ಮನವ ಮರೆದು ಮಾಡಿದಡೆ ಲಿಂಗರೂಪವಾಯಿತ್ತು. ಧನವ ಮರೆದು ಮಾಡಿದಡೆ ಜಂಗಮರೂಪವಾಯಿತ್ತು. ತನುವ ಮರೆದು ಮಾಡಿದಡೆ ಪ್ರಸಾದರೂಪವಾಯಿತ್ತು. ಇಂತೀ ತ್ರಿವಿಧವನರಿದು ಮಾಡಿದಡೆ ಬಯಲು ರೂಪವಾಯಿತ್ತು. ಮನವನರಿಯನಾಗಿ
ಲಿಂಗವನರಿತ. ಧನವನರಿಯನಾಗಿ ಜಂಗಮವನರಿತ. ತನುವನರಿಯನಾಗಿ ಪ್ರಸಾದವನರಿತ_ ಈ ತ್ರಿವಿಧಸುಖವ ಮರೆದನಾಗಿ ಬಯಲೆಂದರಿತ. ಮನವ ಲಿಂಗ ಒಳಕೊಂಡಿತ್ತು. ಧನವ ಜಂಗಮ ಒಳಕೊಂಡಿತ್ತು. ತನುವ ಪ್ರಸಾದ ಒಳಕೊಂಡಿತ್ತು. ಇಂತೀ ತ್ರಿವಿಧರೂಪವನು ಬಯಲು ಒಳಕೊಂಡಿತ್ತು ಗುಹೇಶ್ವರಾ.