ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಿಗಂಬರದ ದಿವ್ಯಾಂಬಲೆ


``ಇದೇನು ನಿಂಗಮ್ಮ, ಒಮ್ಮೆ ಮಗಳನ್ನು ಅರಮನೆಗೆ ಕಳುಹಿಸಿದಿರಿ ; ಮತ್ತೆ ಆ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಸಾಧ್ಯವೇ ?

``ಅಂದರೆ ನಮ್ಮ ಮಗಳು ರಾಜನಿಗೇ ಸೇರಿಹೋಗಬೇಕೇ ಗುರುಗಳೇ?

``ಅದನ್ನು ನಿರ್ಧರಿಸುವ ಹಕ್ಕನ್ನು ನೀವು ನಿಮ್ಮ ಮಗಳಿಗೆ ಕೊಟ್ಟ ಮೇಲೆ ಅದನ್ನು ಅಲ್ಲಿಗೆ ಬಿಟ್ಟುಬಿಡಿ. ನೆನ್ನೆ ನಾನೆಲ್ಲವನ್ನೂ ನಿಮಗೆ ವಿವರಿಸಿ ಹೇಳಲಿಲ್ಲವೇ? ಗುರುಲಿಂಗರು ಜ್ಞಾಪಿಸಿದರು.

``ನಿಜ ಗುರುಗಳೇ, ನೀವು ಎಲ್ಲವನ್ನು ಹೇಳಿದ್ದೀರಿ. ಆದರೆ ಜನಗಳ ಮಾತುಗಳು ನಮ್ಮನ್ನು ಇರಿಯುತ್ತಿವೆ. `ರಾಜನಿಗೆ ಹೆದರಿ ಮಗಳನ್ನು ಕೊಟ್ಟರು' ಎನ್ನುವವರು ಕೆಲವರು. `ದುಡ್ಡಿನ ಆಸೆಗೆ ಮಗಳನ್ನು ಮಾರಿದರು, `ಮದುವೆ ಇಲ್ಲದೆ ಮಗಳನ್ನು ಒಪ್ಪಿಸಿದರು' - ಹೀಗೆಲ್ಲಾ ಹೇಳುತ್ತಾರೆ. ಗುರುಗಳೇ ಇದನ್ನೆಲ್ಲಾ ಹೇಗೆ ಸಹಿಸುವುದು ? ಮಹಾದೇವಿ ಇದನ್ನು ಕೇಳುತ್ತಾ ದುಃಖದ ಭಾರದಿಂದ ಕುಸಿದಳು. ಗುರುಗಳೂ ಮೌನವಾಂತರು. ರಸವಂತಿಯಂತೂ ಇಲೊಂದು ಹೊಸ ಪ್ರಪಂಚವನ್ನು ಕಾಣುತ್ತಿದ್ದಳು. ಕ್ಷಣಕಾಲ ನಿಶ್ಯಬ್ದ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು. ಗುರುಗಳೇ ಅದನ್ನು ಮುರಿದರು :

``ನಿಜ, ಲೋಕದ ದೃಷ್ಟಿಯಿಂದ ಆ ಜನ ಹೇಳುವುದೆಲ್ಲಾ ಸಹಜವಾದುದು. ನಿಮ್ಮ ಅಂತರಂಗದ ತಳಮಳವನ್ನೂ, ಮಹಾದೇವಿಯ ಆದರ್ಶದ ಹೋರಾಟವನ್ನೂ ಅವರು ಹೇಗೆ ಊಹಿಸಬಲ್ಲರು ?

ಆದರೆ ಉದಾತ್ತ ಸಾಧನೆಗಾಗಿ ಎಷ್ಟೋ ವೇಳೆ ಕ್ಷುದ್ರ ನಿಂದೆಯನ್ನು ನಾವು ಸಹಿಸಿಕೊಳ್ಳಬೇಕಾಗುತ್ತದೆ. ಅದನ್ನು ದಿಟ್ಟತನದಿಂದ ಎದುರಿಸಿ. ಹೌದು, ``ರಾಜನನ್ನು ಮಹಾದೇವಿ ಮದುವೆಯಾಗಿದ್ದಾಳೆ' ಎನ್ನಿ ; `ಮಗಳನ್ನು ಮಾರಿದೆವು' ಎನ್ನಿ. ಅದರಿಂದ ನಷ್ಟವೇನೂ ಇಲ್ಲ. ಅನ್ನುವವರು ಎಷ್ಟು ದಿನ ಅನ್ನುತ್ತಾರೆ ? ಅವರು ಆಡಿಕೊಂಡು ಸಂತೋಷಪಡುವ ಮಾತುಗಳನ್ನು ಅವರಿಗಿಂತ ಮೊದಲು ನೀವೇ ಹೇಳಿಬಿಡಿ... ಏನು ಓಂಕಾರ, ನಿನಗೂ ಹೆದರಿಕೆಯಾಗುತ್ತದೆಯೋ?"

``ಹೆದರಿಕೆಯ ಮಾತಲ್ಲ, ಗುರುಗಳೇ, ವ್ಯರ್ಥವಾಗಿ ಅಪವಾದ ಬಂತಲ್ಲ ಎಂದು ವ್ಯಥೆ. ಓಂಕಾರ ಹೇಳಿದ.

``ಶರಣ, ಅಪವಾದಕ್ಕೆ ಅಂಜಬಾರದು, ಅಪಮಾರ್ಗಕ್ಕೆ ಇಳಿಯಬಾರದು, ಮನಸ್ಸನ್ನು ವಂಚಿಸಿ ನಡೆಯಬಾರದು, ಹಿಡಿದ ನಿಷ್ಠೆಯನ್ನು ಬಿಡಬಾರದು. ಇವೆಲ್ಲವನ್ನೂ ಉಳ್ಳ