ಈ ಕೊನೆಯಿಂದ ಆ ಕೊನೆಯವರೆಗೂ ಎಲ್ಲೆಲ್ಲೂ ಎಲ್ಲರೂ ನಗುನಗುತ್ತ ಉತ್ಸಾಹದಿಂದ ವಿರಾಜಿತವಾಗಿ ಬರುತ್ತಿದ್ದಾರೆ.
ಯಥಾಕಾಲದಲ್ಲಿ ಶಿಬಿಕೆಯು ಅರಮನೆಯ ಮುಂದೆ ಬಂತು. ಸುರಗುರುಗಳು ಶಿಬಿಕೆಯನ್ನು ಅರ್ಚಿಸಿದರು. ಶಿಬಿಕೆಯನ್ನು ಪುಷ್ಪವಸನರತ್ನಗಳಿಂದ ಇಂದ್ರವೈಭವಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಅಲಂಕಾರಕಾರ್ಯವನ್ನು ಶಚೀಂದ್ರರು ವಹಿಸಿ, ಇನ್ನಿಲ್ಲ ಎಂಬಂತೆ ಮಾಡಿದ್ದಾರೆ.
ಸಪ್ತರ್ಷಿಗಳು ಬಂದು ನಹುಷನನ್ನು ಹಸ್ತಲಾಘವ ಕೊಟ್ಟು ಕರೆದುಕೊಂಡು ಹೋಗಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದರು. ಆತನಿಗೆ ಅವರ ಹಸ್ತವನ್ನು ಮುಟ್ಟುತ್ತಲೇ ದೇಹಭಾವವು ಮರೆತುಹೋಗಿ ನಿರ್ವಿಕಲ್ಪ ಸಮಾಧಿಯು ಬರುತ್ತದೆ. ಆತನಿಗೆ ಅಂಗಾಂಗಗಳಲ್ಲೂ ರತ್ನಾಭರಣಗಳನ್ನು ಶೃಂಗರಿಸಿದ್ದಾರೆ. ಅರಸನ ಮುಖವೊಂದು ಬಿಟ್ಟು ಇನ್ನೇನೂ ಕಾಣುವಂತಿಲ್ಲ. ಅಲ್ಲಿ ಕುಳಿತಿರುವುದು ರತ್ನಾಭರಣ ರಂಜಿತವಾದ ಪುತ್ಥಳಿಯೋ, ಜೀವಂತವಾದ ವ್ಯಕ್ತಿಯೊ, ಅದೂ ಹೇಳುವಂತಿಲ್ಲ. ಬಹುಶಃ ಸಪ್ತರ್ಷಿಗಳ ಸಂಕಲ್ಪವಿರಬೇಕು, ಆತನ ದೇಹವನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗಿ ಕುಳ್ಳಿರಿಸಿದುದು.
ಪಲ್ಲಕ್ಕಿಯ ಬಲಮಗ್ಗುಲಲ್ಲಿ ಸ್ವಯಂ ಇಂದ್ರನು ವಾಯುವಿನೊಡನೆ ಪಲ್ಲಕ್ಕಿಯನ್ನು ಹಿಡಿದು ನಡೆದನು. ಪಲ್ಲಕ್ಕಿಯ ಎಡಮಗ್ಗುಲಲ್ಲಿ ಮಧ್ಯಮಲೋಕದ ಚಕ್ರವರ್ತಿಯಾದ ಯಯಾತಿಯು ಅಗ್ನಿಯೊಡನೆ ನಡೆದನು. ಸುರಗುರುವು ಪಲ್ಲಕ್ಕಿಯ ಮುಂದೆ ಕೊಂಬನ್ನು ಹಿಡಿದು ನಡೆದನು. ಪಲ್ಲಕ್ಕಿಯ ಹಿಂದೆ ಪುಟ್ಟರಥದಲ್ಲಿ ವಿರಜಾದೇವಿಯನ್ನು ಕುಳ್ಳಿರಿಸಿಕೊಂಡು ಶಚೀದೇವಿಯು ಸಾರಥಿಯಾಗಿ ಬಂದಳು. ಐರಾವತವೂ ಉಚ್ಛೈಶ್ರವವೂ ರಾಜಮರ್ಯಾದೆಗಳೊಡನೆ ಮುಂದೆ ನಡೆದುವು. ಚತುರಂಗ ಸೈನ್ಯವು ಹಿಂದೆಮುಂದೆ ನಡೆಯಿತು. ಗಂಧರ್ವಗಣವು ಸಂಗೀತವನ್ನು ಹಾಡಿತು. ಶುಕ್ರಾಚಾರ್ಯನು ಸ್ವಯಂ ನಿಂತು, ಋಷಿಗಣಗಳಿಂದ ಸಾಮವನ್ನು ಹಾಡಿಸುತ್ತ ವಿರಜಾದೇವಿಯ ರಥದ ಹಿಂದೆ ಬಂದನು.
ಅಂದಿನ ಶಿಬಿಕೋತ್ಸವದ ವೈಭವವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ಜ್ಞಾನಚಕ್ಷುಗಳಾದವರು ಮೇಲಿನಿಂದ ಪುಣ್ಯಾಹ ಶಕ್ತಿಗಳು, ತರಂಗ ತರಂಗವಾಗಿ ಇಳಿದು ಎಲ್ಲರಿಗೂ ಎಲ್ಲಕ್ಕೂ ನೆಲಕ್ಕೂ ಅಭಿಷೇಕಮಾಡಿ, ಪಾಪಶಕ್ತಿಗಳನ್ನು ಕಬಳಿಸುತ್ತಿರುವುದನ್ನು ನೋಡಿ, ‘ನಿಜ, ಸತ್ಪುರುಷರ ವೈಭವವು ಲೋಕಕಲ್ಯಾಣ ಕಾರಕವೆಂಬುದು ನಿಜ’ ಎಂದು ತಲೆದೂಗಿದರು. ಅಕಾರಣವಾಗಿ ಹರ್ಷವು ಎಲ್ಲೆಲ್ಲೂ ವರ್ಧಿಸುತ್ತಿದೆ. ದುಃಖವನ್ನು ಹೃದಯ ಮನಸ್ಸುಗಳಿಂದ ಸಮೂಲವಾಗಿ