ಆಕೆಗೆ ಗೊತ್ತಾಗಿತ್ತು. ಆದರು ಬೇಕೆಂತಲೇ ಡುಕ್ಕು ಹೊಡೆದಿದ್ದಳು. ಸೊಸೆ ತನ್ನ ಕೋಣೆಗೆ ಹೊರಟುಹೋದಮೇಲೆ, ಆಕೆ ಎದ್ದು ಕುಳಿತು ತನ್ನ ಕಾಲಿನ ಕರೆಯನ್ನು ಬಿಚ್ಚಿ, ಬೀಗತಿಯ ಕಾಲಬೆರಳಿಗೆ ಕಟ್ಟಿದಳು. ಅದು ಆಕೆಗೆ ಗೊತ್ತಾಗಲಿಲ್ಲ. ಗಡದಾಗಿ ನಿದ್ದೆ ಹತ್ತಿತ್ತು.
ದೊಡ್ಡ ನಸುಕಿನಲ್ಲೆದ್ದು ಆತನು ಕರೆಕಟ್ಟಿದ ಕಾಲುಳ್ಳ ಮುದುಕಿಯನ್ನು ಅದೇ ಹಾಸಿಗೆಯಲ್ಲಿ ಸುತ್ತಿ ಬಿಗಿದು, ಹೊತ್ತುಕೊಂಡು ಹೊಳೆಯಕಡೆಗೆ ನಡೆದನು. ಜೊತೆಯಲ್ಲಿ ಹೆಂಡತಿಯೂ ಇದ್ದಳು. ಹೊಳೆಯಲ್ಲಿ ಒಂದುಕಡೆಗೆ ನೀರು ಬಹಳವಿದ್ದವು. ಅಲ್ಲಿಗೆ ಹೋಗಿ ತಲೆಯಮೇಲಿನ ಗಂಟನ್ನು ಚೆಲ್ಲಿಕೊಟ್ಟ ಬಳಿಕ
"ಪೀಡೆ ತೊಲಗಿತು" ಎಂದು ಹೆಂಡತಿ ಸಮಾಧಾನದ ಉಸಿರು ಹಾಕಿದಳು.
ಅವರು ತಮ್ಮ ಕೆಲಸ ಮುಗಿಸುವ ಹೊತ್ತಿಗೆ ನಸುಕು ಹರಿದು ಬೆಳಗಾಗತೊಡಗಿತು. ಗಂಡ ಹೆಂಡರು ಮನೆಯಅ ಹಾದಿ ಹಿಡಿದರು.
ಎಂಥದೋ ಮೌನದಲ್ಲಿ ಅರ್ಧದಾರಿ ಮರಳಿ ಬಂದ ಮೇಲೆ "ಮನಸಿನಂತೆ ಮಹಾದೇವ" ಎಂದಳು ಹೆಂಡತಿ.
"ಮನೆಗೆ ಹೋದ ಬಳಿಕ ತಿಳಿಯುವದು" ಗಂಡನ ಪಡಿನುಡಿ.
ಹೆಂಡತಿಗೆ ಅದೇನೋ ದಿಗಿಲು. ಮತ್ತೆ ಅದೇ ಮೌನದಲ್ಲಿ ಮನೆಗೆ ಬರುವಷ್ಟರಲ್ಲಿ ತನ್ನತ್ತೆಯೆ ಬಾಗಿನಿಂತು, ಬಾಗಿಲಮುಂದೆ ಕಸಗುಡಿಸುವುದನ್ನು ಕಂಡು ತಬ್ಬಿಬ್ಬಾದಳು. ಆದರೆ ಯಾರಿಗೆ ಹೇಳುವುದು, ಏನೆಂದು ಹೇಳುವುದು. ಹೊಳೆಯ ಪಾಲಾದವಳು ಗಂಡನ ತಾಯಾಗಿರದೆ ತನ್ನ ತಾಯಿಯೇ ಆಗಿದ್ದಾಳೆಂದು ಬಗೆದು ಒಳಗಿನದೊಳಗೇ ದುಃಖಿಸಿದಳು. ಆಡಿತೋರಿಸಲು ಸಾದ್ಯವೇ?
ಹೆಂಡತಿಯ ಅತ್ತೆಯನ್ನು ಹೊತ್ತೊಯ್ದು ಹೊಳೆಕಾಣಿಸುವುದನ್ನು ಬಿಟ್ಟು ತನ್ನತ್ತೆಯನ್ನು ಹೊತ್ತೊಯ್ಯುವ ಪ್ರಸಂಗ ಬಂದುದು ಆಶ್ಚರ್ಯವೆಂದು ಬಗೆದ ಗಂಡನಿಗು ಅದರ ಕೀಲು ತಿಳಿದಿರಲಿಲ್ಲ.