ಹರಿಕಥಾಮೃತಸಾರ/ಅನುಕ್ರಮಣಿಕಾ ತಾರತಮ್ಯ ಸಂಧಿ (ಅತಿ ಸಂಕ್ಷೇಪ ತಾರತಮ್ಯ)
ಮನುಜೋತ್ತಮವಿಡಿದು ಸಂಕರುಷಣನ ಪರ್ಯಂತರದಿ ಪೇಳಿದ
ಅನುಕ್ರಮಣಿಕೆಯ ಪದ್ಯವನು ಕೇಳುವುದು ಸಜ್ಜನರು//
ಶ್ರೀಮದಾಚಾರ್ಯರ ಮತಾನುಗ ಧೀಮತಾಂ ವರರಂಘ್ರಿ ಕಮಲಕೆ
ಸೋಮಪಾನಾರ್ಹರಿಗೆ ತಾತ್ವಿಕ ದೇವತಾ ಗಣಕೆ
ಹೈಮವತಿ ಷಣ್ಮಹಿಷಿಯರ ಪದ ವ್ಯೋಮಕೇಶಗೆ ವಾಣಿ ವಾಯೂ
ತಾಮರಸ ಭವ ಲಕ್ಷ್ಮಿ ನಾರಾಯಣರಿಗೆ ನಮಿಪೆ//1//
ಶ್ರೀಮತಾಂವರ ಶ್ರೀಪತೆ ಸತ್ಕಾಮಿತ ಪ್ರದ ಸೌಮ್ಯ
ತ್ರಿಕಕುದ್ಧಾಮ ತ್ರಿ ಚತುಪಾದ ಪಾವನ ಚರಿತ ಚಾರ್ವಾಂಗ
ಗೋಮತಿಪ್ರಿಯ ಗೌಣ ಗುರುತಮ ಸಾಮಗಾಯನಲೋಲ
ಸರ್ವ ಸ್ವಾಮಿ ಮಮಕುಲದೈವ ಸಂತೈಸುವುದು ಸಜ್ಜನರ//2//
ರಾಮ ರಾಕ್ಷಸ ಕುಲ ಭಯಂಕರ ಸಾಮಜ ಇಂದ್ರಪ್ರಿಯ
ಮನೋ ವಾಚಾಮ ಗೋಚರ ಚಿತ್ಸುಖಪ್ರದ ಚಾರುತರ ಸ್ವರತ
ಭೂಮ ಭೂಸ್ವರ್ಗಾಪ ವರ್ಗದ ಕಾಮಧೇನು ಸುಕಲ್ಪತರು
ಚಿಂತಾಮಣಿಯೆಂದೆನಿಪ ನಿಜ ಭಕ್ತರಿಗೆ ಸರ್ವತ್ರ//3//
ಸ್ವರ್ಣವರ್ಣ ಸ್ವತಂತ್ರ ಸರ್ವಗ ಕರ್ಣ ಹೀನ ಸುಶಯ್ಯ ಶಾಶ್ವತ
ವರ್ಣ ಚತುರ ಆಶ್ರಮ ವಿವರ್ಜಿತ ಚಾರುತರ ಸ್ವರತ
ಅರ್ಣ ಸಂಪ್ರತಿಪಾದ್ಯ ವಾಯು ಸುಪರ್ಣ ವರ ವಹನ ಪ್ರತಿಮ
ವಟ ಪರ್ಣ ಶಯನ ಆಶ್ರಯತಮ ಸತ್ಚರಿತ ಗುಣಭರಿತ//4//
ಅಗಣಿತ ಸುಗುಣ ಧಾಮ ನಿಶ್ಚಲ ಸ್ವಗತ ಭೇದ ವಿಶೂನ್ಯ ಶಾಶ್ವತ
ಜಗದ ಜೀವ ಅತ್ಯಂತ ಭಿನ್ನ ಆಪನ್ನ ಪರಿಪಾಲ
ತ್ರಿಗುಣ ವರ್ಜಿತ ತ್ರಿಭುವನ ಈಶ್ವರ ಹಗಲಿರುಳು ಸ್ಮರಿಸುತಲಿ ಇಹರ ಬಿಟ್ಟಗಲ
ಶ್ರೀ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//5//