ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೩೬ ನಡೆದದ್ದೇ ದಾರಿ
ಕೆಟ್ಟ ಹೆಸರು ಬರಲು, ತಾನು ಆಸ್ಪದ ಕೊಡಲಾರೆ. ಪರಕೀಯ ಗಂಡು ಹುಡುಗನೊಬ್ಬನಿಗೆ, ಅವನಪ್ಪ ತನ್ನ ಅಪ್ಪನ ಹಳೆಯ ಗೆಳೆಯನಾದರೇನಂತೆ, ಗಂಡಸು ಯಾವಾಗಲೂ ಪರಕೀಯನೇ- ಪತ್ರ ಬರೆಯುವುದು ಶಕ್ಯವಿಲ್ಲದ ಮಾತು.
ಆದರೆ ಹೀಗೆ ಮಾಡಬಹುದು ; ಪತ್ರ ಬರೆದು ಕೆಳಗೆ ತನ್ನ ಹೆಸರು ಬರೆಯದೇ ಬರೀ 'S' ಅಂತ ಬರೆಯಬಹುದು. ಅಂದರೆ ಆಕಸ್ಮಾತ್ ಶಂಕರ ಅದನ್ನು ಯಾರಿಗಾದರೂ ತೋರಿಸಿದರೂ ಅದು ತಾನು ಬರೆದದ್ದು ಅಲ್ಲವೇ ಅಲ್ಲ ಅಂತ ಹೇಳಿ ತಾನು ಪಾರಾಗಬಹುದು.ಸರಿ. ಇದೇ ಸರಿ. ಬರೆದೇ ಬಿಡಬೇಕು ಅವನಿಗೆ ಇನ್ನು ಮೇಲೆ ಹೀಗೆಲ್ಲ ಬರೆಯಬೇಡ, ಹೀಗೆಲ್ಲ ನನ್ನ ಬಗ್ಗೆ ತಿಳಿದುಕೊಳ್ಳಬೇಡ, ಅಂತ. ಇಂಗ್ಲೀಶ್ನ ನಲ್ಲೇ ಬರೆಯಬೇಕು. ತಾನೀಗ ಸಾಕಷ್ಟು ಇಂಗ್ಲೀಶ್ ಕಲಿತಿದ್ದೇನೆ. ಇನ್ನೆರಡು ವರ್ಷಕ್ಕೆ ಮ್ಯಾಟ್ರಿಕ್. ತನಗೇನು ಇಂಗ್ಲೀಶ್ ಬರುವುದಿಲ್ಲವೇ? ಆ ರವಿವಾರ ಮಧ್ಯಾಹ್ನವೆಲ್ಲ ಕೂತು ವಿಚಾರ ಮಾಡಿ ಪತ್ರ ಬರೆದು, ಹರಿದು ಹಾಕಿ, ಮತ್ತೆ ಬರೆದು, ಫೇರ್ ಕಾಪಿ ತಯಾರಿಸಿ ಒಮ್ಮೆ ಓದಿ ನೋಡಿದಳು. "Dear Shankar, (ಅವನಿಗೆ 'dearest' ಅಂತ ಬರೆಯುವುದಂತೂ ಸಾಧ್ಯವಿಲ್ಲ. ಅವನು ತನ್ನ ಉಳಿದ ಗೆಳೆಯ ಗೆಳತಿಯರಿಗಿಂತ ತನಗೆ ಹೆಚ್ಚು ಬೇಕಾದವನಾದುದರಿಂದ 'Dearer Shankar' ಅಂತೇನೋ ಬರೆಯಬಹುದಿತ್ತು. ಆದರೂ ಆದಷ್ಟೂ ಸರಳವಾಗಿರುವುದೇ ಒಳ್ಳೆಯದೆಂದು ಬರೀ 'dear' ಸಾಕು ಅಂತ ನಿರ್ಧರಿಸಿಯಾಗಿತ್ತು) When you leave Satara, I have already tell you not write me. Still you writing. You write no good things. Love not good for students. We live in society. So we should fear society. Students duty in society is study well. Therefore please do not lift the subject of love now. I have no bad love about you. My love = sister love. I get angry upon you if you write me. Therefore forget me. Forget bad love. Study hard. Pray God every night. He gives sleep to you. Jai Hind Yours- "S" -ಪತ್ರ ಪೋಸ್ಟ್ ಮಾಡಿ ಬಂದ ಆ ರಾತ್ರಿ ಶಾಂತಿಗೆ ಚೆನ್ನಾಗಿ ನಿದ್ರೆ ಬಂತು. * * *