ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೪೭


ಆಯಾಸವನ್ನು ಪರಿಗಣಿಸದೆ ಸಂಭ್ರಮದಿಂದ ಓಡುತ್ತಿದ್ದರು ಜನ.

ಹೀಗೆ ಎರಡು ಮೂರು ದಿನಗಳ ಪ್ರಯಾಣ ನಡೆಯಿತು. ಮಹಾದೇವಿ ಮಲ್ಲಿಕಾರ್ಜುನನ ಆ ಪರ್ವತಕೋಶಗಳನ್ನು ಒಂದೊಂದನ್ನಾಗಿ ದಾಟಿ ಮುಂದೆ ನಡೆಯುತ್ತಿದ್ದಳು.

ಪರಿಷೆ, ಭೀಮನಕೊಳಕ್ಕೆ ಬಂದಾಗ ಪರಿಷೆಯ ನಾಯಕ ಹೇಳಿದ :

“ಇನ್ನು ಶ್ರೀಶೈಲ ದೇವಸ್ಥಾನಕ್ಕೆ ಒಂದು ಹರದಾರಿಯಷ್ಟು ದೂರ. ಈ ಸಂಜೆಯೊಳಗೆ ಅಲ್ಲಿಗೆ ಸೇರುತ್ತೇವೆ.”

ಭೀಮನಕೊಳದಲ್ಲಿ ನೀರನ್ನು ಕುಡಿದು ವಿಶ್ರಮಿಸಿಕೊಂಡರು ಜನ. ಶಿವರಾತ್ರಿಯ ಬೇಸಿಗೆಯ ಬಿಸಿಲಿನಲ್ಲಿ ಭೀಮನಕೊಳವೊಂದೇ ಆ ಮಾರ್ಗದಲ್ಲಿ ನೀರಿನ ಆಶ್ರಯವಾಗಿತ್ತು. ಅಲ್ಲಿ ಮುಖವನ್ನು ತೊಳೆದು, ನೀರನ್ನು ಕುಡಿದು, ಮರಗಳ ನೆರಳಿನಲ್ಲಿ ಹಾಯಾಗಿ ಕುಳಿತೋ ಮಲಗಿಯೋ ವಿಶ್ರಮಿಸಿಕೊಳ್ಳುತ್ತಿರುವ ನೂರಾರು ಯಾತ್ರಿಕರನ್ನು ನೋಡುವ ಆ ದೃಶ್ಯ ತುಂಬಾ ಸುಂದರವಾಗಿತ್ತು. ಮಲ್ಲಿಕಾರ್ಜುನನನ್ನು ಸೇರಲು ಹೊರಟಿರುವ ಮಹಾಶಕ್ತಿಯ ಒಂದೊಂದು ಕಿಡಿಗಳಂತೆ ತೋರಿದರು ಅವರೆಲ್ಲರೂ ಮಹಾದೇವಿಗೆ.

ದೇವಸ್ಥಾನ ಸಮೀಪವಾದಂತೆಲ್ಲಾ ಜನರ ಉತ್ಸಾಹದ ಹೊನಲು ಉಕ್ಕೇರುತಿತ್ತು. ಜಯಘೋಷಗಳು ಗಿರಿಕಂದರದಲ್ಲಿ ಪ್ರತಿಧ್ವನಿಸುತ್ತಿದ್ದವು. ಕೈಲಾಸದ್ವಾರವನ್ನು ಏರಿ ಮುಂದೆ ಮುಂದೆ ನಡೆಯತೊಡಗಿದಂತೆ ಶಿಖರೇಶ್ವರ ಕಣ್ಣಿಗೆ ಬಿದ್ದಿತು.

ಶಿಖರೇಶ್ವರನ ತುದಿಯಲ್ಲಿ ನಿಂತು, ಮುಳುಗುತ್ತಿರುವ ಸೂರ್ಯನ ಹೊಂಗಿರಣಗಳ ಕಾಂತಿಯನ್ನು ಮುಖದ ಮೇಲೆ ಧರಿಸಿ ಮಹಾದೇವಿ, ದೂರದಲ್ಲಿ ಕಾಣುತ್ತಿದ್ದ ಮಲ್ಲಿಕಾರ್ಜುನನ ದೇವಾಲಯದ ಶಿಖರವನ್ನು ಕಂಡು ಪುಳಕಿತಳಾದಳು.

ಶಿಖರೇಶ್ವರನ ಶಿಖರದಿಂದ ಮಾರ್ಗ ನಿಧಾನವಾಗಿ ಕೆಳಗೆ ಇಳಿಯತೊಡಗಿತ್ತು. ಸ್ವಲ್ಪ ದೂರ ನಡೆಯುವುದರೊಳಗಾಗಿ, ಯಾರೋ ಪಕ್ಕದಲ್ಲಿ ತೋರಿಸುತ್ತಾ ಹೇಳಿದರು : “ಅದೋ ಅಲ್ಲಿ ಕಾಣುವುದೇ ಅರ್ಕೇಶ್ವರ.”

ಹಿಂದೆ ಗುರುಲಿಂಗರು ಹೇಳಿದ ಅರ್ಕೇಶ್ವರನ ವರ್ಣನೆ ಅಸ್ಪಷ್ಟವಾಗಿ ಮಹಾ ದೇವಿಯ ಮುಂದೆ ಸುಳಿಯಿತು. ಅರ್ಕೇಶ್ವರನ ಹಿಂದೆ ಹರಿಯುತ್ತಿರುವ ಪಂಚಧಾರೆಗಳನ್ನು ನೋಡಬೇಕೆಂದು ನಿರ್ಧರಿಸುತ್ತಾ ಮುಂದೆ ನಡೆದಳು.

ಕತ್ತಲಾಗುವ ವೇಳೆಗೆ ಪರಿಷೆ ತನ್ನ ಗುರಿಯನ್ನು ಸೇರಿತು. ಆ ಗಿರಿಕಂದರದಲ್ಲಿ ದೇವಾಲಯದ ಮಹಾದ್ವಾರದ ಶಿಖರ, ಧೀರನಿಲವಿನಿಂದ ತಲೆಯೆತ್ತಿ ನಿಂತಿತ್ತು.