ಪುಟ:ಪರಂತಪ ವಿಜಯ ೨.djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೨೮
ಪರಂತಪ ವಿಜಯ

ಶಂಬರ-ಹಾಗೆ ಮಾಡು. ನಿನ್ನ ಸಾಮರ್ಥ್ಯವನ್ನು ನೋಡುತ್ತೇನೆ!
ಅರ್ಥಪರ-ಹಾಗಾದರೆ ನನ್ನ ಸಾಮರ್ಥ್ಯವನ್ನು ನೋಡು!
ಹೀಗೆಂದು ರತ್ನಾಕರವನ್ನು ಬಿಟ್ಟು ಹೊರಡಲು ಬೆನ್ನನ್ನು ತಿರುಗಿಸಿದ ಕೂಡಲೆ, ಒಂದು ಗುಂಡಿನ ಶಬ್ದವು ಕೇಳಿಸಿತು. ಅರ್ಥಪರನು ಶಂಬರನ ಗುಂಡಿನ ಏಟಿನಿಂದ ಸತ್ತು ಬಿದ್ದನು. ಶಂಬರನು 'ಈ ಪಾಪಿಯು ಸತ್ತನು. ಇದುವರೆಗೂ ನನ್ನ ಗುಟ್ಟುಗಳೆಲ್ಲ ಇವನಿಗೆ ತಿಳಿದಿದ್ದುವು. ಈಗ ನನ್ನ ಗುಟ್ಟುಗಳನ್ನು ನಾನೊಬ್ಬನೇ ಬಲ್ಲೆನು; ಇನ್ನು ಯಾರಿಗೂ ತಿಳಿಯದು. ಇವನ ಶವವನ್ನು ಹೇಗಾದರೂ ಏಕಾಂತವಾಗಿ ಸಂಸ್ಕರಿಸಬೇಕು ಹಾಗಿಲ್ಲದ ಪಕ್ಷದಲ್ಲಿ ಗಲಾಟೆಗೆ ಅವಕಾಶವಾಗುವುದು. ಈಗ ಈ ಕಳಿಂಗನ ಆಗಮನವು ಒಂದು ಭಾಗದಲ್ಲಿ ಸಂತೋಷಕರವಾಗಿದ್ದಾಗ್ಗೂ, ಇನ್ನೊಂದು ಭಾಗದಲ್ಲಿ ಅನರ್ಥಕಾರಿಯಾಗಿರುವುದು. ಅರ್ಥಪರನನ್ನು ಕೊಂದ ಗುಂಡಿನ ಶಬ್ದವು ಕಳಿಂಗಾದಿಗಳಿಗೆ ಕೇಳಿದ್ದರೆ ಏನು ಗತಿ! ಅವರ ದೃಷ್ಟಿಪಥಕ್ಕೆ ಈ ಶವವು ಬಿದ್ದರೆ ನನ್ನ ಗತಿಯೇನು! ಈ ಶವವನ್ನು ಯಾವ ರೀತಿಯಲ್ಲಿ ಒಬ್ಬರಿಗೂ ತಿಳಿಯದಂತೆ ಈ ರತ್ನಾಕರದಿಂದ ಹೊರಕ್ಕೆ ಸಂಸ್ಕಾರಾರ್ಥವಾಗಿ ಕಳುಹಿಸಲಿ?' ಎಂದು ಯೋಚಿಸುತ್ತ, ದಿಗ್ಭ್ರಮೆಯಿಂದ, ಮಾಡತಕ್ಕ ಕೆಲಸವೇ ತಿಳಿಯದೆ ಮೂಢನಂತಿದ್ದನು.


ಅಧ್ಯಾಯ ೧೭.
-- --

ಅಷ್ಟರಲ್ಲಿಯೇ ಪರಂತಪನು ಸುರಂಗಮಾರ್ಗವಾಗಿ ರತ್ನಾಕರದಿಂದ ಹೊರಗೆ ಹೋಗಿ, ಯಾರೋ ಒಬ್ಬ ದೊಡ್ಡ ಮನುಷ್ಯನಂತೆ ವೇಷಧಾರಿಯಾಗಿ ರತ್ನಾಕರದ ಬಾಗಲಿಗೆ ಕತ್ತಲೆಯಾಗುವ ಸಮಯದಲ್ಲಿ ಬಂದನು. ಅಷ್ಟರಲ್ಲಿಯೇ ಕಾವಲುಗಾರನು ಬಾರುಮಾಡಿದ ಬಂದೂಖವನ್ನು ಹಾರಿಸುವುದಕ್ಕೆ ಸಿದ್ಧವಾಗಿಟ್ಟುಕೊಂಡನು.