ಪುಟ:ಕರ್ನಾಟಕ ಗತವೈಭವ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ಕರ್ನಾಟಕ ಗತವೈಭವ


ನ್ನು ಕನ್ನಡಿಗರ ಕೊನೆಯ ರಾಜಧಾನಿಯಾದ ವಿಜಯನಗರದ ವೈಭವವನ್ನು ಸಂಗ್ರಹವಾಗಿ ವರ್ಣಿಸುವೆವು. ಇರಾಣದ ರಾಯಭಾರಿಗಳೂ ಯರೋಪಿಯು ಪ್ರವಾಸಿಗಳೂ ವಿಜಯನಗರ ರಾಜ್ಯಕ್ಕೆ ಬಂದು ಆ ಪಟ್ಟಣವನ್ನು ನೋಡಿ ಬೆರಗಾಗಿ ಬೆರಳು ಕಚ್ಚಿರುವರು.
ನಿಕೊಲಿಸಕೋಂಟ ಎಂಬೊಬ್ಬ ಇಟಲಿ ದೇಶದ ಪ್ರವಾಸಿಯು ೧೪೨೦ ನೆಯ ಇಸವಿಯಲ್ಲಿ ಈ ಪಟ್ಟಣಕ್ಕೆ ಬಂದಿದ್ದನು. ಅವನು ಹೇಳಿದ ವರ್ಣನೆಯ ಸಾರಾಂಶವನ್ನು ಕೊಡುತ್ತೇವೆ.
" ಪಟ್ಟಣದ ಸುತ್ತಳತೆಯು ೬೦ ಮೈಲು ಇರುತ್ತದೆ. ಈ ಒಂದೇ ಪಟ್ಟಣದಲ್ಲಿ ೯೦,೦೦೦ ಸೈನಿಕರಿರುವರು. ಈ ಪಟ್ಟಣಕ್ಕೆ ಪ್ರಚಂಡವಾದ ಅಗಸೆ ಬಾಗಿಲಗಳು ಏಳು ಸುತ್ತಿನ ಭದ್ರವಾದ ಕೋಟೆಯಿರುವುದು. ನೀರಿನ ವಿಪುಲತೆಯಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಬನಗಳೂ ಭತ್ತದ ಮತ್ತು ಕಬ್ಬಿನ ತೋಟಗಳೂ ಕಂಗೊಳಿಸುವುವು. ಅಲ್ಲಲ್ಲಿ ಭವ್ಯವಾದ ಸುಂದರ ದೇವಾಲಯಗಳೂ ಅವಕ್ಕೆ ಹೊಂದಿ ಮಹಾ ಪಾಠಶಾಲೆಗಳೂ ವಿದ್ಯಾಲಯಗಳೂ ತುಂಬಿವೆ.”
ಬ್ದುಲ ರಜಕ ನೆಂಬ ಇರಾಣದ ರಾಯಭಾರಿಯು ೧೪೪೨ ನೆಯ ಇಸ್ವಿಯಲ್ಲಿ ಇಲ್ಲಿಗೆ ಬಂದಿದ್ದನು. ಆತನು ಈ ಪಟ್ಟಣವನ್ನು ಬಲು ಸುಂದರವಾಗಿ ಬಣ್ನಿಸಿರುವನು. ಅದೇನಂದರೆ :- ಈ ವಿಜಯನಗರದ *ರಾಯನ ವಶದಲ್ಲಿ ೩೦೦ ಬಂದರಗಳುಂಟು. ಎಡೆಬಿಡದೆ ಮೂರು ತಿಂಗಳು ಪ್ರವಾಸ ಮಾಡುವಷ್ಟು ಈ ರಾಜ್ಯ ವಿಸ್ತಾರವಿದೆ. ಈ ರಾಜನ ಹತ್ತಿರ ೧೧ ಲಕ್ಷ ಸೈನ್ಯವಿರುತ್ತದೆ. ಇಂಥ ವೈಭವ ಸಂಪನ್ನನಾದ ಬೇರೆ ಅರಸನನ್ನು ಕಾಣುವುದು ದುರ್ಲಭ. ಈ ವಿಜಯನಗರಕ್ಕೆ ಸರಿಗಟ್ಟುವ ಪಟ್ಟಣವನ್ನು ಕಣ್ಣುಗಳು ನೋಡಿಲ್ಲ, ಕಿವಿಗಳು ಕೇಳಿಲ್ಲ. ಅರಮನೆಯ ಮಗ್ಗಲಿಗೆ ಪಗಡಿಯ ಪಟದಂತೆ ಇದಿರು ಬದಿರಾಗಿ ನಾಲ್ಕು ಪೇಟೆಯ ಸಾಲುಗಳಿರುತ್ತವೆ. ಉತ್ತರಕ್ಕೆ ರಾಯನ ಅರಮನೆಯ ಮುಖ ಮಂಟಪವಿರುತ್ತದೆ. ಪೇಟೆಗಳ ಎರಡು ಮಗ್ಗಲಿಗೂ ಭವ್ಯವೂ ಎತ್ತರವೂ ಆದ ಉಪ್ಪರಿಗೆಯ ಸಾಲುಗಳು.


*ಆಗ ವಿಜಯನಗರದ ಅರಸರಿಗೆ ಮಾತ್ರ 'ರಾಯ' ರೆಂದು ಪ್ರಸಿದ್ಧಿಯಿತ್ತು, ಈಗ ನಾವೂ ರಾಯರೇ ನೀವೂ ರಾಯರೇ! ರಾಜ, ರಾಯ, ರಾವ ಈ ಅನುಕ್ರಮವಾಗಿ ರೂಪಗಳಲ್ಲಿ ಬದಲಾಗುತ್ತ ಬ೦ದಿರುತ್ತದೆ.