ಪುಟ:ಪರಂತಪ ವಿಜಯ ೨.djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೨೭
ಅಧ್ಯಾಯ ೧೭

ವನ್ನು ಕೊಟ್ಟಿಲ್ಲ. ಈ ದಿನ ನೀನು ನನ್ನ ಲೆಕ್ಕವನ್ನು ಫೈಸಲ್ಮಾಡದಿದ್ದರೆ, ಮುಂದೆ ನಾನು ನಿನಗೆ ಯಾವ ಉಪಕಾರವನ್ನೂ ಮಾಡುವುದಿಲ್ಲ.
ಶಂಬರ- ನಿನಗೆ ಈಗ ಎಷ್ಟು ದ್ರವ್ಯ ಬೇಕು?
ಅರ್ಥಪರ- ಒಂದು ಲಕ್ಷ ಪೌನನ್ನು ನೀನು ಈಗ ಕೊಟ್ಟರೆ ಸರಿ; ಹಾಗಿಲ್ಲದ ಪಕ್ಷದಲ್ಲಿ, ಈ ಮೊಬಲಗನ್ನು ಬರಮಾಡಿಕೊಳ್ಳುವ ಕೆಲಸವನ್ನು ನಾನು ಶೀಘ್ರದಲ್ಲಿಯೇ ಮಾಡುವೆನು.
ಶಂಬರ- ನಿನಗೆ ಹುಚ್ಚು ಹಿಡಿಯಿತೆ?
ಅರ್ಥಪರ- ಎಲ್ಲರಿಗೂ ಹುಚ್ಚು ಹಿಡಿಸುವ ಶಕ್ತಿಯು ನನಗಿರುವಲ್ಲಿ, ನನಗೆ ಹುಚ್ಚು ಹಿಡಿಯುವುದೆಂದರೇನು?
ಶಂಬರ- ಹಾಗಾದರೆ ನಿನಗೆ ಒಂದು ಕಾಸನ್ನೂ ಕೊಡುವುದಿಲ್ಲ. ನೀನು ಹೇಗೆ ಇಷ್ಟು ದೊಡ್ಡ ಮೊಬಲಗನ್ನು ಬರಮಾಡಿಕೊಳ್ಳುವೆಯೊ ಮಾಡಿಕೊ.
ಅರ್ಥಪರ- ಇದು ಖಂಡಿತವೋ?
ಶಂಬರ- ಅದಕ್ಕೆ ಸಂದೇಹವೇನು ?
ಅರ್ಥಪರ- ನೀನು ಮಾಡಿರುವ ಖೂನಿಗಳನ್ನೂ, ನೀನು ಕಾಮಮೋಹಿನಿಯನ್ನು ಅಪಹರಿಸಿ ಇಟ್ಟು ಕೊಂಡಿರುವುದನ್ನೂ ಸ್ಮರಿಸಿಕೊ. ಈ ಸಂಗತಿಯನ್ನು ಸರಕಾರಕ್ಕೆ ನಾನು ತಿಳಿಸಿದ್ದೇ ಆದರೆ, ನಿನ್ನ ಆಸ್ತಿಗೂ ನಿನ್ನ ಪ್ರಾಣಕ್ಕೆ ಹಾನಿಯುಂಟಾಗುವುದು. ಬುದ್ಧಿಶಾಲಿಯಾಗಿರು. ಕೋಟ್ಯಂತರ ಪೌನುಗಳು ಈಗ ನಿನಗೆ ಲಭ್ಯವಾಗುವಂತಿದೆ. ನನಗೆ ಒಂದು ಲಕ್ಷ ಪೌನು ಕೊಟ್ಟಿದ್ದರಿಂದ ನಿನಗೆ ನಷ್ಟವೇನೂ ಆಗುವುದಿಲ್ಲ. ಲೋಭದಿಂದ ನನಗೆ ನೀನು ವಾಗ್ದಾನ ಮಾಡಿರುವ ದ್ರವ್ಯವನ್ನು ಈಗ ಕೊಡದಿದ್ದರೆ, ಬಹಳ ಅನರ್ಥಕ್ಕೆ ಗುರಿಯಾಗುವೆ. ವಿನಾಶಕಾಲದಲ್ಲಿ ವಿಪರೀತಬುದ್ಧಿ ಹುಟ್ಟುವುದು ಪ್ರಪಂಚಧರ್ಮ, ಚೆನ್ನಾಗಿ ಪರ್ಯಾಲೋಚಿಸಿ, ನೀನು ಮಾಡಿರುವ ವಾಗ್ದಾನವನ್ನು ನೆರವೇರಿಸು, ಹಾಗಿಲ್ಲದ ಪಕ್ಷದಲ್ಲಿ, ಅರ್ಥಪರನ ಮಹಿಮೆಯು ಒಂದು ನಿಮಿಷಾರ್ಧದಲ್ಲಿ ನಿನಗೆ ಗೊತ್ತಾಗುವುದು.
ಶಂಬರ-ಎಲಾ ಪಾಪಿಯೆ! ನೀನು ಏನುಮಾಡಬಲ್ಲೆ?
ಅರ್ಥಪರ-ನಿನ್ನ ಪಾಪಕೃತ್ಯಗಳಿಗೆ ಅನುರೂಪವಾದ ನರಕಕ್ಕೆ ನಿನ್ನನ್ನು ಕಳುಹಿಸಬಲ್ಲೆನು.