ಬಿಸಿಲಿನ ಬಿಸಿ ಸ್ವಲ್ಪ ಸ್ವಲ್ಪ ಹೆಚ್ಚಾಗತೊಡಗಿತ್ತು. ಮೇಲೆ ನೋಡುತ್ತಾ ಮಹಾದೇವಿ ಹೇಳಿದಳು:
“ಆಗಲೇ ಬಿಸಿಲೇರುತ್ತಾ ಬಂತು. ಇವತ್ತು ಮಠಕ್ಕೆ ಬೇರೆ ಹೋಗಬೇಕು. ಸಾಕು, ಹೋಗೋಣ ಬನ್ನಿರೆ.”
“ನಿನ್ನೆ ಗುರುಗಳು ಬಂದರಂತೆ, ಇನ್ನು ಶಾಲೆಯೊಂದಲ್ಲದೆ ಮತ್ತೆ ಮಠದ ಯಾತ್ರೆ ಬೇರೆ ಪ್ರಾರಂಭವಾಯಿತಲ್ಲವೇ ನಿನಗೆ?” ದಾಕ್ಷಾಯಿಣಿ ಕೇಳಿದಳು.
“ಹೌದು, ನಾನು ಕಲಿತಿರುವ ವಚನಗಳನ್ನೆಲ್ಲಾ ಅವರಿಗೆ ಒಪ್ಪಿಸಬೇಕು. ಹೊಸ ವಚನಗಳನ್ನು ಕಲಿಯಬೇಕು. ಶಂಕರೀ, ನೀನೂ ಬರುತ್ತೀಯಾ ಶಾಲೆಗೆ?” ಉತ್ಸಾಹ ತುಂಬಿತ್ತು ಮಹಾದೇವಿಯ ಮಾತಿನಲ್ಲಿ.
“ನೀವೇ ಸರಿಯಮ್ಮ. ನಾನೂ ಶಾಲೆಗೆ ಹೋಗುತ್ತೇನೆ ಅಂತ ಕೇಳಿದರೆ ಮನೆಯಲ್ಲಿ ಹೇಳುತ್ತಾರೆ: ‘ನಿನಗೇತಕ್ಕೆ ಅದೆಲ್ಲಾ, ಓದು ಕಲಿತು ನೀನೇನು ಮಾಡುತ್ತೀ? ಹೆಣ್ಣು ಮಕ್ಕಳಿಗೆ ಅದೆಲ್ಲಾ ಬೇಕಾಗಿಲ್ಲ’ ಅಂತ” ಎಂದು ತನ್ನ ಅತೃಪ್ತ ಬಯಕೆಯನ್ನು ವ್ಯಕ್ತಪಡಿಸಿದಳು ಕಾತ್ಯಾಯಿನಿ.
“ಅವರೆಲ್ಲಾ ಹಾಗೇ. ಹೆಣ್ಣು ಮಕ್ಕಳು ಅಂದರೆ ಏನೋ ಅಸಡ್ಡೆ. ಯಾವಾಗಲೂ ಅಷ್ಟೆ. ಹೆಂಗಸರಿಗೆ ಇದೇಕೆ? ಹೆಂಗಸರಿಗೆ ಅದೇಕೆ? ಎನ್ನುತ್ತಾರೆ.” ಸಿಡುಕಿದಳು ಮಹಾದೇವಿ.
“ನಮ್ಮ ತಂದೆಯಂತೂ ಸರಿ. ತಾಯಿಯೂ ಹಾಗೆ ಹೇಳುತ್ತಾರೆ. ಅವರೂ ಹೆಂಗಸರೇ ಅಲ್ಲವೇ? ಅವರೇ ಹಾಗೆ ಹೇಳುತ್ತಾರಲ್ಲ?” ತನ್ನ ಸಂಶಯವನ್ನು ವ್ಯಕ್ತಪಡಿಸಿದಳು ಕಾತ್ಯಾಯಿನಿ.
“ಪಾಪ! ಅದೇ ರೀತಿಯಲ್ಲಿ ಬೆಳೆದಿದ್ದಾರೆ; ಹಾಗೆ ಹೇಳುತ್ತಾರೆ. ಅದನ್ನೆಲ್ಲಾ ಬದಲಾಯಿಸಿಬಿಡಬೇಕು.” ದಿಟ್ಟತನವಿತ್ತು ಮಹಾದೇವಿಯ ಮಾತಿನಲ್ಲಿ.
“ಓಹೋಹೋ, ಬಹಳ ಗಟ್ಟಿಗಳು! ಇನ್ನೊಂದು ವರ್ಷ ಹೋಗಲಿ, ನೀನು
ಬದಲಾಯಿಸುವುದು ಗೊತ್ತಾಗುತ್ತೆ. ಈಗೇನೋ ಇನ್ನೂ ಚಿಕ್ಕವಳು. ಸ್ವಲ್ಪ ಅವಕಾಶ ಕೊಟ್ಟಿದ್ದಾರೆ, ಅಷ್ಟೆ. ಆಗ ನೋಡು, ಇನ್ನೊಬ್ಬನ ಕೈಗೆ ಕೊಟ್ಟರೆ ಗೊತ್ತಾಗುತ್ತೆ ಬದಲಾಯಿಸೋದು” ಎಂದು ನಕ್ಕಳು ದಾಕ್ಷಾಯಿಣಿ.
“ನಿನ್ನನ್ನು ಈಗ ಕೊಡುತ್ತಿರುವ ಹಾಗೆ; ಅಲ್ಲವೇನೇ?” ನಗುವನ್ನು ಉಕ್ಕಿಸಿದಳು ಶಂಕರಿ.
ಹೀಗೆ ಅವರ ಪ್ರಯಾಣ ಹಿಂದಕ್ಕೆ ಮನೆಯ ಕಡೆಗೆ ಸಾಗಿತು.
ಪುಟ:Kadaliya Karpoora.pdf/೩೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೬
ಕದಳಿಯ ಕರ್ಪೂರ