ಪುಟ:ಕರ್ನಾಟಕ ಗತವೈಭವ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೫೦

ಕರ್ನಾಟಕ-ಗತವೈಭವ.


ಕಕ್ಕೆ ತಿಲಾಂಶವಾದರೂ ಸಂಬಂಧಿಸಿರಬಹುದೆಂಬ ಕಲ್ಪನೆಯೇ ಮನಸ್ಸಿನಲ್ಲಿ ಮೂಡುವುದಿಲ್ಲ. ಇಷ್ಟೇ ಅಲ್ಲ, ಅದನ್ನು ಓದುವವರಿಗೆ ಅದು ಮಹಾರಾಷ್ಟ್ರದ ಇತಿಹಾಸವೆಂತಲೇ ಭಾಸವಾಗುತ್ತದೆ. ಆದುದರಿಂದ ಅದನ್ನೋದುವ ಕನ್ನಡಿಗರು ಡಾಕ್ಟರರವರು ಆ ಪುಸ್ತಕವನ್ನು ತಮ್ಮ ಪ್ರಾಂತದ ಇತಿಹಾಸವೆಂಬ ದೃಷ್ಟಿಯಿಂದ ಬರೆದಿದ್ದರೂ ಅದು ಮುಖ್ಯವಾಗಿ ಕರ್ನಾಟಕದ ಇತಿಹಾಸವೇ ಆಗಿರುತ್ತದೆಂಬ ಭಾವನೆಯನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು ಅದನ್ನು ಓದಬೇಕೆಂದು ನಾವು ಒತ್ತಾಯದಿಂದ ಸೂಚಿಸುತ್ತೇವೆ. ಇರಲಿ, ಕರ್ನಾಟಕದ ಹಳೆಯ ಇತಿಹಾಸಕ್ಕೆ ಈಗ ಆಧಾರ ಭೂತವಾಗಿರುವ ಇವೆರಡು ಗ್ರಂಥಗಳ ಕರ್ತರಿಗೆ ನಾವೆಲ್ಲರೂ ಅತ್ಯಂತ ಋಣಿಗಳಾಗಿದ್ದೇವೆ.

ರಾ. ಬಿ. ಸೂರ್ಯನಾರಾಯಣರಾವ ಮತ್ತು ಮಿ. ಸಿವೆಲ್ಲ ಸಾಹೇಬರು ಬರೆದ ವಿಜಯನಗರದ ಇತಿಹಾಸಗಳು ಕನ್ನಡಿಗರಿಗೆ ಸಾಮಾನ್ಯತಃ ಗೊತ್ತಿರುವುದರಿಂದ ಅವುಗಳ ಬಗ್ಗೆ ಹೆಚ್ಚಿಗೆ ಬರೆಯುವ ಕಾರಣವಿಲ್ಲ.

ಶುದ್ದ ಕನ್ನಡಿಗರಲ್ಲಿ, ಕೇವಲ ಕರ್ನಾಟಕದ ಅಭಿಮಾನದಿಂದ ಈ ವಿಷಯವನ್ನು ಅಭ್ಯಾಸಮಾಡಿದವರು ನಮಗೆ ಪೂಜ್ಯರಾದ ರಾ. ವೆಂಕಟ ರಂಗೋ ಕಟ್ಟಿ ಎಂಬವರೇ ! ಇವರು ತಮ್ಮ ಉತ್ಕಟವಾದ ದೇಶಾಭಿಮಾನದಿಂದ ಕರ್ನಾಟಕದ ಸೇವೆಯನ್ನು ಮಾಡಿರುವುದರಿಂದ ಇವರ ಹೆಸರನ್ನು ಯಾವ ಕನ್ನಡಿಗನೂ ಮರೆಯುವಂತಿಲ್ಲ. ಇವರು ಸರಕಾರೀ ನವಕರಿಯಲ್ಲಿದ್ದಾಗ, ಸರಕಾರದವರ ಅಪ್ಪಣೆಯ ಮೇರೆಗೆ ಕರ್ನಾಟಕ ಗ್ಯಾಝಟಿಯರನ್ನು ಕನ್ನಡದಲ್ಲಿ ಸರಸವಾಗಿ ಭಾಷಾಂತರಿಸಿರುವರು. ಇದು ನಮ್ಮ ಇತಿಹಾಸವನ್ನು ಅಭ್ಯಾಸಮಾಡುವವರಿಗೆ ಅವಶ್ಯವಾದ ಪುಸ್ತಕವು. ಇದಲ್ಲದೆ, ಇವರು ಚಿಕ್ಕದೊಂದು ಕರ್ನಾಟಕದ ಇತಿಹಾಸವನ್ನು ಬರೆದಿರುವರು.

ರಾ. ಪಾಠಕರವರಿಗೆ ಶಿಲಾಲಿಪಿಗಳ ಮೇಲೆ ಬಲು ಪ್ರೀತಿ, ಇವರು ೨೫-೩೦ ವರ್ಷಗಳಿಂದ ಈ ಲಿಪಿಶೋಧನದ ಕೆಲಸವನ್ನು ಆಗಾಗ ಮಾಡುತ್ತ ಬಂದಿರುತ್ತಾರೆ. ಈಗಲೂ ಅವರು ಆ ವ್ಯವಸಾಯವನ್ನು ಬಿಟ್ಟಿಲ್ಲ.