ಪುಟ:ಕರ್ನಾಟಕ ಗತವೈಭವ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨೮

ಕರ್ನಾಟಕ-ಗತವೈಭವ


'ಕರ್ನಾಟಕ'ವೆಂಬ ಶಬ್ದವನ್ನುಚ್ಚರಿಸಿದೊಡನೆಯೇ ಮೈ ಮುಳ್ಳಿಡುವಷ್ಟು ರಾಷ್ಟ್ರೀಯತ್ವವು ನಮ್ಮ ಕನ್ನಡಿಗರಲ್ಲಿ ಇಷ್ಟು ದಿವಸ ವಿಕಾಸವಾಗಲಿಲ್ಲವೆಂಬ ಕಾರಣದಿಂದಲೋ, ಕರ್ನಾಟಕವು ತುಂಡುತುಂಡಾಗಿ ಹೋಗಿ ಅಖಂಡ ಕರ್ನಾಟಕವು* ಕಣ್ಣೆದಿರಿಗೆ ನಿಲ್ಲುವುದಿಲ್ಲೆಂಬ ಕಾರಣದಿಂದಲೋ, ನಮ್ಮ ಕನ್ನಡಿಗರು ತಮ್ಮ ಇತಿಹಾಸವನ್ನು ಕುರಿತು ಮೂಕ ಭಾವವನ್ನೇ ಅವಲಂಬಿಸಿದ್ದಾರೆ. ಮುಂಬಯಿ ಕರ್ನಾಟಕದವರು ಸಮೀಪದಲ್ಲಿರುವ ಮರಾಠಿ ಬಂಧುಗಳ ಅಭಿಮಾನಪೂರ್ವಕವಾದ ರಾಷ್ಟ್ರೀಯ ಪ್ರಯತ್ನಗಳಿಂದ ಜಾಗರೂಕರಾಗಿ ತಮ್ಮ ಭಾಷಾ ವಿಷಯದಲ್ಲಿ ಕೆಲವುಮಟ್ಟಿಗೆ ಅಭಿಮಾನಗೊಂಡವರಾಗಿದ್ದರೂ, ಆ ಅಭಿಮಾನವು ಭಾಷಾಕ್ಷೇತ್ರವನ್ನು ಮಾತ್ರವೇ ವ್ಯಾಪಿಸಿಕೊಂಡಿರುವುದಲ್ಲದೆ, ಹೆಚ್ಚು ವಿಸ್ತಾರವಾದ ಸ್ವರೂಪವು ಅದಕ್ಕೆ ಇಂದಿನವರೆಗೆ ಪ್ರಾಪ್ತವಾಗಿಲ್ಲ. ಉತ್ತರ ಕರ್ನಾಟಕದ ಬಿಕ್ಕಟ್ಟಿನ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿರಬಹುದು. ಅಥವಾ ಕಾಲವು ಅನುಕೂಲವಿರಲಿಲ್ಲವೆಂದೂ ಹೇಳಬಹುದು. ಅದು ಏನೇ ಇರಲಿ ; ಹಿಂದಿನ ೫೦-೬೦ ವರ್ಷಗಳಲ್ಲಿ, ಕರ್ನಾಟಕದಲ್ಲಿ ಪಂಡಿತರೇನೋ ಅನೇಕರು ಆಗಿಹೋದರು; ವಿದ್ವಾಂಸರೇನೋ ಕಡಿಮೆಯಾಗಲಿಲ್ಲ; ಭಾಷಾಭಿಮಾನಿಗಳೂ ಬಗೆಬಗೆಯಾಗಿ ತಲೆದೋರಿದರು; ಆದರೆ, ನಮ್ಮ ಕರ್ನಾಟಕವನ್ನು ಅಭಿಮಾನಕ್ಕೆ ಜೀವನವಾದ ಇತಿಹಾಸ ದೃಷ್ಟಿಯಿಂದ ಯಾರೂ ಅಭ್ಯಾಸಮಾಡಲಿಲ್ಲ, ಇದರ ಪರಿಣಾಮವೇನಾಯಿತೆಂದರೆ, ಕರ್ನಾಟಕರ ಮನಸ್ಸಿನಲ್ಲಿ ಭಾಷಾಭಿಮಾನವು ಕೆಲವು ಮಟ್ಟಿಗೆ ಬೇರೂರಿದರೂ, ಅದು ವ್ಯಕ್ತವಾಗಿ ಬೆಳೆಯಲಿಕ್ಕೆ ಬೇಕಾದ ಇತಿಹಾಸ ಜೀವನವು ಅವರಿಗೆ ದೊರೆಯದಿದ್ದುದರಿಂದ, ಆ ಬೇರು ಕಸುವಿಲ್ಲದೆ ಒಣಗ ಹತ್ತಿತು. ಇರಲಿ! ಇದು ಕನ್ನಡಿಗರ ಸ್ಥಿತಿಯಾಯಿತು, ಇನ್ನು, ಕನ್ನಡಿಗರೇ ಈ ವಿಷಯದಲ್ಲಿ ಉದಾಸೀನರಾಗಿದ್ದ ಬಳಿಕ, ಅದನ್ನು ಕಣ್ಣೆತ್ತಿ ನೋಡುವವರಾರು! ತಮ್ಮ ಜನರ ಇತಿಹಾಸವು ತಮಗೆ ಹೇಗೆ ಕಾಣುವುದು


* ಮೈಸೂರು ವಿಶ್ವವಿದ್ಯಾಲಯದವರು ತೀರ ಮೊನ್ನೆ, ಮೈಸೂರ ಇತಿಹಾಸ ಬರೆಯುವವರಿಗೆ ಬಹುಮಾನ ಕೊಡುವೆವೆಂದು ಜಾಹೀರ ಮಾಡಿದ ಸಂಗತಿಯನ್ನು ಓದಿ, ಯಾವ ಕನ್ನಡಿಗನಿಗೆ ಆನಂದವಾಗದೆ ಇದ್ದಿತು! ಆದರೆ, ರಾಷ್ಟ್ರದಲ್ಲಿ ನವಜೀವನವು ಸಂಚರಿಸುತ್ತಿರುವ ಇ೦ಥ ಕಾಲದಲ್ಲಿ ಮೈಸೂರ ಮಟ್ಟಿಗೆ ಸಂಕುಚಿತವಾದ ಅಭಿಮಾನವನ್ನು ತಾಳದೆ 'ಕರ್ನಾಟಕ'ದ ಅಭಿಮಾನವನ್ನು ತಾಳಿದ್ದರೆ ಎಷ್ಟು ಸೊಗಸಾಗುತ್ತಿತ್ತು!