ರಾತ್ರೆ ಎಲ್ಲರೂ ಊಟಕ್ಕೆ ಕುಳಿತಾಗ ಹುಡುಗಿಯರನ್ನೆಲ್ಲ ಉದ್ದೇಶಿಸಿ ಸರಸಮ್ಮನೇ ಮಾತನಾಡಬೇಕಾಯಿತು
"ಅದೇನೊ ವಿಷಯ ಇದೆಯಂತಲ್ಲ-ಸ್ವಲ್ಪ ಹೇಳೀಂತ,ಒಬ್ಬಿಬ್ರು ಹುಡುಗೀರು ಕೇಳಿದಾರೆ"
“ಹೇಳಿ ದೊಡ್ಡಮ್ಮ”
-ಎಂಬ ಉತ್ತರ ಬಂತು ಹಲವು ಕಂಠಗಳಿಂದ.
“ನಾಳೆಯಿಂದ ತುಂಗಮ್ಮ ಮೊದಲನೇ ತರಗತಿ ಹುಡುಗೀರಿಗೆ ಪಾಠ ಹೇಳ್ಕೊಡ್ಬೇಕೂಂತ ಸಮಿತಿಯೋರು ತೀರ್ಮಾನಿಸಿದ್ದಾರೆ.”
"ಸಂತೋಷ!"
-ಎಂದಿತೊಂದು ವ್ಯಂಗ್ಯ ಮಿಶ್ರಿತ ಸ್ವರ. ಆದರೆ ಉಳಿದ ಹುಡುಗಿಯರಲ್ಲಿ ಹೆಚ್ಚಿನವರು ನಿಜವಾದ ಸಂತೋಷದಿಂದಲೆ ಚಪ್ಪಾಳೆ ತಟ್ಟಿದರು
“ಅಷ್ಟೇ ಅಲ್ಲ, ಆಫೀಸು ಕೆಲಸದಲ್ಲಿ ತುಂಗಮ್ಮ ನನಗೆ ಸಹಾಯ ಮಾಡ್ಬೇಕೂಂತಲೂ ಹೇಳಿದ್ದಾರೆ”
ಅಪಸ್ವರವಿತ್ತಾದರೂ ಅದು ಕೇಳಿಸದ ಹಾಗೆ ಮತ್ತೊಮ್ಮೆ ಕೈ ಚಪ್ಪಾಳೆಯಾಯಿತು
ಮಾತು ಬಾರದ ಕಲ್ಯಾಣಿಯೂ ಅರ್ಥಮಾಡಿಕೊಂಡು, ತುಂಗಮ್ಮನ ಹತ್ತಿರ ಬಂದು, 'ನನಗೆ ಮೊದಲೇ ಗೊತ್ತಿತ್ತು ಹೀಗೆ ಆಗುತ್ತೇಂತ' ಎನ್ನುವ ಹಾಗೆ ಸದ್ದು ಮಾಡಿದಳು.
ಕುರುಡಿ ಸುಂದ್ರಾ ಕುಳಿತಲ್ಲಿಂದಲೆ ಹಿಗ್ಗಿನಿಂದ ಮುಖ ಅಗಲಿಸಿ ಕೊಂಡಳು. ಆಗ, ಸಿಡುಬಿನ ಕಲೆಗಳಿಂದ ಆಗಿದ್ದ ಗುಳಿಗಳಲ್ಲಿ ರಕ್ತ ತುಂಬಿ, ಮುಖ ಮತ್ತಷ್ಟು ವಿಕಾರವಾಯಿತು.
ಯಾರೋ ಕೇಳಿದರು:
“ತುಂಗಮ್ಮ ಸಕ್ಕರೆ ಹಂಚ್ಬೇಕು."
ತುಂಗಮ್ಮ ಕೂಸು ಹೆತ್ತಿದ್ದರೆ ಆಗಲೆ ಅವರು ಸಕ್ಕರೆ ಕೇಳಿಯೆ ಕೇಳುತಿದ್ದರು. ಅದಕ್ಕೆ ಆಸ್ಪದ ದೊರೆತಿರಲಿಲ್ಲ. ಆ ಬಳಿಕ ಈಗಿನದೇ ತಕ್ಕ ಸಂದರ್ಭವಾಗಿತ್ತು.