ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫ನೆಯ ಪ್ರಕರಣ - ಸಾಧನ-ಸಾಮಗ್ರಿ
೩೫

ಗರು ತಮ್ಮ ಸ್ವಭಾವಾನುಗುಣವಾಗಿ ಅವನ್ನು ಮನಬಂದಂತೆ ಕಟಿದು ಕೆಡಿಸುತ್ತಾರೆ. ಹೀಗಾದ ಶಿಲಾಶಾಸನಗಳನ್ನು ನಾವು ಸಾವಿರಗಟ್ಲೆ ನೋಡಬಹುದು. ಅವುಗಳ ಮಹತ್ವವನ್ನರಿತವರಾದ ಸರ್ ಜಾರ್ಜ್ ಇಲಿಯೊಟ್‌, ಡಾ.ಫ್ಲೀಟ್, ಡಾ.ರೈಸ್ ಇವರಂಥ ಯುರೋಪಿಯ ಬಂಧುಗಳು ಮಾತ್ರ ಸಾವಿರಾರು ಲಿಪಿಗಳನ್ನು ಶ್ರಮಪಟ್ಟು ಉದ್ಧರಿಸಿದ್ದಾರೆ. ತೀರಿತು! ಮಿಕ್ಕವುಗಳೆಲ್ಲ ಹಾಗೇ ಮಣ್ಣು ಮುಕ್ಕುತ್ತ ಬಿದ್ದುಕೊಂಡಿವೆ. ಅವುಗಳ ದುರವಸ್ಥೆಯನ್ನು ಕಂಡು ಯಾವ ಇತಿಹಾಸಾಭಿಮಾನಿಯ ಕಣ್ಣುಗಳು ಅಶ್ರುಗಳಿಂದ ತುಂಬಿ ತುಳುಕದೆ ಇರಲಾರವು! ಹೀಗೆ ಇನ್ನಷ್ಟು ಮಣ್ಣಿನಲ್ಲಿ ಹುಗಿದು ಹೋಗಿರುವುವೋ ದೇವರೇ ಬಲ್ಲ! ಅನೇಕ ಶಿಲಾಲಿಪಿಗಳು ತಿಪ್ಪೆಯಲ್ಲಿ ಹೊರಳಾಡುವುದನ್ನೂ, ಬಾವಿಗಳಿಗೆ ಪಾವಟಿಗೆಗಳಾಗಿ ಬಿದ್ದಿರುವುದನ್ನೂ, ಗುಡಿ ಗುಂಡಾರಗಳಿಗೆ ತೊಲೆ ಬಂತೆಗಳಾಗಿರುವುದನ್ನೂ ಪ್ರಸ್ತುತ ಲೇಖಕನು ಕಣ್ಣಾರೆ ಕಂಡಿದ್ದಾನೆ! ಆದರೆ ಏನು ! ಅವುಗಳನ್ನುದ್ಧರಿಸುವ ಕಾರ್ಯವು ಒಬ್ಬಿಬ್ಬರಿಂದ ಸುಲಭ ಸಾಧ್ಯವೋ ? ಮೈಸೂರ ಸರಕಾರದವರಂತೆ ನಮ್ಮ ಸರಕಾರದವರ ಮನಸ್ಸಿನಲ್ಲಿ ಬಂದಾಗಲೇ ಆ ಕೆಲಸವು ಸುಲಭ ಸಾಧ್ಯವು, ಆದರೆ ಅಂಥಕಾಲವು ಬರುವವರೆಗೆ ನಾವು ಸುಮ್ಮನಿರಬೇಕೋ ? ಇಲ್ಲ, ನಾವು ಸಂಘ ಶಕ್ತಿಯಿಂದ ಆದಷ್ಟು ಮಟ್ಟಿಗೆ ಅವುಗಳನ್ನು ಕಾಲನ ಬಾಯಿಯಿಂದಲಾದರೂ ಉಳಿಸಿಕೊಂಡು ಮುದ್ರಿಸಿ ಇಡಬೇಕು. ಸುಲಭ ಸಾಧನಗಳುಳ್ಳ ಮಹಾರಾಷ್ಟಬಂಧುಗಳಿಗೆ ತಮ್ಮ ಇತಿಹಾಸವನ್ನು ಸಂಶೋಧಿಸಲಿಕ್ಕೆ ಪ್ರಸಿದ್ದ ಶೋಧಕರಾದ ಶ್ರೀ ರಾಜವಾಡೆಯಂಥ ನೂರಾರು ಜನರು ಬೇಕಾಗಿರುವರು. ಇನ್ನು ನಮ್ಮ ಇತಿಹಾಸಕ್ಕೆ ಎಷ್ಟು ರಾಜವಾಡೆಗಳು ಬೇಕಾಗುವರೆಂಬುದನ್ನು ನೀವೇ ಕಲ್ಪಿಸಿರಿ. ಅಂಥ ಜನರು ಹುಟ್ಟಿದ ದಿವಸವೇ ಕರ್ನಾಟಕಕ್ಕೆ ಮಂಗಲದಿವಸವು, ಅವರು ಯಾವಾಗ ಹುಟ್ಟುವರೋ ಹುಟ್ಟಲಿ! ಸದ್ಯಕ್ಕಂತೂ ನಾವು ಈ ಶಿಲಾಲಿಸಿಗಳನ್ನು ಮೆಟ್ಟ ತುಳಿಯುತ್ತಿದ್ದೇವೆ. ಯಾವ ಶಿಲಾಲಿಪಿಗಳನ್ನು ರಾಜರು ಮಹಾರಾಜರು ಪವಿತ್ರ ವಸ್ತುಗಳೆಂದು ಸಂರಕ್ಷಿಸುತ್ತಿದ್ದರೋ ಅವುಗಳಿಗೆ ಹಾದಿಹೋಕರು ಸಹ ವ್ಯಸನ ಪಡುವ ದುಸ್ಥಿತಿಯು ಬಂದೊದಗಿದೆ. ಕರ್ನಾಟಕ ಇತಿಹಾಸಕ್ಕೆ ಮುಖ್ಯ ಸಾಧನವಾದ ಇವುಗಳನ್ನು ಉದ್ದರಿಸುವುದೇ ಕನ್ನಡಿಗರ ಮೊದಲನೆಯ ಕಾರ್ಯವು.

ರ್ನಾಟಕ ಇತಿಹಾಸದ ಎರಡನೆಯ ಸಾಧನವಾವುವೆಂದರೆ ತಾಮ್ರಪಟ