ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨ನೆಯ ಪ್ರಕರಣ – ಕರ್ನಾಟಕವು ಮೃತರಾಷ್ಟ್ರವೇ?
೧೧

ದಲ್ಲಿ ನಮ್ಮ ಕರ್ನಾಟಕವು ಮಾತ್ರ ಪೂರ್ವದಿಂದ ನಡೆದುಬಂದ ತನ್ನ ವೈಭವವನ್ನು ಸ್ವಲ್ಪವಾದರೂ ಕುಂದಿಸದೆ, ತಿರಿಗಿ ಹಬ್ಬುವಂತೆ ಮಾಡಿ, ಮುಂದೆ ಸಾವಿರಾರು ವರ್ಷಗಳವರೆಗೆ ತನ್ನ ಘನತೆಯನ್ನು ಅತ್ಯಂತ ದಕ್ಷತೆಯಿಂದ ಕಾಪಾಡಿಕೊಂಡಿದೆ. ಈ ಕರ್ನಾಟಕದಲ್ಲಿಯೇ ಜಗತ್ತಿನ ಇತಿಹಾಸದಲ್ಲಿ ಕ್ರಾಂತಿಯನ್ನುಂಟುಮಾಡುವಂಥ ಧರ್ಮಸ್ಥಾಪನಾಚಾರ್ಯರು ಜನ್ಮ ತಾಳಿರುವರು. ಈ ಕರ್ನಾಟಕವೂ ಮಹಾ ಮಹಾ ಕವಿಪುಂಗವರಿಗೆ ಜನ್ಮಕೊಟ್ಟಿದೆ. ಈ ಕರ್ನಾಟಕದಲ್ಲಿಯೇ ಜಗತ್ತನ್ನು ಆಶ್ಚರ್ಯಗೊಳಿಸುವಂಥ ಅನ್ಯಾದೃಶವಾದ ಕಟ್ಟಡಗಳು ಹುಟ್ಟಿವೆ. ಈ ಕರ್ನಾಟಕದಲ್ಲಿಯೇ ಇತರ ವಾಙ್ಮಯಗಳನ್ನು ಮೀರಿಸುವ ಗ್ರಂಥಗಳು ನಿರ್ಮಾಣವಾಗಿವೆ. ಈ ನಮ್ಮ ಕರ್ನಾಟಕದ ಸುಧಾರಣೆಯು ವಿಶಿಷ್ಟ ಬಗೆಯದಾಗಿರುವದರಿಂದಲೇ ಗಾಯನಶಾಸ್ತ್ರದಲ್ಲಿ 'ಕರ್ನಾಟಕ' ವೆಂಬುದೊಂದು ಹೊಸ ಪದ್ಧತಿಯೇ ರೂಢವಾಗಿದೆ. ಸಾರಾಂಶ, ನಮ್ಮ ಅರಸರು ದೊಡ್ಡವರಿದ್ದರು; ನಮ್ಮ ರಾಜ್ಯವು ವಿಸ್ತಾರವಾಗಿ ಹಬ್ಬಿತ್ತು; ನನ್ನ ವೈಭವವು ಅತಿಶಯವಾದ ಘನತೆಗೇರಿತ್ತು; ಆ ಕಾಲಕ್ಕೆ ಹಿಂದುಸ್ಥಾನದಲ್ಲಿ ಕರ್ನಾಟಕವನ್ನು ಹಿಂದೆ ಹಾಕುವ ರಾಷ್ಟ್ರವು ಯಾವುದೂ ಇರಲಿಲ್ಲ. ಕರ್ನಾಟಕದೊಳಗಿರುವಷ್ಟು ದೊಡ್ಡ ಪಟ್ಟಣಗಳು ಹಿಂದೂದೇಶದಲ್ಲಿರಲಿಲ್ಲ. ಕರ್ನಾಟಕದಲ್ಲಿರುವಷ್ಟು ವಿದ್ವಾಂಸರು ಬೇರೆ ಕಡೆಯಲ್ಲಿರಲಿಲ್ಲ. ಕರ್ನಾಟಕದಷ್ಟು ಸಂಪನ್ನವಾದ ವಾಙ್ಮಯವೂ ಮಿಕ್ಕ ಕಡೆ ಯಲ್ಲಿರಲಿಲ್ಲ. ಕರ್ನಾಟಕದಲ್ಲಿರುವಂಥ ಕಟ್ಟಡಗಳು ಹಿಂದೂದೇಶದ ಕಣ್ಣು ಮುಂದಿರಲಿಲ್ಲ; ಹೀಗಿದ್ದು, ನಾವು ಅದಕ್ಕೆ ಮೃತವೆಂದು ಕರೆಯುವದೆಂತು!
ನ್ನಡಿಗರೇ, ನಿಮ್ಮ ಸುತ್ತಮುತ್ತಲೂ ದೃಷ್ಟಿಯನ್ನು ಚಲ್ಲಿದರೆ ಅಲ್ಲಲ್ಲಿ ನಿಮ್ಮ ಪ್ರಾಚೀನ ಕರ್ನಾಟಕದ ಸಂಪನ್ನತೆಯ ದೇದೀಪ್ಯಮಾನವಾದ ಹೆಗ್ಗುರುತುಗಳು ಕಣ್ಣಿಗೆ ಕಟ್ಟದಿರಲಾರವು; ಆ ನಾಡಿನಲ್ಲಿ ಹುಟ್ಟಿ ಬೆಳೆದು ದಿಗಂತ ಕೀರ್ತಿಯನ್ನು ಪಡೆದ ರಾಜಕಾರ್ಯಧುರಂಧರರ, ಮೇಧಾವಿಗಳ ಮತ್ತು ರಾಜಗುರುಗಳ ಜೀವನ ಚರಿತ್ರೆಯನ್ನೋದಿದರೆ, ನಿಮ್ಮ ಜೀವನದ ಒಗಟೆಯು ಸಹಜವಾಗಿ ಒಡೆ ಯದೆ ನಿಲ್ಲದು; ಆ ನಾಡಿನ ಪ್ರಾಚೀನ ಸಂಪತ್ತಿಗೂ, ಕಲಾ ಕೌಶಲ್ಯಕ್ಕೂ ಸಾಕ್ಷಿಯಾಗಿ ನಿಂತಿರುವ ಗುಡಿ ಗೋಪುರಗಳನ್ನು ನೋಡಿದರೆ, ಇಂಥ ಅಮಾನುಷ ಕಾರ್ಯಗಳನ್ನು ಸುಲಭವಾಗಿ ನೆರವೇರಿಸಿದ ರಾಷ್ಟ್ರದ ಅಗ್ಗಳಿಕೆಯು ಸಹಜವಾಗಿ ಗೊತ್ತಾ