ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೪೨
ನಡೆದದ್ದೇ ದಾರಿ

ನಾಯಿಗಳು ಒಮ್ಮೆಲೆ ವಿಕಾರವಾದ ಧ್ವನಿ ತೆಗೆದು ಇಂದೇ ಹೀಗೆ ಅಳಲು ಸುರು ಮಾಡಬೇಕೆ?

ತಾನು ಅವನನ್ನು-ಛೆ,ತಪ್ಪಿತು,No. IVನನ್ನು-ಹೀಗೆ ಆಕ್ಷೇಪಿಸುವುದು,ನಂತರ ಕೊರಗುವುದು ತಪ್ಪು ಎನ್ನಿಸಿತು ಶಶಿಗೆ. No.II ಹಾಗೂ No.IIIಗಳು ತನ್ನನ್ನು ಇದೇ ಬಗೆಯಾಗಿ ಆಕ್ಷೇಪಿಸಬಾರದೇಕೆ? ಕೈಕೊಟ್ಟುಹೋದ ಆ ಹುಡುಗಿಯನ್ನು ಪ್ರೀತಿಸುವಾಗ No.IVನ ಮನಸ್ಥಿತಿ ಹೇಗಿತ್ತೋ ಆ ಮನಸ್ಥಿತಿಯಲ್ಲಿ ತಾನಿದ್ದಾಗ,ತನ್ನಲ್ಲೂ ಜೀವಶಕ್ತಿ ತುಂಬಿ ಹರಿಯುತ್ತಿದ್ದಾಗ,ಜಗತ್ತಿನಲ್ಲಿನ ಎಲ್ಲದರ ಬಗೆಗೂ ಮೃದು ಮಧುರ ಪ್ರೀತಿ ಇದ್ದಾಗ,ಬಹಳ ವರ್ಷಗಳ ಹಿಂದೆ,No.Iನ ಪ್ರವೇಶವಾಗಿತ್ತು ತನ್ನ ಜೀವನದಲ್ಲಿ. ಸುದೈವದಿಂದಲೋ ದುರ್ದೈವದಿಂದಲೋ- ಈ ಎರಡು ಶಬ್ದಗಳಲ್ಲಿ ಈಗ ಏನೂ ವ್ಯತ್ಯಾಸವೇ ಉಳಿದಿಲ್ಲವಲ್ಲ! — No.I ತನ್ನಿಂದ ದೂರವಾದ. ಆಗ ಕಮರಿ ಹೋದ ಉತ್ಸಾಹ, ಬತ್ತಿಹೋದ ಮಧುರತೆ, ಬೂದಿಯಾದ ಆಸೆ-ಎಲ್ಲಾ ಅಲ್ಲಿಗೇ ಕೊನೆಗಂಡಿದ್ದವು. ಅಂತೆಯೇ ಇರಬೇಕು, ನಂತರ ಬಂದ No. IIನ ಜೊತೆ ತನಗೆ ಬೆಕ್ಕು ಇಲಿಯೊಡನೆ ಚಿನ್ನಾಟವಾಡುವಂತೆ ಆಡಿ ಕೊಂದು ಬೀಸಾಕಬೇಕು ಎನ್ನಿಸಿದ್ದು. ಈ ತೃಷ್ಣೆ, ಕೊಲ್ಲಬೇಕು ಎನ್ನುವ ದಾಹ, ಇನ್ನೂ ಇದ್ದಾಗಲೇ ಅಲ್ಲವೆ No. IIIನ್ನು ಕಂಡದ್ದು?ಆದರೆ ಅಯ್ಯಾ No. III, ನೀನು ಬದುಕಿಕೊಂಡೆ. ನನ್ನ ಒಳಗಿನ ಉರಿಯ ಬಿಸಿ ತಾಗುವಷ್ಟು ನನಗೆ ಸಮೀಪ ಬರದೆ ದೂರದೂರವೇ ಪ್ಲೆಟೋನಿಕ್ ಪ್ರೇಮಿಯಾಗಿದ್ದುಕೊಂಡು ನೀನು ಬದುಕಿದೆ. ನೀನೊಂದು ಬೇರೆ ತರದ ವಿಚಿತ್ರ ವ್ಯಕ್ತಿ. ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಡುವದರಲ್ಲೇ ತೃಪ್ತಿ ಸಿಗುತ್ತದೆ ಎನ್ನುತ್ತೀ. ಬಚ್ಚಿಡುವ ನಿನ್ನ ಪ್ರಯತ್ನವಂತೂ ವ್ಯರ್ಥವಾಗಿದೆ. ಆದರೆ ನೀನು ನನ್ನನ್ನು ಪ್ರೀತಿಸುವುದು ತಿಳಿದಿದ್ದರೂ, ನಿನ್ನ ಈ ಉದ್ವೇಗರಹಿತವಾದ-ಉಸಿರು ಕಟ್ಟಿಸುವ ಹಾಗೆ ಶಾಂತವಾದ-ಕಣ್ಣು ಕತ್ತಲಗೂಡುವಷ್ಟು ಆಳವಾದ- ಪ್ರೀತಿಯನ್ನು ನಾನು ಒಲ್ಲೆ. ನೀನು ನನ್ನಿಂದ ದೂರವೇ ಇರು.

ಎಷ್ಟು ಬೇಗ ಮೂರುಗಂಟೆಯಾಯಿತಲ್ಲ.... ಈ ಹಾಳಾದವರ ಬಗೆಗೆಲ್ಲಾ ವಿಚಾರ ಮಾಡುವುದು ಬಿಟ್ಟು ಇನ್ನಾದರೂ ಸ್ವಲ್ಪ ನಿದ್ರೆ ಮಾಡಬೇಕೆಂದು ಶಶಿ ಮಗ್ಗುಲಾದಳು. ಯಾಕೋ ಕಿಡಿಕಿಯ ಹೊರಗಿನ ಗಾಢಾಂಧಕಾರವನ್ನು ನೋಡುತ್ತಿರಲು ಅವಳಿಗೆ ಬೇಸರವೆನಿಸಿತು. ಎದ್ದು ದೀಪ ಹಾಕೋಣವೇ ಎಂಬ ವಿಚಾರ ಬಂದು ಕೂಡಲೇ ಮರೆಯಾಯಿತು. ಕಣ್ಣು ಕುಕ್ಕಿಸುವ ಈ ವಿದ್ಯುತ್ ದೀಪ ಬೇಡ-ಹೀಗೇ ಮಲಗಿ ಕಿಡಿಕಿಯ ಹೊರಗಿನ ಕತ್ತಲನ್ನೇ ನೋಡುತ್ತಿರಬೇಕು, ಯಾವಾಗ ಪೂರಾ