ಮನಸ್ಸು ಪರಿವರ್ತನೆಯಾಗಲಿ ಎಂದು ಹಾರೈಸುತ್ತೇನೆ. ಅದಕ್ಕೆ ತಮ್ಮ ಆಶೀರ್ವಾದವೂ ಸಿಕ್ಕಬೇಕು. ಹೇಳಿದಳು ಮಹಾದೇವಿ.
``ಎಂತಹ ಉದಾತ್ತಭಾವನೆ ತಾಯೀ ನಿನ್ನದು ! ನಿಜ, ಆತನ ಉದ್ಧಾರದ ಬಾಗಿಲು ತೆರೆಯುವ ಕಾಲ ಸಮೀಪಿಸಿದೆ. ಯಾರ ಯಾರ ಉದ್ಧಾರ ಯಾವ ರೂಪದಲ್ಲಿ ಬರುತ್ತದೆಯೋ! ಕೌಶಿಕನ ಉದ್ಧಾರ ಈ ರೂಪದಲ್ಲಿ ಬಂದಿರುವಂತೆ ತೋರುತ್ತಿದೆ.
ಸಂಗಮದೇವರ ಈ ಮಾತಿನಿಂದ ಮಹಾದೇವಿಗೆ ಸಂತೋಷವಾಯಿತು. ಕೌಶಿಕನನ್ನು ಆಕೆ ಪ್ರೀತಿಸುತ್ತಿದ್ದಳು. ಆದರೆ ಆ ಪ್ರೇಮ ಕೌಶಿಕ ಬಯಸಿದ ಬಗೆಯದಾಗಿರಲಿಲ್ಲ. ಅದೊಂದನ್ನು ಅವನು ಪರಿವರ್ತಿಸಲು ಸಿದ್ಧನಾಗಿದ್ದರೆ ಅತಿ ಉದಾತ್ತನಾದ ಸ್ಥಾನವನ್ನು ಅವಳ ದೃಷ್ಟಿಯಲ್ಲಿ ಪಡೆಯುತ್ತಿದ್ದ. ಕ್ರಮೇಣ ಅವನ ಮನಸ್ಸನ್ನು ಆ ಮಟ್ಟಕ್ಕೆ ಏರಿಸಬೇಕೆಂಬುದೂ ಅವಳ ಉದ್ದೇಶವಾಗಿತ್ತು.
ಜಂಗಮರ ಈ ಮಾತನ್ನು ಕೇಳಿ ತನ್ನ ಈ ಭಾವನೆಗಳನ್ನೆಲ್ಲಾ ಮನಸ್ಸಿನಲ್ಲಿಯೇ ಮೆಲುಕು ಹಾಕಿದಳು ಮಹಾದೇವಿ. ಮತ್ತೆ ಹೇಳಿದಳು :
``ಈಗ ತಾವು ವಿಶ್ರಾಂತಿಯನ್ನು ಪಡೆಯಿರಿ. ಅನಂತರ ನಾನು ಬರುತ್ತೇನೆ. ಕಲ್ಯಾಣದ ಬಸವಣ್ಣನವರ ಕಾರ್ಯಕ್ಷೇತ್ರದ ಮಹಿಮೆಯನ್ನು ತಮ್ಮ ಬಾಯಿಂದ ಕೇಳಬೇಕೆಂದು ಹಂಬಲಿಸುತ್ತಿದ್ದೇನೆ.
``ಅಗತ್ಯವಾಗಿ ಆಗಬಹುದು, ತಾಯಿ. ಕಲ್ಯಾಣದ ಅಣ್ಣನ ಅದ್ವಿತೀಯವಾದ ಮಹಾಸಾಧನೆಯನ್ನು ನಿನಗಲ್ಲದೆ ಇನ್ನಾರಿಗೆ ಹೇಳಬೇಕು ! ನನ್ನ ತೊದಲುಮಾತಿಗೆ ನಿಲುಕುವ ಮಟ್ಟಿಗೆ ಹೇಳುತ್ತೇನೆ.
``ಹಾಗಾದರೆ ತಾವೀಗ ವಿಶ್ರಾಂತಿಯನ್ನು ಪಡೆಯಿರಿ. ಆಮೇಲೆ ನಾನು ಬರುತ್ತೇನೆ ಎಂದು ಮಹಾದೇವಿ, ಕಲ್ಯಾಣದ, ಕಲ್ಯಾಣಕರವಾದ ವಾರ್ತೆಯನ್ನು ಕೇಳುವ ಸುಮುಹೂರ್ತವನ್ನು ನೆನೆಸಿಕೊಳ್ಳುತ್ತಾ ಅಲ್ಲಿಂದ ನಡೆದಳು. ತಾನೂ ಪ್ರಸಾದವನ್ನು ಸ್ವೀಕರಿಸಿದಳು. ಗುರುಲಿಂಗರಿಂದ ತಾನು ತಿಳಿದಷ್ಟರಮಟ್ಟಿಗೆ ಕಲ್ಯಾಣದ ಮಹತ್ವವನ್ನು ರಸವಂತಿಗೆ ಹೇಳಿದಳು. ಮುಂದಿನ ಕಥೆಯನ್ನು ಕೇಳುವುದಕ್ಕಾಗಿ ಹಿಂದಿನದನ್ನೆಲ್ಲ ನೆನೆಸಿಕೊಳ್ಳುವ ಕುತೂಹಲದ ಕಥೆಗಾರನಂತೆ, ಆ ನೆಪದಿಂದ ಅದನ್ನೆಲ್ಲಾ ನೆನೆಸಿಕೊಂಡಳು.
ಮಹಾದೇವಿ ರಸವಂತಿಯರು ಜಂಗಮರ ಬಳಿ ಬಂದಾಗ ಹೊತ್ತು ಇಳಿಮುಖವಾಗುತ್ತಿತ್ತು. ಜಂಗಮರು ಮಾತನಾಡುತ್ತಾ ಕುಳಿತಿದ್ದರು. ಆ ನಾಲ್ವರಲ್ಲಿ ಅತಿಕಿರಿಯನಾದ ಜಂಗಮ ಏಕನಾದವನ್ನಿಟ್ಟುಕೊಂಡು ಬಾರಿಸುತ್ತಾ ಓಲೆಗರಿಯನ್ನು