ಹಳ್ಳಿ ಸಿಕ್ಕಿತು. ಆ ಹಳ್ಳಿಯ ಅಗಸೆಬಾಗಿಲನ ದೊಡ್ಡ ಅರಳಿಯ ಮರದ ಕಟ್ಟೆಯ ಮೇಲೆ ಕುಳಿತ ನಾಲ್ಕು ಜನರ ಕಣ್ಣುಗಳು ಇವಳತ್ತ ತಿರುಗಿದವು. ಮಹಾದೇವಿ ಅದಕ್ಕೆ ಗಮನವನ್ನು ಕೊಡದೆ ತನ್ನ ಮಾರ್ಗವನ್ನು ಮುಂದುವರಿಸಿದಳು. ಹಳ್ಳಿಯನ್ನು ಪ್ರವೇಶಿಸದೆ, ನೇರವಾದ ದೊಡ್ಡ ರಸ್ತೆಯನ್ನು ಹಿಡಿದು, ಹಾಗೆಯೇ ಮುಂದೆ ನಡೆದಳು. ಅಲ್ಲಿ ರಸ್ತೆ, ಪೂರ್ವದ ಕಡೆ ತಿರುಗಿ ಮುಂದುವರಿಯುತ್ತಿತ್ತು.
ಅದಾದನಂತರ ಇನ್ನೂ ಒಂದು ಹಳ್ಳಿ ಸಿಕ್ಕಿತು. ಅದೂ ಹಿಂದಾಯಿತು. ಈ ವೇಳೆಗಾಗಲೇ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಕಿರಣಗಳನ್ನು ಸುರಿಸತೊಡಗಿದ್ದ. ಕಾದ ನೆಲ ಮಹಾದೇವಿಯ ಅಂಗಾಲುಗಳಿಗೆ ಬರೆಯನ್ನು ಕೊಟ್ಟಂತಾಗುತ್ತಿತ್ತು. ಮರಗಿಡಗಳೆಲ್ಲ ಬಿಸಿಲಿನ ತಾಪದಿಂದ ಬಾಗಿ ನಿಂತು ತಮ್ಮ ಕಾಲುಗಳ ಬಳಿಯಲ್ಲಿಯೇ ತಮ್ಮ ನೆರಳನ್ನು ಚೆಲ್ಲಿಕೊಂಡಿದ್ದುವು. ಅವುಗಳ ಬುಡವನ್ನು ಸೇರಿ ಸಾಧ್ಯವಾದೆಡೆಗಳಲ್ಲೆಲ್ಲಾ ಅವುಗಳ ಆಶ್ರಯವನ್ನು ಪಡೆಯುತ್ತಾ ಮಹಾದೇವಿ ಮುಂದೆಮುಂದೆ ನಡೆಯುತ್ತಿದ್ದಳು.
ದೇಹ ಆಯಾಸಗೊಂಡಿತ್ತು. ಗಂಟಲು ಒಣಗಿತ್ತು. ಹೆಜ್ಜೆಗಳು ಮುಂದೆ ಅಡಿಯನ್ನಿಡಲಾರದೆ ತತ್ತರಿಸುತ್ತಿದ್ದವು. ಅಷ್ಟರಲ್ಲಿ ಇನ್ನೊಂದು ಹಳ್ಳಿ ಗೋಚರಿಸಿತು.
ಈ ಊರಿನ ಮುಂಭಾಗದಲ್ಲಿ ಒಂದು ಸಣ್ಣ ಕಲ್ಯಾಣಿ. ಅದರ ಸಮೀಪದಲ್ಲಿಯೆ ಹಳೆಯ ಮಂಟಪದಂತಹ ಒಂದು ಚಾವಡಿಕಟ್ಟೆ. ಅದರ ಸುತ್ತ ನಾಲ್ಕಾರು ಮಾವಿನ ಗಿಡಗಳು ಬೆಳೆದುನಿಂತಿದ್ದುವು. ಬಿಸಿಲಿನಲ್ಲಿ ದಣಿದು ಬಂದ ಮಹಾದೇವಿಗೆ ಆ ಸ್ಥಳ ಬಹಳ ಆಕರ್ಷಕವಾಗಿ ಕಂಡಿತು.
ಕಲ್ಯಾಣಿಯಲ್ಲಿಳಿದು ಮುಖ ತೊಳೆದುಕೊಂಡಳು. ನೀರು ಶುಭ್ರವಾಗಿ ತಿಳಿಯಾಗಿದ್ದು ಕುಡಿಯಬಹುದೆಂಬಂತೆ ತೋರಿತು. ಕುಡಿದಳು. ಬಿಸಿಲಿನಲ್ಲಿ ಬಳಲಿದ ದೇಹಕ್ಕೆ ತುಂಬಾ ಹಿತಕರವಾಗಿತ್ತು ಆ ಪಾನೀಯ.
ಕಲ್ಯಾಣಿಯಿಂದ ಮೇಲಕ್ಕೆ ಬಂದಳು. ಸೆರಗಿನ ತುದಿಯಿಂದ ಮುಖವನ್ನೊರಸಿಕೊಳ್ಳುತ್ತಾ ಚಾವಡಿ ಕಟ್ಟೆಯ ನೆರಳಿನ ಕಡೆಗೆ ನಡೆಯತೊಡಗಿದಳು.
ತನ್ನ ಬೆನ್ನಮೇಲೆಲ್ಲಾ ಹರಡಿದ್ದ ನೀಳವಾದ ಕೂದಲುಗಳನ್ನು ಸರಿಪಡಿಸಿಕೊಳ್ಳುತ್ತಾ ಮಹಾದೇವಿ ಸುತ್ತಲೂ ನೋಡಿದಳು.
ಅದೊಂದು ನಾಡಹೆಂಚಿನ ಮೇಲ್ಛಾವಣಿಯನ್ನುಳ್ಳ, ಅತಿ ಹಳೆಯ ಚಪ್ಪರದಂತಹ ಕಟ್ಟಡವಾಗಿತ್ತು. ದೊಡ್ಡ ದೊಡ್ಡ ಮರದ ತೊಲೆಗಳನ್ನು ಹಾಕಿ, ಎತ್ತರವಾಗಿ ಮತ್ತು ಭದ್ರವಾಗಿ ಕಟ್ಟಿದ್ದರು. ಸರಿಸುಮಾರಾಗಿ ಅದರ ಮಧ್ಯೆ ಒಂದು ಎತ್ತರವಾದ ಕಟ್ಟೆ ; ಅದರ ಸುತ್ತಲೂ ವಿಸ್ತಾರವಾದ ಜಾಗವಿತ್ತು.