ದೂರದ ನಕ್ಷತ್ರ/೭
೭
ಮೂರನೆಯು ತರಗತಿ ಜಯದೇವನ ತಲೆನೋವಿಗೆ ಕಾರಣವಾಯಿತು. ಕರಿಹಲಗೆಯ ಮೇಲೆ ಯಾರೋ ಆತನ ವ್ಯಂಗ್ಯಚಿತ್ರ ಬರೆದಿದ್ದರು. ಜಯದೇವ ಮುಗುಳ್ನಗುತ್ತಲೆ ಅದನ್ನು ಒರೆಸಿದ.
“ಚಿತ್ರ ಚೆನಾಗಿದೆ. ಇದನ್ನು ಬರೆದ ಕಲಾವಿದ ಯಾರು ? ಎಂದು ಹುಡುಗರನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತ ಪ್ರಶ್ನಿಸಿದ. ಉತ್ತರ ಬರಲಿಲ್ಲ.
“ಯಾರ್ರೀ ಮಾನಿಟರ್ ಈ ತರಗತಿಗೆ?
ಆ ಪ್ರಶ್ನೆಗೆ ಉತ್ತರವಾಗಿ ಬಲು ಕಿರಿಯವನಾದ ಶ್ರೀನಿವಾಸಮೂರ್ತಿ ಎದ್ದು ನಿಂತ. ಭಯಲಜ್ಞೆಗಳು ಅವನ ಮುಖವನ್ನು ಮುಸುಕಿದ್ದುವು.
“ಚಿತ್ರಕಾರರ ಪರಿಚಯ ಮಾಡ್ಕೊಟ್ಟರಾಗ್ದೆ?
ಜಯದೇವ ಇಷ್ಟಪಡದೇ ಇದ್ದರೂ ವ್ಯಂಗ್ಯಮಿಶ್ರಿತವಾಗಿ ಹೊರಬಿತ್ತು ಧ್ವನಿ.
ಹುಡುಗ ಗಳಗಳನೆ ಅತ್ತುಬಿಟ್ಟ. ಅವನದೊಂದೇ ಹಾಡು:
“ನನಗೆ ಮಾನಿಟರ್ ಕೆಲಸ ಬೇಡಿ ಸಾರ್, ಬೇಡಿ ಸಾರ್.”
ಜಯದೇವನಿಗೆ ಅರ್ಥವಾಗಲಿಲ್ಲ, ಯಾಕೆ-ಏನು-ಎಂದು ಆತ ಮತ್ತೆ ಮತ್ತೆ ಕೇಳಿದ. ಬಂದ ಉತ್ತರ ಒಂದೇ:
“ನನಗೆ ಈ ಕೆಲಸ ಬೇದಿ ಸಾರ್.
ವ್ಯಂಗ್ಯ ಚಿತ್ರದ ವಿಷಯ ಜಯದೇವನಿಗೆ ಮರೆತೇ ಹೋಯಿತು. ಈ ಹಿರೇಮಣಿಯ ಅಳು ಪ್ರಕರಣ, ಅವನ ಮನಸ್ಸಿನ ನೆಮ್ಮದಿಯನ್ನು ಕೆಡಿಸಿತು. ಪಾಠ ತಡವಾಗುತ್ತಿದೆಯೆಂದು ಆತ ಚಡಪಡಿಸಿದ.
“ಯಾಕೋ? ಯಾಕಪ್ಪ?”
ಉತ್ತರ–ಯಾವ ನಿರ್ಬಂಧವೂ ಇಲ್ಲದೆ ಹರಿಯುತಿದ್ದ ಕಣ್ಣೀರು.
“ಯಾರು ನಿನ್ನ ಚುನಾಯಿಸಿದ್ದು?”
“ಹೆಡ್ಮೇಷ್ಟ್ರು ಇದ್ದಾಗ್ಲೇ ಚುನಾಯ್ಸಿದ್ದು ಸಾರ್.”
“ಸರಿ ಹಾಗಾದರೆ, ಹೆಡ್ಮಷ್ಟ್ರಿಗೆ ಹೇಳ್ತೀನಿ.”
“ಹೂಂ.. ಸಾರ್....ನನಗಿಂತ ದೊಡ್ಡ ಹುಡುಗರನ್ನೇ ಮಾನಿಟರ್ ಮಾಡ್ಬೇಕು ಸಾರ್.”
ಜಯದೇವನಿಗೀಗ ವಿಷಯ ಸ್ಪಷ್ಟವಾಯಿತು. ವ್ಯಂಗ್ಯ ಚಿತ್ರ ಬರೆದ \ವರ ತಂಡ, ಈ ಹಿರೇಮಣಿಗಿಂತ ಹಿರಿಯದಾಗಿತ್ತೆನ್ನುವುದರಲ್ಲಿ ಸಂದೇಹ ವಿರಲಿಲ್ಲ.
“ನಿನ್ನ ಮಾತು ಯಾರೂ ಕೇಳೊಲ್ವೆ ಶ್ರೀನಿವಾಸಮೂರ್ತಿ?
“ಇಲ್ಲ ಸಾರ್.”
'ಹು೦, ಆಗಲಿ, ಆ ಮೇಲೆ ನೋಡೋಣ.”
ಪಾಠವೇನೋ ನಡೆಯಿತು. ಆದರೆ ಜಯದೇವನಿಂದ ಮನಸ್ಸಿಟ್ಟು ಪಾಠ ಹೇಳುವುದಾಗಲಿಲ್ಲ, ವಿದ್ಯಾರ್ಥಿಗಳೂ ನೆಟ್ಟ ಮನಸ್ಸಿನಿಂದ ಕಿವಿ ಗೊಡಲಿಲ್ಲ.
ಆ ತರಗತಿ ಮುಗಿಸಿಕೊಂಡು ದುಗುಡ ತುಂಬಿದ ಹೃದಯದಿಂದಲೆ ಜಯದೇವ ಆಫೀಸು ಕೊಠಡಿಗೆ ಬಂದ.
“ಮೂರನೇ ತರಗತೀದ್ದು ಏನಾದ್ರು ಮಾಡ್ಬೇಕು ಸಾರ್” ಎಂದ ಆತ ಮುಖ್ಯೋಪಾಧ್ಯಾಯರೊಡನೆ.
“ಏನು ಸಮಾಚಾರ ?
“ಆ ಮಾನಿಟರ್ ವಿಷಯ. ಹುಡುಗ ಅಳ್ತಾನೆ, ದೊಡ್ಡ ಹುಡುಗರು ಅವನ ಮಾತು ಕೇಳೋಲ್ವಂತೆ”
“ನನಗೆ ಗೊತ್ತಿತ್ತು...ಏನ್ಮಾಡೋಣ, ಹೇಳಿ?”
ರಂಗರಾಯರ ಅಸಹಾಯತೆಯ ಸ್ವರದಿಂದ ಜಯದೇವನಿಗೆ ಆಶ್ಚರ್ಯವಾಯಿತು.
“ಯಾಕ್ಸಾರ್?ಗಲಾಟೆ ಮಾಡೋ ಹುಡುಗರು ಯಾರೂಂತ ನೋಡಿ.”
'ಆ ತಂಡದ ಮುಖ್ಯಸ್ಥ ದೊಡ್ಡ ಹುಡುಗ ಯಾರು ಗೊತ್ತೆ? ನಮ್ಮ ಪೋಲಿಸ್ ಅಧಿಕಾರಿಯ ಮಗ. ನಿಮಗೆ ಇಲ್ಲಿಂದ ವರ್ಗವಾಗ್ವೇಕೂಂತ ಅಪೇಕ್ಷೆ ಇದ್ದರೆ ಧಾರಾಳವಾಗಿ ಆ ಹುಡುಗನ ತಂಟೆಗೆ ಹೋಗಿ, ನನ್ನ ಕೇಳಿದರೆ, ಸುಮ್ನಿದ್ಬಿಡೋದೇ ಮೇಲು.”
ಜಯದೇವ ಬೆರಗಾಗಿ ತೆರೆದ ಬಾಯಿ-ಕಣ್ಣು ಕ್ಷಣಕಾಲ ಹಾಗೆಯೇ ಇದ್ದುವು.
“ಹೋದ ವರ್ಷ ಆ ಹುಡುಗನಿಗೆ ಬುದ್ದಿ ಕಲಿಸೋಕೆ ಪ್ರಯತ್ನಪಟ್ಟು ಅವನ ತಂದೆಯ-ಕೃಪಾಕಟಾಕ್ಷಕ್ಕೆ ನಾನು ಪಾತ್ರನಾದೆ. ಈ ವರ್ಷ ನಿಮ್ಮ ಸರದಿಯೇನೊ?”
“ಹುಡುಗ ಕೆಟ್ಟು ಹೋಗ್ಲಿದ್ದಾನೇಂತ ಅವನ ತಂದೆಗೆ ಗೊತ್ತಾಗಲ್ವೆ?”
“ಅವರು ಹಾಗೇಂತ ನಂಬೋದೇ ಇಲ್ಲ, ಅವರ ದೃಷ್ಟೀಲಿ ಈ ಮಹಾ ಪ್ರಚಂಡ ಸುಕುಮಾರ-ಸುಪುತ್ರ!”
ಜಯದೇವ ಸುಮ್ಮನಾದ. ರಂಗರಾಯರೂ ಸ್ವಲ್ಪ ಹೊತ್ತು ಮೌನವಾಗಿದ್ದು ಕೇಳಿದರು:
“ಮಾನಿಟರ್ ಶ್ರೀನಿವಾಸಮೂರ್ತಿ ಏನಂತಾನೆ?”
“ತನಗಿಂತ ದೊಡ್ಡವರ್ನ ಮಾನಿಟರ್ ಮಾಡಿ ಅಂತಾನೆ.”
“ನಾಳೆ ಪಾಠಕ್ಕೆ ಹೋದಾಗ ನೀವು ಹಾಗೇ ಮಾಡಿ ಜಯದೇವ, ಆ ಪೋಲಿಸ್ ಅಧಿಕಾರಿ ಮಗನನ್ನೇ ಮಾನಿಟರ್ ಮಾಡಿ. ಸಾಯಂಕಾಲ ಕ್ಲಾಸಿಗೆ ಹೋದಾಗ, ಹೊಸ ಮಾನಿಟರ್ ನೇಮಕ ನಾಳೆ ನೀವು ಮಾಡ್ತೀರೀಂತ ಹೇಳ್ತೀನಿ."
“ಹುಡುಗ್ರೇ ಚುನಾಯ್ಸೋದು ಬೇಡ್ವೆ?
“ಚುನಾವಣೆ ಮಾತು ಎಲ್ಬಂತು "ಜಯದೇವ!"
ನಂಜುಂಡಯ್ಯ ಒಳಬಂದರು. ಕೆಂಪಡರಿದ್ದ ಜಯದೇವನ ಮುಖಕ್ಷೋಭೆಯನ್ನು ತೋರುತಿತ್ತು.
“ಏನು ವಿಶೇಷ?” ಎಂದು ಕೇಳಿದರು ನಂಜುಂಡಯ್ಯ, ಸಿಗರೇಟು ಹಚ್ಚುತ್ತಾ.
ನಡೆದುದನ್ನು ಮತ್ತೊಮ್ಮೆ ಅವರೆದುರು ಹೇಳಿದಾಯಿತು. ನಂಜುಂಡಯ್ಯ ಏಕಪ್ರಕಾರವಾದ ಸ್ವರದಲ್ಲಿ ನುಡಿದರು :
“ಅದನ್ನೆಲ್ಲ ಮನಸ್ಸಿಗೆ ಹಚ್ಕೋಬೇಡಿ ಜಯದೇವ, ಆ ಚಿಕ್ಕ ಹುಡುಗ ಶ್ರೀನಿವಾಸಮೂರ್ತಿನ ಮಾನಿಟರ್ ಮಾಡಿದ್ದೆ ಸರಿಯಲ್ಲ. ಈಗಾದರೂ ಏನಂತೆ, ರಘುನಾಥನನ್ನೇ-ಅದೇ ಆ ಪೋಲೀಸ್ ಹುಡುಗಮಾನಿಟರ್ ಮಾಡಿದರಾಯಿತು. ಹಾಗೆ ಜವಾಬ್ದಾರಿ ಕೊಟ್ಟರೆ ಅವನ ನಡತೇನೂ ಸುಧಾರಿಸ್ಬಹುದು.”
ಆ ಮಾತು ಪೂರ್ತಿಯಾಗುತ್ತಲಿದ್ದಂತೆ ರಂಗರಾಯರು ಹೊರಹೋದರು.
"ನಾನು ಹೇಳಿದ್ದು ಸರಿಯಲ್ಲ ಅಂತೀರಾ?" ಎಂದು ನಂಜುಂಡಯ್ಯ ಜಯದೇವನನ್ನೆ ದಿಟ್ಟಿಸುತ್ತಾ ಅಂದರು.
ಜಯದೇವ ಅಲ್ಲವೆನ್ನುವ ಹಾಗಿರಲಿಲ್ಲ. ಹಾಗೆ ಹೇಳಲು, ವಾದಿಸಲು ಆತ ಇಷ್ಟಪಡಲಿಲ್ಲ. ಆ ಅನುಭವದ ಮೇಲೆ ತೆರೆಯನ್ನು ಇಳಿಬಿಟ್ಟು ಬೇರೇನನ್ನಾದರೂ ಯೋಚಿಸಲು ಆತ ಯತ್ನಿಸಿದ.
............
ಶಾಲೆಯಲ್ಲಿ ವಸತಿ...ಹೋಟಲಿನಲ್ಲಿ ಊಟ.
ನಾಲ್ಕನೆಯ ತರಗತಿಯಿದ್ದ ಕೊಠಡಿಯಲ್ಲಿ ಎರಡು ಬೆಂಚುಗಳನ್ನು ಜೋಡಿಸಿ, ಹಾಸಿಗೆ ಹಾಸಿ, ಕಿಟಕಿ ತೆರೆದಿಟ್ಟು, ಆ ರಾತ್ರೆ ಜಯದೇವ ಮಲಗಿದ. ಹೊರಗಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿ ಆಹ್ಲಾದಕರವಾಗಿತ್ತು. ಜಗತ್ತು ನಿದ್ದೆಹೋಗತೊಡಗಿದ್ದಾಗ ಆ ಪ್ರಶಾಂತತೆಯಲ್ಲಿ ಗರಿಗೆದರಿಕೊಂಡು ನೆನಪಿನ ಹಕ್ಕಿಗಳು ದೂರದೂರಕ್ಕೆ ಸಂಚಾರ ಮಾಡಿದುವು.
...ತಾನೇ ವಿದ್ಯಾಭ್ಯಾಸ ಕಲಿತ ಕಾನಕಾನಹಳ್ಳಿಯ ಶಾಲೆ. ಅಲ್ಲಿ ಉಪಾಧ್ಯಾಯರ ಮೆಚ್ಚುಗೆಗೆ ತಾನು ಪಾತ್ರಾನಾದುದು. ಆ ಬಳಿಕ ಬೆಂಗಳೂರು. ಅಲ್ಲಿ ತಾನು ಅಡುಗೆಯವನಾಗಿದ್ದ ಮನೆಯಲ್ಲಿ ಓದಲು ದೀಪವಿಲ್ಲದೆ ಪಟ್ಟ ಸಂಕಟಗಳು...
ಹೊಸತಾಗಿ ಕೊಂಡು ತಂದಿದ್ದ ಬೆಡ್ ಲ್ಯಾಂಪಿನತ್ತ ಕೈಚಾಚಿ ಜಯದೇವ ಬತ್ತಿಯನ್ನು ಕಿರಿದು-ಬಲು ಕಿರಿದುಗೊಳಿಸಿದ.... ಇದು ತನ್ನದೇ ಆದ ದೀಪ. ಈ ತಿಂಗಳಾದ ಬಳಿಕ ದೊರೆಯುವ ನಾಲ್ವತ್ತು ರೂಪಾಯಿ ಸಂಬಳದ ನಿರೀಕ್ಷೆಯಿಂದ ಕೊಂಡುತಂದ ದೀಪ...ಕಿರಿದುಗೊಳಿಸಿದ್ದ ದೀಪವನ್ನು ಸುಮ್ಮನೆ ಜಯದೇವ ಒಮ್ಮೆಲೆ ದೊಡ್ಡದು ಮಾಡಿದ-ಸಣ್ಣದು ದೊಡ್ಡದು-ಮತ್ತೆ ಸಣ್ಣದು...
ಅದೊಂದು ಸಂಜೆ ವೇಣುವಿನ ಬರಿವಿಕೆಯನ್ನು ಇದಿರುನೋಡುತ್ತ ಆತನ ಕೊಠಡಿಯಲ್ಲಿ ಏನನ್ನೊ ಓದುತ್ತ ಜಯದೇವ ಕುಳಿತಿದ್ದ. ಅದು, ಅದೇ ಆಗ ಹೊಸತಾಗಿ ಬಂದಿದ್ದ ಕನ್ನಡ ಕಾದಂಬರಿ. ಬಲು ಸೊಗಸಾಗಿತ್ತು. ಓದುವುದರಲ್ಲೆ ತಲ್ಲೀನನಾಗಿದ್ದ ಜಯದೇವನಿಗೆ ಕತ್ತಲಾದುದು, ದೃಷ್ಟಿ ಮಸುಕಾದುದು, ಗೊತ್ತಾಗಲೇ ಇಲ್ಲ. ಒಮ್ಮೆಲೆ ದೀಪ ಹತ್ತಿಕೊಂದಿತು. ಸುನಂದಾ ವಿದ್ಯುತ್ ಗುಂಡಿಯ ಬಳಿ ನಿಂತಿದ್ದಳು. ಜಯದೇವ ತಲೆಯತ್ತಿ ಆಕೆಯನ್ನು ನೋಡಿ ಮುಗುಳ್ನಕ್ಕ.
"ಥ್ಯಾಂಕ್ಸ್."
ಮತ್ತೆ ಓದುವುದರಲ್ಲೇ ಆತ ತಲ್ಲೀನನಾದ.
ಟಿಕ್-ದೀಪ ಆರಿತು. ತಲೆಯೆತ್ತಿ ನೋಡಿದ ಜಯದೇವ.
"ಯಾಕೆ ಸುನಂದಾ ?"
ಟಿಕ್-ದೀಪಹತ್ತಿಕೊಂಡಿತು. ಕುಲುಕುಲು ನಗುತ್ತಿದ್ದಳು ಸುನಂದಾ, ತುಂಟ ಹುಡುಗಿಯಹಾಗೆ. ಎಣ್ಣೆಯ ದೀಪವಾಗಿದ್ದರೆ ಮೆಲ್ಲನೆ ಸಣ್ಣದು ದೊಡ್ಡದು ಮಾಡುತ್ತಿದ್ದಳೇನೊ!...
"ಎಷ್ಟೊತ್ತು ಓದೋದು ಜಯಣ್ಣ? ಬೇಜಾರು ನಂಗೆ. ಏನಾದರೂ ಮಾತಾಡ್ಬಾರ್ದಾ?"
"ಈ ಕಾದಂಬರಿ ಚೆನ್ನಗಿದೆ ಅಲ್ವಾ?"
"ನಾನು ಓದಲ್ಲ ಅದರ ಕತೆ ಹೇಳು...ಓದಿದಷ್ಟು ಹೇಳು. ಪ್ಲೀಸ್-"
ಜಯದೇವ ಕತೆ ಹೇಳಲಿಲ್ಲ. ಸುನಂದಾ ಪುಸ್ತಕ ಓದಿಲ್ಲವೆಂದರೆ ಯಾರು ನಂಬುತಿದ್ದರು? ಮನೆಗೆ ಯಾವ ಪುಸ್ತಕ ಬಂದರೂ ಮೊದಲು ಓದುವವಳು ಆಕೆಯೇ.
...ನಿದ್ದೆ ಹೋಗುವ ಹೊತ್ತಿಗೆ ಕತೆ. ಈ ರೀತಿ ಯಾರೂ ಜಯದೇವನಿಗೆ ಕತೆ ಹೇಳಿರಲಿಲ್ಲ. ಅಜ್ಜಿಯ ಬಾಯಿಂದ ರಾಜಕುಮಾರ ರಾಜಕುಮಾರಿಯ ಕತೆ ಕೇಳುವ ಭಾಗ್ಯವಿರಲಿಲ್ಲ ಆತನಿಗೆ...ಆದರೂ ಅತ ಪುಸ್ತಕಗಳನ್ನು ಓದುತ್ತಿದ್ದ-ಕೈಗೆ ಸಿಕ್ಕಿದ್ದನ್ನೆಲ್ಲ.
ಆದರೆ, ಸುನಂದಾ ಜತೆಯಲ್ಲಿ ಆತ ಸರಿಜೋಡಿಯಾಗುವನೋ ಇಲ್ಲವೋ. ಆಕೆ ಎಷ್ಟೊಂದು ಓದಿದ್ದಳು-ಎಷ್ಟೊಂದು!
ಸುನಂದ---ಸುಂದರಿ...
ಪಕ್ಕಕ್ಕೆ ಹೊರಳಿ, ಕಣ್ಣುಮುಚ್ಚಿ ಕಣ್ಣುತೆರೆದು, ನಿದ್ದೆ ಹೋಗಲು ಯತ್ನಿಸಿದ ಜಯದೇವ. ಯಾರನ್ನೋ-ಯಾರನ್ನು?-ಸ್ಮರಿಸಿ ತುಟಿಗಳು ಮುಗುಳ್ನಗುತ್ತಲೇ ಇದ್ದುವು...ಹಾರಿ ಹೋಗಿದ್ದ ಹಕ್ಕಿಗಳೆಲ್ಲ ಸದ್ದಿಲ್ಲದೆ ಸಾಲಾಗಿ ಬಂದು ಮತ್ತೆ ನೆನಪಿನ ಗೂಡು ಸೇರಿಕೊಂಡವು.
ನಿದ್ದೆ ಮೋಹಿನಿಯಾಗಿ ಬಲೆಬೀಸಿ ಜಯದೇವನನ್ನು ಬಿಗಿದು ಕಟ್ಟಿದಳು.
...................
ಮಾರನೆಯ ದಿನ ಜಯದೇವ, ಮೂರನೆಯ ತರಗತಿಯಲ್ಲಿ, ತನಗೊಪ್ಪಿಗೆ ಯಾಗದೇ ಇದ್ದರೂ ಅನಿವಾರ್ಯವೆಂದು, ಶ್ರೀನಿವಾಸಮೂರ್ತಿಯ ಬದಲು ರಘುನಾಥನನ್ನು ಹಿರೇಮಣಿಯಾಗಿ ನೇಮಿಸಿದ. ಎಷ್ಟೋ ಜನ ಹುಡುಗರಿಗೆ ಇದು ಒಪ್ಪಿಗೆಯಾಗದೇ ಹೋದರೂ ಯಾರೂ ವಿರೋಧಿಸಲಿಲ್ಲ.
ಮುಖ್ಯೋಪಾಧ್ಯಾಯರ ಸೂಚನೆಯಂತೆ ನಾಲ್ಕನೆಯ ತರಗತಿಗೂ ಜಯದೇವನೇ ಕನ್ನಡ ಪಾಠ ಹೇಳಿದ. ಅದೇನೂ ಆತನಿಗೆ ಕಷ್ಟದ್ದಾಗಿ ತೋರಲಿಲ್ಲ. ಪಠ್ಯ ಪುಸ್ತಕದಲ್ಲಿ ಯಾವುದೇ ಪಾಠ ನೀರಸವಾಗಿದ್ದರೂ, ಜಯದೇವ ಅದನ್ನೆತ್ತಿಕೊಂಡು ಯೋಚಿಸುತ್ತ ತನ್ನ ಬುದ್ಧಿಮತ್ತೆಯ ಒರೆಗಲ್ಲಿಗೆ ತೀಡಿದಾಗ, ಆ ಪಾಠದಲ್ಲೂ ಸ್ವಾರಸ್ಯ ಕಂಡುಬರುತ್ತಿತ್ತು. ಕೊನೆಯ ತರಗತಿಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಹದಿನೆಂಟು. ಅವರಲ್ಲಿ ಹಿಂದಿನವರ್ಷ ಉತ್ತೀರ್ಣರಾಗದೆ ಉಳಿದವರೂ ಕೆಲವರಿದ್ದರು. ಆ ಹುಡುಗ ಹುಡುಗಿಯರಿಗೆಲ್ಲ ಶಾಲೆಗೆ ಹೋಗುವುದು ದಿನನಿತ್ಯದ ಅನಿವಾರ್ಯ ಸಂಕಟವೇನೂ ಆಗಿರಲಿಲ್ಲ. ಹುಡುಗತನದ ಮೆರಗು ಇದ್ದರೂ ಅವರಲ್ಲೊಂದು ರೀತಿಯ ಜವಾಬ್ದಾರಿಯಿತ್ತು. ಎಷ್ಟೆಂದರೂ ಐದೈದು ರೂಪಾಯಿನ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದವರು ! ಆ ಬಳಗದಲ್ಲಿ ಹಲವರಿಗೆ ಪಾಠಗಳಲ್ಲಿ ಒಳ್ಳೆಯ ಆಸಕ್ತಿಯಿತ್ತು. ಪುಸ್ತಕದಲ್ಲಿದ್ದುದಕ್ಕಿಂತಲೂ ಹೆಚ್ಚನ್ನು ತಿಳಿದುಕೊಳ್ಳಲು ಅವರು ಯತ್ನಿಸುತ್ತಿದ್ದರು.
ಒಂದುದಿನ ಪಾಠಹೆಳಲೆಂದು "ಆದರ್ಷ ಮಹಿಳಾ ರತ್ನಗಳು" ಪುಸ್ತಕವನ್ನೆತ್ತಿಕೊಂಡಾಗ, ಹೇಗೆ ಮುಂದುವರಿಯಬೇಕೆಂಬುದು ಸ್ಪಷ್ಟವಾಗದೆ, ಜಯದೇವ ನಾಲ್ಕು ನಿಮಿಷ ಪುಸ್ತಕದ ಪುಟಗಳನ್ನು ತಿರುವುತ್ತ ಕುಳಿತ.... ವೀರಮಾತೆ ವಿಮಲಾ, ದೇವಿ ಜೋನ್, ಜೀಜಾಬಾಯಿ, ಫ್ಲಾರೆನ್ಸ, ನೈಟಿಂಗೇಲ್, ಕಸ್ತೂರಿ ಬಾ, ಒಬ್ಬರೇ ಇಬ್ಬರೇ? ಪುಸ್ತಕದಲ್ಲಿ ಕೆಲವು ಭಾವ ಚಿತ್ರಗಳಿದ್ದುವು. ಆದರೆ ಬರಿಯ ಭಾವಚಿತ್ರಗಳಿಂದಲೇ ದಿವ್ಯಜೀವಗಳ ಪೂರ್ಣದರ್ಶನ ಸಾಧ್ಯವಿತ್ತೆ? ಅಲ್ಲಿ ಅಚ್ಚಾಗಿದ್ದ ಜೀವನ ಚರಿತ್ರೆಗಳೂ ಅಷ್ಟೇ. ಬಿಳಿಯ ಹಾಳೆಯಮೇಲೆ ಕರಿಯ ಅಕ್ಷರಗಳು ಅಚ್ಚೊತ್ತಿಕೊಂಡು ಚಲಿಸದೆ ಅಲ್ಲೆ ನಿಂತಿದ್ದುವು. ಜಯದೇವ ಚಲಿಸುವ ವ್ಯಕ್ತಿಗಳನ್ನು ಬಯಸಿದ. ಆಳಿದವರನ್ನು ಜೀವಂತಗೊಳಿಸಲೆತ್ನಿಸಿದ... ಮೆಲ್ಲ ಮೆಲ್ಲನೆ ಪುಸ್ತಕದ ಪುಟಗಳಿಂದ ಆ ವೀರಮಾತೆಯರೆದ್ದು ಜಯದೇವನ ಕಣ್ಣೆದುರು ನಿಂತರು. ಅವರನ್ನು ಕಾಣುತ್ತ ಜಯದೇವ ಮುಗುಳ್ನಕ್ಕ. ಅದು ದಿವ್ಯದರ್ಶನ...ತಾನು ಕಂಡುದನ್ನು ಹಾಗೆಯೇ ವಿದ್ಯಾರ್ಥಿಗಳಿಗೂ ತಿಳಿಸಿಕೊಡುವ ಬಯಕೆ ಅವನಿಗಾಯಿತು.
'ಈ ಯತ್ನದಲ್ಲಿ ಯಶ ದೊರೆಯಲಿ, ನನಗೆ ಯಶ ದೊರೆಯಲಿ' ಎಂದು ಮನಸ್ಸಿನಲ್ಲೆ ಆತ ಧ್ಯಾನಿಸಿಕೊಂಡ.
"ಷುರು ಮಾಡೋಣವೋ ಪಾಠ?"
ಇಷ್ಟರ ತನಕ ಉಪಾಧ್ಯಾಯರೇಕೆ ಮೌನವಾಗಿದ್ದರೆಂಬುದನ್ನೆ ತಿಳಿಯದಿದ್ದ ಹುಡುಗರಲ್ಲಿ ಹಲವರೆಂದರು:
"ಹೂಂ ಸಾರ್."
"ಮೊದಲ್ನೆ ಪಾಠ ನಾನು ಓದ್ಲೇ ಸಾರ್?" ಎಂದನೊಬ್ಬ ಹುಡುಗ, ಹಾಗೆ ಓದಿ ಅಭ್ಯಾಸವಿದ್ದವನು.
"ಬೇಡ. ಇವತ್ತು ಮೊದಲನೇ ಪಾಠ ಷುರು ಮಾಡೋಕ್ಮುಂಚೆ ಕೆಲವು ವಿಷಯಗಳ್ನ ಹೇಳ್ತೀನಿ. ನಾನು ಮಾತಾಡ್ತಾ ಹೋದ ಹಾಗೆ ಟಿಪ್ಪಣಿ ಮಾಡೊಕೆ ಬರುತ್ತೊ ?"
ಅಂತಹ ಅಭ್ಯಾಸವಿರಲಿಲ್ಲ ಹುಡುಗರಿಗೆ. ತಾನು ಕಲಿಸುವ ಪದ್ಧತಿ ಈ ಮಟ್ಟಕ್ಕೆ ಹೇಳಿದ್ದಲ್ಲವೆನಿಸಿತು ಜಯದೇವನಿಗೆ. ಕ್ಷಣಾರ್ಧದಲ್ಲೆ ಹೇಳಲು ಅಪೇಕ್ಷಿಸಿದ್ದ ವಿಷಯಗಳನ್ನೆಲ್ಲ ಮರೆಯಾಗಿ, ಹೊಸ ಸರಳರೀತಿಯಲ್ಲಿ ಆ ವಿಷಯಗಳೇ ಮತ್ತೆ ರೂಪುಗೊಂಡವು.
"ಪರವಾಗಿಲ್ಲ, ನಾನು ಹೇಳೋದನ್ನ ಮನಸ್ಸು ಕೊಟ್ಟು ಕೇಳಿ."
ಕುಳಿತಲ್ಲಿಂದೆದ್ದು ನಿಲ್ಲುತ್ತಾ ಜಯದೇವ ತನ್ನ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸಿದ. ಕೇಳಲು ತವಕಗೊಂಡು ಆತುರ ವ್ಯಕ್ತಪಡಿಸುತ್ತ ಅವನನ್ನೆ ಎಷ್ಟೊಂದು ಕಣ್ಣುಗಳು ದಿಟ್ಟಿಸುತ್ತಿದ್ದುವು! ಆ ದೃಷ್ಟಿಗಳಿಂದೆಲ್ಲ ಸ್ಫೂರ್ತಿ ಪಡೆಯುತ್ತ ಜಯದೇವ ಆರಂಭಿಸಿದ...
ಅದೊಂದು ಸೊಗಸಾದ ಕಥನ ಭಾಷಣ. "ಆದರ್ಶಮಹಿಳಾರತ್ನಗಳು" ಪುಸ್ತಕಕ್ಕೆ ಮುನ್ನುಡಿ. ಆತನ ಮಾತುಗಳು, ಜಗತ್ತಿನ ಮಾತೆಯರೆಲ್ಲರ ಹಿರಿತನವನ್ನು ಎತ್ತಿ ತೋರಿಸಿದುವು. ಮಾತೃಪ್ರೇಮದ ಅನುಭವ ಆತನಿಗಿರಲಿಲ್ಲ ನಿಜ, ಅದರೆ ಮಾತೆ ದೈವೀ ಸ್ವರೂಪಳೆಂದು ಸಹಸ್ರಸಾರೆ ಆತ ಕೇಳಿದ್ದನಲ್ಲವೆ?
ಆದರ್ಶ ಮಹಿಳಾರತ್ನಗಳು....
ತನ್ನ ತರಗತಿಯಲ್ಲಿ, ತನ್ನನ್ನೆ ಬೆರಗುಗಣ್ಣುಗಳಿಂದ ನೋಡುತ್ತಿದ್ದ ವಿದ್ಯಾರ್ಥಿನಿಯರನ್ನೇ ಎಷ್ಟೋ ಬಾರಿ ದಿಟ್ಟಿಸಿ ಜಯದೇವ ಮಾತನಾಡಿದ.
"ನಮ್ಮದು ಪುಣ್ಯ ಭೂಮಿ. ಈ ತಾಯಿಯ ಬಸಿರಲ್ಲಿ ಒಳ್ಳೆಯ ಮಾನವರು ಹಲವರು ಜನಿಸಿದ್ದಾರೆ. ಆದರ್ಶಮಹಿಳಾರತ್ನಗಳು ನಮ್ಮ ಬದುಕನ್ನು ಬೆಳಗಿವೆ. ಹುಟ್ಟಿದವರೆಲ್ಲ ಮಹಾತೇಜಸ್ವಿಗಳಾಗೋದಿಲ್ಲ. ಅಥವಾ ಮಹಾತೇಜಸ್ವಿಗಳಾಗಿಯೇ ಯಾರೂ ಹುಟ್ಟೋದಿಲ್ಲ. ಎಲ್ಲರಲ್ಲೂ ಒಳ್ಳೆಯ ಗುಣಗಳಿರುತ್ತವೆ. ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ. ಹೆಚ್ಚು ಗುಣಗಳಿರುವವರು ಆದರ್ಶವ್ಯಕ್ತಿಗಳಾಗ್ತಾರೆ. ಜೀಜಾಬಾಯಿಯಂತಹ ವೀರಮಾತೆ ಆದರ್ಶ ಸ್ತ್ರೀರತ್ನ -ನಮ್ಮಲ್ಲೇ ಹುಟ್ಟಿ ಬರಲಾರಳೆಂದು ಹೇಗೆ ಹೇಳೋಣ? ಖಂದಿತ ಹುಟ್ಟಬಹುದು..."
ನಡುನಡುವೆ ತಾನೆ ಮಾತನಾಡುತ್ತಿರುವೆನೆ ಎಂದು ಜಯದೇವನಿಗೆ ಸಂದೇಹವಾಗುತಿತ್ತು. ಹಿಂದೆ ತಾನೆಲ್ಲೋ ಕೇಳಿದ್ದ ಎಲ್ಲೋ ಓದಿದ್ದ ಮಾತುಗಳೇ ತನ್ನ ನಾಲಿಗೆಯಿಂದ ಹೊರಬೀಳುತಿದ್ದಂತೆ ತೋರಿತು. ಮಾತನಾಡುತ್ತಲಿದ್ದಂತೆಯೇ ಮನಸ್ಸಿನಲ್ಲೇ ಆತ ಅಂದುಕೊಂಡ:
"ಇದೆಲ್ಲಾ ನನ್ನ ಸ್ವಂತದ ವಿಚಾರಗಳಲ್ಲದೇ ಇರಬಹುದು. ಆದರೆ ಇವು ಒಳ್ಳೆಯ ವಿಚಾರಗಳು. ಇಷ್ಟುಮಾತ್ರ ನಿಜ."
ಪಾಠದ ಅವಧಿ ಮುಗಿಯಿತೆಂದು ಘಂಟಿ ಬಾರಿಸಿತು. ಜಯದೇವನ್ಲೂ ತನ್ನ ಕಥನ-ಭಾಷಣದ ಕೊನೆಯನ್ನು ತಲಪಿದ್ದ. ಮಂತ್ರಮುಗ್ಧರಾಗಿ ಕುಳಿತಿದ್ದರು ಅ ಹುಡುಗ-ಹುಡುಗಿಯರೆಲ್ಲ.
"ಇವತ್ತಿಗಿಷ್ಟು. ಇನ್ನೊಂದು ದಿವಸ ವೀರಮಾತೆ ವಿಮಲಾ ಆರಂಭಿಸೋಣ."
ಸ್ವಾರಸ್ಯವಾದುದು ಸವಿಯಾದುದು ಇಷ್ಟಕ್ಕೇ ನಿಂತು ಹೋಯಿತಲಾ ಎಂದು ವಿದ್ಯಾರ್ಥಿಗಳು ಚಡಪಡಿಸಿದರು. ಅವರಲ್ಲಿ ಹೆಚ್ಚು ಕಡಿಮೆ ಎಲ್ಲರ ಪ್ರೀತಿ ಗೌರವಗಳನ್ನೂ ಸೂರೆಗೊಂಡು ಜಯದೇವ ತರಗತಿಯಿಂದ ಹೊರಹೋದ.
ನಾಲ್ಕನೆಯ ತರಗತಿಯಲ್ಲಿ ಯಾವ ಪಾಠ ಮಾಡಿದರೆಂದು ರಂಗರಾಯರು ಕೇಳಲಿಲ್ಲ. ಪಾಠ ನಡೆಯುತಿದ್ದಾಗ ಅವರು ಒಂದೆರಡು ಸಾರೆ ಜಗಲಿಯಲ್ಲಿ ಅತ್ತಿಂದತ್ತ ಹಾದು ಹೋಗಿದ್ದರು. ಅದರ್ಶ ಮಹಿಳೆಯರನ್ನು ಕುರಿತು ಮಾತನಾಡುವುದರಲ್ಲೆ ತಲ್ಲೀನನಾಗಿದ್ದ ಜಯದೇವನಿಗೆ ಅದು ಗೋಚರವಾಗಿರಲಿಲ್ಲ. ಹುಡುಗರು ಸೂತ್ರದ ಬೊಂಬೆಯ ಹಾಗೆ ಕುಳಿತು ಜಯದೇವನ ಮಾತುಗಳಿಗೆ ಕಿವಿ ಕೊಡುತ್ತಿದ್ದುದನ್ನು ಕಂಡು ರಂಗರಾಯರಿಗೆ ಸಮಾಧಾನವೆನಿಸಿತ್ತು. ಜಯದೇವನ ದಕ್ಷತೆಯ ಬಗೆಗೆ ಅವರಿಗೆ ಸಂದೇಹವಿರಲಿಲ್ಲ. ಆತ ಯಶಸ್ವಿಯಾದ ಉಪಾಧ್ಯಾಯನಾಗುವುದು ಖಂಡಿತವಾಗಿತ್ತು.
ನಂಜುಂಡಯ್ಯ ಆ ಪ್ರಶ್ನೆ ಕೆಳಿದರು. ಯುವಕ ಜಯದೇವ ಸಮರ್ಥನಾದ ಉಪಾಧ್ಯಾಯನಾಗುವನೆಂಬ ವಿಷಯದಲ್ಲಿ ಅವರಿಗೂ ಸಂಶಯವಿರಲಿಲ್ಲ. ಆದರೆ ಯಾವ ಪಾಠ ಮಾಡಿದಿರೆಂದು ಕೇಳುವುದು ತಮ್ಮ ಕರ್ತವ್ಯವೆಂದು ಅವರು ಭಾವಿಸಿದರು. ತೀರ ಹೊಸಬನಾದ ಉಪಾಧ್ಯಾಯ ಬಂದಿರುವಾಗ ಹಳಬರಾದವರು ಅವನ ನೆರವಿಗೆ ಬರುವುದು ಕರ್ತವ್ಯವಲ್ಲದೆ ಇನ್ನೇನು ?
ಮುಖ್ಯೋಪಾಧ್ಯಾಯರೇ ಸ್ವತಃ ಏನೂ ಕೆಳದೆ ಇದ್ದುದನ್ನು ಕಂಡು ನಂಜುಂಡಯ್ಯ ಸ್ವಲ್ಪಹೊತ್ತು ಸುಮ್ಮನಿರಬೇಕಾಯಿತು. ಇಬ್ಬರೇ ಉಳಿದಾಗ ಅವರೆಂದರು:
"ನಾಲ್ಕನೆಯ ತರಗತಿ ಹುಡುಗರು ಹೇಗಿದಾರೆ?"
"ಮೂರನೇ ತರಗತಿಗಿಂತ ಎಷ್ಟೋ ವಾಸಿ. ಜವಾಬ್ದಾರಿ ಇರೋ ಹುಡುಗರು."
"ಹೋದ ವರ್ಷ ಸರಿಯಾಗಿ ತೀಡಿದ್ದೆ ಅವರ್ನ."
ನಾಲ್ಕನೆಯ ತರಗತಿ ಹುಡುಗರು ಒಳ್ಳೆಯವರಾಗಿ ತೋರಿದರೆ ಅದಕ್ಕೆ ಕಾರಣ ತಾನು--ಎಂಬ ಅಂತರಾರ್ಥವಿತ್ತು ನಂಜುಂಡಯ್ಯನ ಮಾತಿನಲ್ಲಿ.
"ತುಂಬಾ ಆಸಕ್ತಿಯಿಂದ ಕಿವಿಗೊಟ್ಟು ಕೂತರು."
ಆದರೆ ನಂಜುಂದಯ್ಯನ ಅನುಭವ ಹಾಗಿರಲಿಲ್ಲ. ಅವರು ಪಾಠವನ್ನು-ಅದರಲ್ಲೂ ಇಂಗ್ಲಿಷ್ ಪಾಠವನ್ನು -ಚೆನ್ನಾಗಿಯೇ ಮಾಡುತಿದ್ದರೂ ಹುಡುಗರು ವಿಶೇಷ ಆಸಕ್ತಿಯನ್ನೇನೂ ತೋರುತ್ತಿರಲಿಲ್ಲ. ಜಯದೇವ ಹುಡುಗರ ನಡುವೆ ತಮಗಿಂತ ಹೆಚ್ಚು ಜನಪ್ರಿಯನಾಗುವನೆಂಬುದು ಸ್ಪಷ್ಟವಾಗಿತ್ತು, ಅದನ್ನು ಅವರು ಸಹಿಸಿಕೊಂಡರು.
“ಯಾವ ಪಾಠ ಮಾಡಿದಿರಿ ?'
“ಆದರ್ಶ ಮಹಿಳಾರತ್ನಗಳು.”
“ಮೊದಲನೇ ಪಾಠ ಪೂರ್ತಿ ಮಾಡಿದ್ರೇನೊ?”
“ಇಲ್ಲ, ಪಾಠ ಇನ್ನೂ ಷುರು ಮಾಡಿಲ್ಲ.”
“ಮತ್ತೆ !”
“ಮುಂದಿನ ಪಾಠಕ್ಕೆ ಪೀಠಿಕೆ ಅಂತ ಸಾಮಾನ್ಯ ವಿವರಣೆ ಕೊಟ್ಟೆ.”
“ಲೆಕ್ಟರು ಅನ್ನಿ!"
“ಒ೦ದು ರೀತೀಲಿ ಹಾಗೆಯೇ.”
“ಅದರಿಂದೆಲ್ಲಾ ಏನು ಪ್ರಯೋಜನ ಇವರೆ?
“ಯಾಕ್ಸಾರ್? ಹೇಳೋದು ಸಾರಸ್ಯವಾಗಿದ್ರೆ ಹುಡುಗರು ಕೇಳ್ತಾರೆ.”
ಇತರ ಉಪಾಧ್ಯಾಯರಿಗೆ ಸಾರಸ್ಯಪೂರ್ಣವಾಗಿ ಹೇಳಲು ಬರುವುದಿಲ್ಲವೆಂಬುದನ್ನು ಜಯದೇವ ಸೂಚ್ಯವಾಗಿ ತಿಳಿಸಿದ ಹಾಗಾಯಿತೆ೦ದು ನಂಜುಂಡಯ್ಯ ಭಾವಿಸಿದರು.
ಅವರ ಹುಬ್ಬುಗಂಟಿಕ್ಕಿತು. ಸಿಗರೇಟನ್ನು ತುಟಿಗಳ ನಡುವೆ ಸಿಕ್ಕಿಸಿಕೊಂಡು ಅವರು ಕಡ್ಡಿಗೀರಿದರು,
* ಕೇಳದೆ ಏನು? ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಕ್ಬಿಡ್ತಾರೆ.”
“ಅಷ್ಟೇ ಅಂತೀರಾ?
“ಅಲ್ದೆ ಇನ್ನೇನು? ನನ್ನ ಕೇಳಿದರೆ, ಆಚರಣೆಯಲ್ಲಿರೋ ಪದ್ದತೀನೇ ನೀವು ಅನುಸರಿಸಿದ್ರೆ ಮೇಲು.”
“ಪಾಠ ಹೇಳ್ಕೊಡೋ ವಿಷಯ ಮಾತಾಡ್ತಿದೀರಾ?” –ಎಂದು ಕೇಳುತ್ತಲೆ ರಂಗರಾಯರು ಒಳ ಬಂದರು.
ಮುಖ ಸಪ್ಪಗೆ ಮಾಡಿಕೊಂಡು ಜಯದೇವ ಹೇಳಿದ;
"ಹೌದು ಸಾರ್."
ವಿಷಯವೇನೆಂಬುದನ್ನು ಸೂಕ್ಷ್ಮವಾಗಿಯೆ ಊಹಿಸಿಕೊಂಡ ರಂಗರಾಯರೆಂದರು :
“ಈಗಿನ ವಿದ್ಯಾಭ್ಯಾಸ ಪದ್ಧತೀನೇ ಸರಿಯಾಗಿಲ್ಲ ಅಂತ ನಾವು ಅಂತೀವಿ. ಆ ಮಾತು ನಾವು ಪಾಠ ಹೇಳಿಕೊಡೋ ರೀತಿಗೂ ಅನ್ವಯಿಸುತ್ತೆ, ಎಷ್ಟೋ ಬದಲಾವಣೆ ಆಗ್ಬೇಕಪ್ಪ, ಅದು ಮಾತ್ರ ಖಂಡಿತ. ಪಾಠ ಮಾಡೋ ರೀತೀಲೂ ನಾವು ಹೊಸ ಹೊಸ ಪ್ರಯೋಗ ಮಾಡಿ ನೋಡ್ಬೇಕು. ಇದು ನನ್ನ ಅಭಿಪಾಯ.”
ಆ ಪ್ರೋತ್ಸಾಹದ ಮಾತಿಗಾಗಿ ತಾನು ಚಿರಕೃತಜ್ಞ ಎನ್ನುವ ನೋಟದಿಂದ ಜಯದೇವ ಮುಖ್ಯೋಪಾಧ್ಯಾಯರನ್ನು ನೋಡಿದ.
ಆದರೆ ನಂಜುಂಡಯ್ಯ ಅಷ್ಟು ಸುಲಭವಾಗಿ ಸೋಲನ್ನೊಪ್ಪಿಕೊಳ್ಳುವಂತಿರಲಿಲ್ಲ,
“ಹಾಗಾದರೆ ಇಷ್ಟೊಂದು ವರ್ಷ ಪ್ರಯೋಗ ಮಾಡಿದ್ರಲಾ ಸಾರ್,ಏನಾಯ್ತು? ರಿಟೈರಾಗೋ ಸಮಯ--"
“ನಿಜ ನಂಜುಂಡಯ್ಯ, ಪ್ರಯೋಗ ಮಾಡಿ ಏನೂ ಆಗಲಿಲ್ಲ, ನಾನು ರಿಟೈರಾಗೋ ಸಮಯವೂ ಬಂತು. ಆದರೂ ಬಿಟ್ಬಿಡಬಾರ್ದಪ್ಪ ಕೊನೇವರೆಗೂ ಪ್ರಯೋಗ ಮಾಡ್ತಾನೇ ಇರ್ಬೇಕು.”
ನೋವು ತು೦ಬಿತ್ತು ಆ ಧ್ವನಿಯಲ್ಲಿ.
ಜಯದೇವ ವ್ಯಥೆಯಿಂದ ನಿಟ್ಟುಸಿರು ಬಿಟ್ಟ.