ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧ನೆಯ ಪೂರಕ ಪ್ರಕರಣ, ಕರ್ನಾಟಕ-ಇತಿಹಾಸ-ಸಂಶೋಧನ
೧೨೭

ಕಾಲಕ್ರಮವಾಗಿ ಒಂದೊಂದು ತೆಗೆದುಕೊಂಡರೆ ಹೆಚ್ಚು ಒಳ್ಳೆಯದು. ಇಂಥಿಂಥ ಪುಸ್ತಕದಲ್ಲಿಯೇ ನಮ್ಮ ಇತಿಹಾಸದ ಅಂಶವು ದೊರೆಯುತ್ತದೆಂಬುದನ್ನು ಹೇಳುವುದು ಶಕ್ಯವಿಲ್ಲ. ಆದರೂ ಹಿಂದಿನ ಪ್ರಕರಣಗಳಲ್ಲಿ ಹೇಳಿದ ಇತಿಹಾಸದಿಂದ, ಯಾವ ದೃಷ್ಟಿಯಿಂದ ಆ ವಾಙ್ಮಯವನ್ನು ಓದಬೇಕಾಗುವುದೆಂಬುದು ಗೊತ್ತಾಗಿರಬಹುದು. ಯಾವುದೊಂದು ಪುಸ್ತಕವನ್ನೋದಿದ ಕೂಡಲೆ, ಅದರೊಳಗೆ ನಮ್ಮ ಅರಸರ ಹೆಸರುಗಳುಂಟೇ ಕರ್ನಾಟಕದ ಸುಧಾರಣೆಗೆ ಕೈ ಕೊಟ್ಟ ಜನರ ನಾಮ ನಿರ್ದೇಶವಿರುವುದೇ, ಆ ಪುಸ್ತಕವು ಎಂದು ಹುಟ್ಟಿತೆಂಬುದರ ಬಗ್ಗೆ ಅದರಲ್ಲಿ ಏನಾದರೂ ಆಧಾರವುಂಟೇ ಇವೇ ಮುಂತಾದ ಸಂಗತಿಗಳನ್ನು ಟಿಪ್ಪಣಿವಾಡಿ ಇಟ್ಟುಕೊಳ್ಳಬೇಕು. ಪುಸ್ತಕದ ಆರಂಭಕ್ಕೂ ಕೊನೆಗೂ ಗ್ರಂಥಕರ್ತರು ತಮ್ಮ ಕುಲಗೋತ್ರಗಳನ್ನು ಹೇಳಿಡುವ ಸಂಪ್ರದಾಯವಿರುತ್ತದೆ. ಆದುದರಿಂದ ಅತ್ತ ಲಕ್ಷ್ಯವಿಡಬೇಕು.

ಇನ್ನು ಎರಡನೆಯ ವರ್ಗದ ವಿಷಯವಾಗಿ ಎಂದರೆ ಪುರಾಣವನ್ನು ಸಂಶೋಧನದ ವಿಷಯವಾಗಿ ಮಾತ್ರ ಹೆಚ್ಚು ವಿಸ್ತರಿಸಿ ಹೇಳುವ ಅವಶ್ಯವಿದೆ. ಏಕೆಂದರೆ, ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಲಿಪಿಗಳೂ ಲೇಖಗಳೂ ಒಂದೇ ಕಡೆಗೆ ಸಂಕಲಿತವಾಗಿ ದೊರೆಯುವುದಿಲ್ಲ. ಅವು ಅನೇಕ ಪುಸ್ತಕಗಳಲ್ಲಿ ಹರಡಿರುತ್ತವೆ, ಮತ್ತು ಇಂದಿನವರೆಗೆ ಆಗಿಹೋದ ಪ್ರಯತ್ನಗಳ ಜ್ಞಾನವಿರದಿದ್ದರೆ, ನಮಗೆ ನಿಷ್ಕಾರಣವಾಗಿ ಶ್ರಮವುಂಟಾಗುವ ಸಂಭವವುಂಟೆಂದು ನನ್ನ ಸ್ವಂತ ಅನುಭವಕ್ಕೆ ಬಂದಿದೆ. ಇಂದಿನವರೆಗೆ ಎಷ್ಟು ಶಿಲಾಲಿಪಿಗಳು ಎಲ್ಲೆಲ್ಲಿ ಮುದ್ರಿತವಾಗಿವೆ, ಅವುಗಳ ಅರ್ಥವನ್ನು ಗೊತ್ತು ಹಚ್ಚಿರುವರೇ ಇಲ್ಲವೇ, ಇಲ್ಲದಿದ್ದರೆ, ಅವುಗಳ ಸಂಗ್ರಹವು ಯಾರ ಹತ್ತರವುಂಟು, ಶಿಲಾಲಿಪಿಗಳು ಯಾವ ಯಾವ ಸ್ಥಳದಲ್ಲಿ ಸಿಕ್ಕುತ್ತವೆ. ಇವೇ ಮುಂತಾದ ವಿಷಯಗಳನ್ನು ಕುರಿತು ಸವಿಸ್ತರವಾದ ಪುಸ್ತಕವೊಂದನ್ನು ರಚಿಸಿದರೆ ಮುಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗುವುದು. ಆದರೆ ಆ ಕಾರ್ಯವನ್ನು ತೃಪ್ತಿಕರವಾಗಿ ಮುಂದೆ ಯಾರು ಮಾಡುವರೋ ಮಾಡಲಿ; ಸದ್ಯಕ್ಕೆ ಹತ್ತು ಹನ್ನೆರಡು ವರ್ಷಗಳಲ್ಲಿ ಆಗಿಷ್ಟು ಈಗಿಷ್ಟು ಮಾಡಿದ ಅಭ್ಯಾಸದಿಂದ ನಮಗೆ ಪುಸ್ತಕಗಳಲ್ಲಿ ದೊರೆತ ಸಂಗತಿಗಳನ್ನು ಇಲ್ಲಿ ಅತಿ ಸಂಕ್ಷೇಪವಾಗಿ ಹೇಳಿಡುವೆವು.