ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು


"ಈಗ ನಮಗೆ ರಕ್ಷಣೆಯ ಅಗತ್ಯವೇನೂ ಇಲ್ವಲ್ಲ."
ನುರಿತ ರಾಜಕಾರಣಿ ಆ ಟೇಯ್ಲರ್,- ಬರಿಯ ವ್ಯಾಪಾರಿಯಲ್ಲ, ಸೇನಾನಿ ಮಾತ್ರವಲ್ಲ. ಆತನೆಂದ:
"ಛೆ! ಛೆ! ನೀವು ತಪ್ಪು ತಿಳಿದುಕೊಂಡಿರಿ. ನಮ್ಮದು ಮಿತ್ರರೊಳಗಿನ ಒಪ್ಪಂದ. ನಮಗೆ ಕಷ್ಟ ಬಂದರೆ ನೀವು ಸಹಾಯ ಮಾಡಿರಿ. ನಿಮಗೆ ಕಷ್ಟ ಬಂದರೆ ನಾವು ಮಾಡುತ್ತೇವೆ."
"ಹಾಗಾದರೆ ಆಗಬಹುದು."
ಆ ಭೇಟಿಯ ಅಂತ್ಯದಲ್ಲಿ ಒಪ್ಪಂದವಾಯಿತು. 'ಶ್ರೀ ದೇವರು ಸೂರ್ಯ ಚಂದ್ರ ಭೂಮಿ ಸಾಕ್ಷಿಯಾಗಿ' ಪರಸ್ಪರ ಮೈತ್ರಿಯನ್ನು ಜಾಹೀರು ಮಾಡಿದ ಕರಾರು ಪತ್ರ ಸಿದ್ಧವಾಯಿತು.
ಅದು ಸ್ನೇಹದ ಆಲಿಂಗನವಲ್ಲ; ಮರಣದ ಅಪ್ಪು ಹಿಡಿತ.
ಪ್ರಾಮಾಣಿಕನಾದ ಸ್ನೇಹಪರನಾದ ವೀರರಾಜೇಂದ್ರ ಅವರನ್ನು ಊರಿಗೆ ಕರೆದ.
"ಬನ್ನಿ ನಮ್ಮೂರಿಗೆ. ನಮ್ಮ ಆತಿಥ್ಯ ಸ್ವೀಕರಿಸಿ- ನಮ್ಮ ಕಾಡುಗಳಲ್ಲಿ ಬೇಟೆ ಸೊಗಸಾಗಿರ್ತೇತೆ. ಹೆಂಡತಿ ಮಕ್ಕಳನ್ನೂ ಕರಕೊಂಡು ಬನ್ನಿ. ನಾಲ್ಕು ದಿವಸ ಖುಷಿಯಾಗಿರಿ."
ಅವರು ಬಂದರು. ಮಡಿಕೇರಿಯಲ್ಲಿ ಆಂಗ್ಲ ಅತಿಥಿಗಳಿಗಾಗಿ ಅರಸ ಒಂದು ನಿವಾಸವನ್ನೆ ಕಟ್ಟಿಸಿದ. ಬಂದವರು ಬೇಟೆಯಾಡಿದರು. ತಂಪಾದ ಹವಾಮಾನ ವಿಲಾಯತಿಯ ನೆನಪು ಮಾಡಿಕೊಟ್ಟಿತು ಅವರಿಗೆ, ಎಷ್ಟು ಆಯ ಕಟ್ಟಿನ ಭೂಭಾಗ! ಮಲೆಯಾಳದವರು, ಕನ್ನಡ ಜಿಲ್ಲೆಯವರು, ಪೂರ್ವಕ್ಕೆ ಮೈಸೊರು ಸೀಮೆಯವರು - ಎಲ್ಲರನ್ನೂ ಬಿಗಿಹಿಡಿತದಲ್ಲಿರಿಸಿಕೊಳ್ಳಲು ಅತ್ಯಗತ್ಯವಾದ ಪ್ರದೇಶ....
ಅವರು ವೀರರಾಜೇಂದ್ರನಿಗೆಂದರು:
"ನೀವು ಬೇಟೆಯಾಡುವಾಗ ನಮ್ಮವರ ಹಾಗೆ ಮಿಲಿಟರಿ ಪೋಷಾಕು ಧರಿಸಿದರೆ ಚೆನ್ನಾಗಿರುತ್ತದೆ."
"ಹೌದೇ?"
ಕೊಡಗಿನ ಅರಸು ಆಂಗ್ಲರಂತೆ ಉಡುಪು ಧರಿಸಿದ ಒಮ್ಮೊಮ್ಮೆ. ಅದೂ ಒಂದು ಠೀವಿ.