲ್ಲವಾದರೆ ತನ್ನ ಬ್ಯಾಂಕಿಗೆ ಆಮೇಲೆ ಅವನ ಆಫೀಸಿಗೆ ಹೊತ್ತಾಗಿ ಬಿಡುತ್ತದೆ...