ಪುಟ:Hosa belaku.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೩೪


"ಕೆಲಸ ಕಡೆಗೆ, ಮೊದಲು ಹಣವೆಷ್ಟು ಬೇಕು ಕೇಳು?"

"  ?"

"ಆಯಿತು; ೫೦೦ ರೂಪಾಯಿ ಕೊಡುತ್ತೇನೆ. ಎಲ್ಲಿಯೂ ಬಾಯಿ ಬಿಡಬೇಡ."

೫೦೦ ರೂಪಾಯಿ ಎಂದ ಕೂಡಲೇ ಸುಬ್ಬ ಗಗನಕ್ಕೆಯೇ ಹಾರಿಹೋದ. ಆ ಉತ್ಸಾಹದಲ್ಲಿ "ಕೆಲಸವೇನು, ಬೇಗ ಹೇಳಿ" ಎಂದ.

ಆ ಯುವಕ ಸಮಾಧಾನವಾಗಿಯೇ ಹೇಳತೊಡಗಿದ: "ನಾನು ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಆಗರ್ಭ ಶ್ರೀಮಂತ, ಅಲ್ಲಿ ಒಬ್ಬ ಸಹಾಧ್ಯಾಯಿನಿಯ ಜತೆಯಲ್ಲಿ ಪ್ರಣಯ ಬೆಳೆಯಿತು. ಆ ಪ್ರಣಯ, ಆ ಹುಡುಗಿ ಗರ್ಭವತಿಯಾಗುವವರೆಗೂ ಸಾಗಿತು ಗರ್ಭ ನಿರೋಧಕ್ಕಾಗಿ ಎಷ್ಟು ಔಷಧಿಗಳನ್ನು ಬಳಿಸಿದರೂ, ಪರಿಣಾಮ ಸರಿಯಾಗಲಿಲ್ಲ. ಅವಳು ನಿನ್ನೆಯೇ ಗಂಡು ಕೂಸನ್ನು ಹೆತ್ತಿದ್ದಾಳೆ. ಅಷ್ಟರ ಸಲುವಾಗಿ ಕ್ಯಾಂಟೋನಮೆಂಟಿನಲ್ಲಿ ಈ ಮನೆಯನ್ನು ಬಾಡಿಗೆಗಾಗಿ ತೆಗೆದುಕೊಂಡಿದ್ದೇನೆ. ಈಗ ಅವಳು, ಆ ಕೂಸು ಈ ಬದಿಕೋಣೆಯಲ್ಲಿದ್ದಾಳೆ, ನಿನ್ನ ಮುಖ್ಯ ಕೆಲಸವೆಂದರೆ ಆ ಕೂಸನ್ನು ಇಂದು ರಾತ್ರಿ ಎಲ್ಲಿಯಾದರೂ ದೂರ ಒಯ್ದು ಎಸೆದು ಬಿಡುವದು––"

ಕೇಳುತ್ತಿರುವಂತೆ ಮೈ ತುಂಬ ಬೆವೆತ ಸುಬ್ಬ ಒಮ್ಮೆಲೆ, "ಜೀವಂತ ಕೂಸನ್ನು ಒಗೆಯುವದು ನನ್ನಿಂದಾಗದ ಮಾತು" ಎಂದು ಹೇಳಿದ.

"ಕೂಸು ಜೀವಂತವಿಲ್ಲ. ಅದು ಭೂಮಿಯ ಮೇಲೆ ಬರುತ್ತಲೂ ಅದರ ತಾಯಿ ಅದರ ಕತ್ತನ್ನು ಹಿಸುಕಿದ್ದಾಳೆ. ನಿನ್ನ ಕೆಲಸ ಇನ್ನೂ ಸುಲಭ. "

"......"

"ಏಕೆ ಸುಮ್ಮನೇ ನಿಂತೆ? ೫೦೦ ರೂಪಾಯಿ ಕಡಿಮೆ ಬೀಳುತ್ತಿದ್ದರೆ ಇದೊಂದು ನೂರು, "೬೦೦ ರೂಪಾಯಿಗಳು ಸುಬ್ಬನ ಕಿಸೆ ಸೇರಿದವು. ಸುಬ್ಬ ಮುಗ್ಧನಾಗಿ ನಿಂತುಬಿಟ್ಟ. ಒಂದೆಡೆ ಪಾಪ, ಇನ್ನೊಂದೆಡೆ ೬೦೦ ರೂಪಾಯಿಗಳ ನೋಟು. ಇವುಗಳ ನಡುವೆ ಸುಬ್ಬ ಪೇಚಾಡತೊಡಗಿದ್ದ.