ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೪೫


‘ಚನ್ನಮಲ್ಲಿಕಾರ್ಜುನನಿಗೂ ಎತ್ತಣಿಂದ ಎತ್ತ ಸಂಬಂಧ ! ಶ್ರೀ ಗುರುವಿನ ಮೂಲಕ ಕರಸ್ಥಲಕ್ಕೆ ಬಂದ. ಶರಣರ ಆನುಭಾವದ ಸಂಗದಿಂದ ಮನಸ್ಥಲವನ್ನು ಪ್ರವೇಶಿಸಿದ. ಹೃದಯವನ್ನು ವ್ಯಾಪಿಸಿದ; ನನ್ನನ್ನೇ ಇಲ್ಲದಂತೆ ಮಾಡಿದ’ ಎಂದುಕೊಂಡಳು.

ಈ ಐಕ್ಯಭಾವದ ನಿಲುವಿನಲ್ಲಿಯೇ ಮಹಾದೇವಿಯ ಪ್ರಯಾಣ ಸಾಗುತ್ತಿತ್ತು. ದೇಹದ ಪರಿಮಿತವಾದ ವಲಯವನ್ನು ಮೀರಿ ನಿಂತು, ಅಪರಿಮಿತವಾದ ಶಕ್ತಿಯನ್ನು ಪಡೆದ ಮಹಾದೇವಿಗೆ, ಪ್ರಕೃತಿಯೇ ಕೈಂಕರ್ಯವನ್ನು ಕೈಕೊಂಡು, ಅದಾವ ರೂಪದಿಂದಲೂ ಬಂದು ಅವಳ ಅವಶ್ಯಕತೆಗಳನ್ನು ಪೂರ್ಣಗೊಳಿಸಿಕೊಡುತ್ತಿತ್ತು.

ಕೆಲವು ದಿನಗಳು ಕಳೆಯುವುದರೊಳಗಾಗಿ ಕನ್ನಡನಾಡನ್ನು ದಾಟಿ ತಾನು ಮುಂದೆ ನಡೆಯುತ್ತಿರುವುದು ಅವಳ ಅನುಭವಕ್ಕೆ ಬರತೊಡಗಿತು. ಬರುಬರುತ್ತಾ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿತ್ತು. ತನಗೆ ಅಷ್ಟಾಗಿ ತಿಳಿಯದ ಭಾಷೆಯೊಡನೆ ವ್ಯವಹರಿಸಬೇಕಾಯಿತು ಮಹಾದೇವಿ.

ಪ್ರಭುದೇವ ಇದನ್ನು ಅವಳಿಗೆ ತಿಳಿಸಿಯೇ ಇದ್ದ. ಮಹಾದೇವಿಗೆ ಭಾಷೆಯ ತೊಡಕಿನಿಂದ ವಿಶೇಷ ತೊಂದರೆಯೇನೂ ಆಗಲಿಲ್ಲ. ಎಲ್ಲವನ್ನೂ ಮೀರಿ ನಿಂತ ಅವಳ ನಿಲವು, ಭಾವವನ್ನು ಭಾಷೆಯನ್ನಾಗಿ ಪರಿವರ್ತಿಸುತ್ತಿತ್ತು. ಅವಳ ದಿವ್ಯ ವ್ಯಕ್ತಿತ್ವದಿಂದ ಆಕರ್ಷಿತರಾದ ಜನ ತಾವಾಗಿ ಬಂದು ಅವಳ ಸೇವೆಗೆ ನಿಲ್ಲುತ್ತಿದ್ದರು.

ಉಟ್ಟ ತೆಳು ಕಾವಿಯ ಬಣ್ಣದ ಸೀರೆ, ಅವಳ ವೈರಾಗ್ಯದ ಕಾಂತಿಯ ಕಿಡಿಯನ್ನು ರಕ್ಷಿಸುವಂತೆ ಕಾಣುತ್ತಿತ್ತು. ಅದರ ಮೇಲೆ ವಿಶಾಲವಾಗಿ ಹರಡಿದ ತಲೆಯ ಕೂದಲು ಬೆನ್ನು ಮೇಲೆಲ್ಲಾ ವ್ಯಾಪಿಸಿ ದೇಹವನ್ನೇ ಮುಚ್ಚಿರುವಂತೆ ತೋರುತ್ತಿದ್ದವು. ಮುಂಗೈಯಲ್ಲಿ ರುದ್ರಾಕ್ಷಿಯ ಕಂಕಣ, ಕೊರಳಲ್ಲಿ ರುದ್ರಾಕ್ಷಿಯ ಸರ, ಸಂಸಾರದ ವ್ಯಾಮೋಹವನ್ನು ಸುಟ್ಟು ಬೊಟ್ಟಿಟ್ಟ ಪವಿತ್ರತೆಯ ಸಂಕೇತವೆಂಬಂತೆ ಹಣೆಯ ಮೇಲೆ ತ್ರಿಪುಂಡ್ರಧಾರಣೆ. ಎಲ್ಲಕ್ಕಿಂತ ಮಿಗಿಲಾಗಿ ಚನ್ನಮಲ್ಲಿಕಾರ್ಜುನನ ಜ್ಯೋತಿರ್ಲಿಂಗದ ಕಾಂತಿಯನ್ನೇ ಅಡಕಗೊಳಿಸಿಕೊಂಡಂತೆ ತೇಜಃಪುಂಜವಾಗಿ ಹೊಳೆಯುತ್ತಿರುವ ಕಣ್ಣುಗಳು - ಎಂತಹವರನ್ನೂ ಮುಗ್ಧರನ್ನಾಗಿ ಮಾಡುತ್ತಿದ್ದುವು.

ಅವಳ ಸೇವೆಯನ್ನು ಮಾಡುವ ಭಾಗ್ಯವನ್ನು ಹಂಚಿಕೊಳ್ಳುವುದಕ್ಕೆ ಆಂಧ್ರ ದೇಶದ ಭಕ್ತಜನರಲ್ಲಿ, ಸಂತೋಷದ ಸ್ಪರ್ಧೆ ಕಂಡುಬರುತ್ತಿತ್ತು. ಯಾರ ಆತಿಥ್ಯವನ್ನೂ ವಿಶೇಷವಾಗಿ ಸ್ವೀಕರಿಸದೆ ಮಹಾದೇವಿ ಶ್ರೀಗಿರಿಯತ್ತ ನಡೆಯುತ್ತಿದ್ದಳು.

ಆತ್ಮಕೂರಿನಿಂದ ಮುಂದೆ ಶ್ರೀಶೈಲಪರ್ವತಶ್ರೇಣಿಗಳು ಪ್ರಾರಂಭವಾಗುತ್ತವೆಂದು ಗುರುಲಿಂಗದೇವರು ಹೇಳಿದ್ದರು. ಮತ್ತು ಪ್ರಭುದೇವ