ಪುಟ:ಪರಂತಪ ವಿಜಯ ೨.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೬

ಪರಂತಪ ವಿಜಯ


ಅರ್ಥಪರ-ಅಹುದು.
ಸಮರಸಿಂಹ- ಇದಕ್ಕೆ ಯಜಮಾನನು ಶಂಬರನೋ?
ಅರ್ಥಪರ- ಅಹುದು.
ಸಮರಸಿಂಹ- ಈ ಶಂಬರನ ಪಿತಾಮಹಂದರಿಗೆ ಬರತಕ್ಕ ಒಂದು ಕೋಟಿ ದ್ರವ್ಯವು ನಮ್ಮ ದೇಶದ ಕೋರ್ಟಿನಲ್ಲಿ ಡಿಪಾಜಟ್ಟಾಗಿರುವುದು. ಇದಕ್ಕೆ ಈ ಶಂಬರನು ಹಕ್ಕುದಾರನು. ಈ ವಿಷಯವನ್ನು ಇವನಿಗೆ ತಿಳಿಸುವುದಕ್ಕೋಸ್ಕರ ಬಂದಿರುವೆನು.
ಸಮರಸಿಂಹನು ಈ ರೀತಿಯಲ್ಲಿ ಹೇಳಲು, ಅರ್ಥಪರನಿಗೆ ಬಹಳ ಸಂತೋಷವಾಯಿತು. ಶಂಬರನ ಅಪ್ಪಣೆಯಿಲ್ಲದೆಯೇ ಸಮರಸಿಂಹನನ್ನೂ ಅವನ ಜತೆಯಲ್ಲಿದ್ದ ವೇಷಧಾರಿಗಳಾದ ಇಬ್ಬರು ಭೃತ್ಯರನ್ನೂ ಸತ್ಕರಿಸಿ, ರತ್ನಾಕರದ ಒಳಕ್ಕೆ ಶಂಬರನ ಬಳಿಗೆ ಕರೆದುಕೊಂಡು ಹೋಗಿ, ಕಳಿಂಗನ ವಿದ್ಯಮಾನಗಳನ್ನೆಲ್ಲ ಶಂಬರನಿಗೆ ವಿಜ್ಞಾಪಿಸಿದನು.
ಇದನ್ನು ಕೇಳಿ, ಶಂಬರನು ಬಹಳ ಸಂತುಷ್ಟನಾಗಿ, ಸಮರಸಿಂಹಾದಿಗಳಿಗೆ ಸತ್ಕಾರವನ್ನು ಮಾಡಿ, ಅವನ ಗಾಡಿ ಕುದುರೆ ಭೃತ್ಯಾದಿಗಳಿಗೆಲ್ಲ ತಕ್ಕ ಏರ್ಪಾಡನ್ನು ಮಾಡಿ, ಎಲ್ಲರಿಗೂ ಆತಿಥ್ಯವನ್ನು ಮಾಡಿಸುವುದಕ್ಕೋಸ್ಕರ ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲಿಯೇ ಅರ್ಥಪರನು ಶಂಬರನ ಬಳಿಗೆ ಹೋದನು.
ಶಂಬರ- ಅಯ್ಯಾ! ಅರ್ಥಪರನೆ! ನನ್ನ ಭೃತ್ಯನಾದ ಕಾವಲುಗಾರನು ನೀನು ಅಪಹರಿಸಿಕೊಟ್ಟಿದ್ದ ಪರಂತಪನಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನೂ ಕಲಾವತಿಯಿಂದ ನಾನು ಅಪಹರಿಸಿದ್ದ ಉಯಿಲು ಮೊದಲಾದುವುಗಳನ್ನೂ ಅಪಹರಿಸಿದನು. ಕೂಡಲೇ ನಾನು ಅವನನ್ನು ಗುಂಡಿನಿಂದ ಹೊಡೆದೆನು, ಏಟುಬಿದ್ದು ರಕ್ತ ಸುರಿಯುತ್ತಿದ್ದಾಗ್ಯೂ, ಅವನು ಕಿಟಕಿಯಿಂದ ಧುಮಿಕಿ ಓಡಿಹೋದನು. ಅವನನ್ನು ಪತ್ತೆ ಮಾಡಿ ಆ ಕಾಗದ ಪತ್ರಗಳನ್ನು ಸಂಪಾದಿಸಿಕೊಟ್ಟರೆ, ನಿನಗೆ ಪ್ರಯೋಜನವುಂಟಾಗುವುದು.
ಅರ್ಥಪರ- ನಿನ್ನ ಮಾತಿನಲ್ಲಿ ನನಗೆ ನಂಬುಗೆಯಿಲ್ಲ. ಮಾಡಬಾರದ ಕೆಲಸಗಳನ್ನು ಮಾಡಿ ನಿನಗೆ ಇದುವರೆಗೂ ಎಷ್ಟೋ ಸಹಾಯವನ್ನು ಮಾಡಿರುವೆನು. ಈ ಸಹಾಯಗಳಲ್ಲಿ ಯಾವುದಕ್ಕೂ ನೀನು ಪ್ರತಿಫಲ